More

    ಸಂಪಾದಕೀಯ| ಸಾಧಕ ಬಾಧಕ ಪರಿಶೀಲನೆ ಸೂಕ್ತ

    ವಿದ್ಯಾರ್ಥಿಗಳ ಪರೀಕ್ಷಾ ಒತ್ತಡ ನಿವಾರಣೆ ಜತೆಗೆ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಉತ್ತಮ ಅವಕಾಶಗಳನ್ನು ನಿರ್ವಿುಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ತೀರ್ವನಕ್ಕೆ ಬಂದಿದೆ. ಆದರೆ ಇಲಾಖೆಯ ಈ ಕ್ರಮಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಸ್ವರಗಳು ಕೇಳಿಬಂದಿವೆ.

    ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಹೆಚ್ಚಿನ ಅವಕಾಶ ಕಲ್ಪಿಸಿದಂತಾಗಬಹುದು. ಆದರೆ, ಉತ್ತೀರ್ಣರಾದ ವಿದ್ಯಾರ್ಥಿಗಳು ನೀಟ್, ಸಿಇಟಿ, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಹೆಸರಾಂತ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕೆಂಬ ಕಾರಣಕ್ಕೆ ಹೆಚ್ಚು ಅಂಕ ಗಳಿಕೆಗೆ ಮತ್ತೆ ಮತ್ತೆ ಪ್ರಯತ್ನಿಸುವ ಒತ್ತಡ ಬೀಳಲಿದೆ.

    ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳಲು ಮತ್ತು ಸಮಯದ ನಿರ್ಬಂಧಗಳಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗಲಿದೆ. ಪೂರಕ ಪರೀಕ್ಷೆ ಬದಲಿಗೆ ವಾರ್ಷಿಕ ಪರೀಕ್ಷೆ ಹೆಸರಿನಲ್ಲಿ 3 ಅವಕಾಶಗಳನ್ನು ನೀಡುತ್ತಿರುವುದರಿಂದ ವಿದ್ಯಾರ್ಥಿಯ ಕಾರ್ಯಕ್ಷಮತೆ ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸಿದಂತಾಗುತ್ತದೆ ಎಂದು ಶಿಕ್ಷಣ ಇಲಾಖೆ ಹೇಳಿಕೊಂಡಿದೆ. ಮೂರು ವಾರ್ಷಿಕ ಪರೀಕ್ಷೆ ನಡೆಸುವುದರಿಂದ ಶೈಕ್ಷಣಿಕ ಚಟುವಟಿಕೆಗಳು ಹಾಗೂ ವೃತ್ತಿಪರ ಕೋರ್ಸ್​ಗಳ ಪ್ರವೇಶ ಪ್ರಕ್ರಿಯೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಕರೊನಾ ಸಮಯದಲ್ಲಿನ ಪರಿಸ್ಥಿತಿಯೇ ಪುನರಾವರ್ತನೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

    ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ಅನುಕೂಲಕ್ಕೆ ಬಹುಸಂಖ್ಯಾತ ವಿದ್ಯಾರ್ಥಿಗಳ ಹಿತ ನಿರ್ಲಕ್ಷಿಸಿ ಸಂಪೂರ್ಣ ಪರೀಕ್ಷಾ ವ್ಯವಸ್ಥೆಯನ್ನು ಹಾಳು ಮಾಡಿದಂತಾಗುತ್ತದೆ. ಈಗಾಗಲೆ ಪರೀಕ್ಷೆ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗಿದ್ದು, ಈಗ ಮತ್ತೆ 3 ಪರೀಕ್ಷೆ ನಡೆಸುವುದರಿಂದ ಕಲಿಕಾ ಗುಣಮಟ್ಟವೂ ಕಳಪೆಯಾಗಲಿದೆ ಎಂದು ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ.

    ದ್ವಿತೀಯ ಪಿಯು ಪ್ರಶ್ನೆಪತ್ರಿಕೆಗಳು ಪದೇಪದೆ ಬಹಿರಂಗವಾಗಿ ಸಮಸ್ಯೆಯಾದಾಗ ಸಿಇಟಿ ವ್ಯವಸ್ಥೆ ಜಾರಿಗೆ ಬಂದಿದೆ. ಸಿಇಟಿಯಲ್ಲಿ ಪಿಯುಸಿ ಮತ್ತು ಸಿಇಟಿಯ ತಲಾ ಶೇ.50 ಅಂಕಗಳನ್ನು ಪರಿಗಣಿಸಿ ರ್ಯಾಂಕ್ ನೀಡಲಾಗುತ್ತದೆ. ವಿದ್ಯಾರ್ಥಿಗಳು ಹೆಸರಾಂತ ಕಾಲೇಜಿನಲ್ಲಿ ಪ್ರವೇಶದ ಉದ್ದೇಶದಿಂದ ಮೊದಲ ಪರೀಕ್ಷೆಯ ಅಂಕ ತೃಪ್ತಿಯಾಗದಿದ್ದರೆ, ಮತ್ತೊಂದು ಪರೀಕ್ಷೆ ಬರೆಯಲು ನಿರ್ಧರಿಸಬಹುದು. ಇದೇ ರೀತಿ 3 ಪರೀಕ್ಷೆಗಳು ಮುಗಿದು ಫಲಿತಾಂಶ ಪ್ರಕಟವಾಗುವವರೆಗೆ ವೃತ್ತಿಪರ ಕೋರ್ಸ್​ಗಳ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸಬೇಕಾಗುತ್ತದೆ ಎಂಬ ಅಭಿಪ್ರಾಯವೂ ಇದೆ.

    ಪರೀಕ್ಷಾ ಮಂಡಳಿಗೆ ಮಾರ್ಚ್​ನಿಂದ ಸೆಪ್ಟೆಂಬರ್​ವರೆಗೂ ಪರೀಕ್ಷೆಯನ್ನೇ ನಡೆಸುವುದು ಕೆಲಸವಾಗಲಿದೆ. ಅಂದರೆ, ವರ್ಷದಲ್ಲಿ 7 ತಿಂಗಳು ಪರೀಕ್ಷೆ ನಡೆಸಬೇಕಾಗುತ್ತದೆ. ಈ ಪರೀಕ್ಷೆಗಳ ಜತೆಗೆ ಮರುಮೌಲ್ಯಮಾಪನ, ಅಂಕಗಳ ಮರು ಎಣಿಕೆ, ಅಂಕಪಟ್ಟಿ ವಿತರಣೆ ಕೆಲಸದಿಂದ ಸಿಬ್ಬಂದಿ ಮೇಲೆ ಕಾರ್ಯದೊತ್ತಡ ಹೊರೆಯಾಗಲಿದೆ ಎಂಬ ಆತಂಕ ಮೌಲ್ಯಮಾಪಕರಿಂದ ವ್ಯಕ್ತವಾಗಿದೆ.

    ಮೂರು ಪರೀಕ್ಷೆಗಳನ್ನು ನಡೆಸುವ ಬಗ್ಗೆ ಅಪಸ್ವರಗಳು ಕೇಳಿಬಂದಿರುವುದರಿಂದ ಸರ್ಕಾರ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು. ವಿದ್ಯಾರ್ಥಿಗಳು ಮತ್ತು ಪಾಲಕರ ಅಭಿಪ್ರಾಯಗಳನ್ನೂ ಪರಿಗಣಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಈ ವರ್ಷ ಜಾರಿ ಮಾಡುವುದು, ವಿರೋಧ ಎಂಬ ಕಾರಣಕ್ಕೆ ಮುಂದಿನ ವರ್ಷ ರದ್ದುಪಡಿಸುವ ಪ್ರಮೇಯ ಬಂದರೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದಂತಾಗಲಿದೆ. ಸರ್ಕಾರ ಇದಕ್ಕೆ ಅವಕಾಶ ನೀಡದಿರುವುದು ಒಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts