More

    ಮತದಾರರ ಸೆಳೆಯಲು ಇನ್ನಿಲ್ಲದ ಪ್ರಯತ್ನ

    ಶಿವಮೊಗ್ಗ:ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮೇ 5ರ ಸಂಜೆ ತೆರೆ ಬಿದ್ದ ಬಳಿಕ ಸೋಮವಾರ ದಿನವಿಡೀ ಮನೆ ಮನೆ ಪ್ರಚಾರ ಬಿರುಸಾಗಿ ನಡೆಯಿತು. ಬಿರುಬಿಸಿಲನ್ನೂ ಲೆಕ್ಕಿಸದೇ ಕಾರ್ಯಕರ್ತರ ದಂಡು ಮತದಾರರ ಗಮನ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿತು.

    ಚುನಾವಣೆಗೆ ಎರಡು ದಿನಗಳು ಬಾಕಿ ಇರುವಾಗಲೇ ರಾಜಕೀಯ ಲೆಕ್ಕಾಚಾರಗಳು ಬುಡಮೇಲಾಗುವ ಸಾಧ್ಯತೆಗಳು ಜಾಸ್ತಿ. ಏಕೆಂದರೆ ಗುಪ್ತ ಪ್ರಚಾರಕ್ಕಿರುವ ಶಕ್ತಿಯೇ ಅಂತದ್ದು. ಬಹಿರಂಗ ಪ್ರಚಾರ ಮುಕ್ತಾಯವಾಗುತ್ತಲೇ ರಾಜಕೀಯ ಪಕ್ಷಗಳು ಅಂತರಂಗ ಪ್ರಚಾರ, ಗುಪ್ತ ಪ್ರಚಾರ ಮುಂತಾದ ಮಾರ್ಗಗಳನ್ನು ಅನುಸರಿಸಿದವು.
    ಮತ ಬೀಳುವ ಸಂದೇಹವಿರುವ ಪ್ರದೇಶ, ಸಮುದಾಯ ಮುಂತಾದ ಕಡೆಗೆ ಎರಡು ದಿನಗಳನ್ನು ರಾಜಕೀಯ ಪಕ್ಷಗಳ ಮುಖಂಡರು ಮೀಸಲಿಟ್ಟರು. ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ಎಲ್ಲ ರೀತಿಯ ಪ್ರಯತ್ನಗಳಿಗೂ ಮುಂದಾಗುವುದು ಮತದಾನದ ಮುನ್ನಾ ದಿನದ ವಾಸ್ತವ ಸಂಗತಿ.
    ಯಾವ ಸಮಾಜದ ಮುಖಂಡರಿಗೆ ಯಾರಿಂದ ಹೇಳಿಸಬೇಕು. ಎಲ್ಲೆಲ್ಲಿ ಮತಗಳನ್ನು ಒಡೆಯಬೇಕು. ಅದಕ್ಕಾಗಿ ಯಾವ ತಂತ್ರ ಅನುಸರಿಸಬೇಕು. ಹೀಗೆ ಹಲವು ಸಂಗತಿಗಳ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ರಣತಂತ್ರ ರೂಪಿಸಿ ಬಹುತೇಕ ಅವುಗಳನ್ನು ಕಾರ್ಯಗತಗೊಳಿಸುತ್ತಾರೆ.
    ಮನೆ ಮನೆ ಪ್ರಚಾರದ ಮೂಲಕ ಅಂತಿಮ ಕ್ಷಣದಲ್ಲಿ ಮತದಾರರ ಮನವೊಲಿಸುವ ಜವಾಬ್ದಾರಿ ಕಾರ್ಯಕರ್ತರ ಹೆಗಲೇರಿತ್ತು. ಒಂದು ರೀತಿಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಅಗ್ನಿ ಪರೀಕ್ಷೆಯಾಗಿತ್ತು. ಮನೆ ಮನೆ ಪ್ರಚಾರದಲ್ಲಿ ಯಶಸ್ಸು ಕಾಣದಿದ್ದರೆ ನಿರೀಕ್ಷಿತ ಫಲಿತಾಂಶ ಲಭ್ಯವಾಗದು ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದರಿಂದ ಬೂತ್ ಮಟ್ಟದಲ್ಲಿ ಮನೆ ಮನೆ ಪ್ರಚಾರಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ ನೀಡಲಾಯಿತು.
    ಪ್ರಮುಖರ ಮತ ಶಿಕಾರಿ: ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಮತಯಾಚಿಸಿದರು. ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅನೇಕ ಮತದಾರರನ್ನು ಭೇಟಿಯಾದರು. ಬಿಜೆಪಿ ಕಾರ್ಯಕರ್ತರ ಪಡೆ ಗ್ರಾಪಂ ಹಂತದಲ್ಲಿ ವಿವಿಧ ತಂಡಗಳಾಗಿ ಮನೆ ಮನೆ ಪ್ರಚಾರ ನಡೆಸಿತು. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಸೊರಬ ತಾಲೂಕಿನ ಹೊಸಬಾಳೆ ಮುಂತಾದ ಗ್ರಾಮಗಳಿಗೆ ತೆರಳಿ ಮತ ಕೇಳಿದರು.
    ಪ್ರಮುಖ ಅಭ್ಯರ್ಥಿಗಳು ಕೊನೆಯ ದಿನವೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದರೆ ಬಹುತೇಕ ಪಕ್ಷೇತರ ಅಭ್ಯರ್ಥಿಗಳು ಪ್ರಚಾರ ಕಣದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ನಾಮಪತ್ರ ಸಲ್ಲಿಸಿದ ಬಳಿಕ ಈವರೆಗೂ ಕೆಲವರು ಸುದ್ದಿಗೋಷ್ಠಿಗಳಿಗೆ ಸೀಮಿತವಾದರು. ಇನ್ನುಳಿದವರು ಬ್ಯಾಲೆಟ್‌ಗೆ ಸೀಮಿತರಾದರು. ಮನೆ ಮನೆ ಪ್ರಚಾರದಲ್ಲೂ ಪಕ್ಷೇತರರ ತೊಡಗಿಕೊಳ್ಳುವಿಕೆ ನಿರಾಶಾದಾಯಕವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts