More

    ಪೆನ್‌ಡ್ರೈವ್ ಪ್ರಕರಣ ಸಿಬಿಐಗೆ ಒಪ್ಪಿಸಲಿ: ಆರಗ ಆಗ್ರಹ

    ಶಿವಮೊಗ್ಗ: ಅಶ್ಲೀಲ ವಿಡಿಯೋ ಪ್ರಕರಣವನ್ನು ಎಸ್‌ಐಟಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಹೀಗಾಗಿ ಸಿಬಿಐಗೆ ವಹಿಸುವುದು ಸೂಕ್ತ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

    ಎಸ್‌ಐಟಿಯಲ್ಲಿ ಸಮರ್ಥ ಅಧಿಕಾರಿಗಳಿದ್ದಾರೆ. ಆದರೆ ಕೆಲವರ ಒತ್ತಡಕ್ಕೆ ಮಣಿದು ಕೆಲಸ ಮಾಡುವಂತಾಗಿದೆ. ಸಂತ್ರಸ್ತ ಮಹಿಳೆಯರ ಮಾನ ಹರಾಜಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
    ಇದು ಹಳೆಯ ಪ್ರಕರಣ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ದಾಗಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಕರಣದ ಬಗ್ಗೆ ಸುಳಿವಿತ್ತು. ಈಗ ಎನ್‌ಡಿಎ ಮೈತ್ರಿಕೂಟಕ್ಕೆ ರಾಜಕೀಯವಾಗಿ ಹಾನಿ ಮಾಡಬೇಕೆಂಬ ಕಾರಣದಿಂದ ಚುನಾವಣೆ ಸಂದರ್ಭ ಪ್ರಸ್ತಾಪ ಮಾಡಲಾಗಿದೆ ಎಂದರು.
    ಪ್ರಕರಣದ ಹಿಂದೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದಾರೆ. ನೈಜ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ. ಪೆನ್‌ಡ್ರೈವ್ ಹಂಚುವುದು ಮತ್ತು ಮಹಿಳೆಯರ ಬಗ್ಗೆ ಅಪಪ್ರಚಾರ ಮಾಡುವುದು ಸಹ ಶಿಕ್ಷಾರ್ಹ ಅಪರಾಧ. ಮಲೇಷ್ಯಾದಲ್ಲಿ ಪೆನ್‌ಡ್ರೈವ್‌ಗಳು ತಯಾರಾಗಿವೆ ಎಂಬ ಮಾತು ಕೇಳಿಬರುತ್ತಿದೆ. ಈ ಪ್ರಕರಣದ ಕಬಂಧಬಾಹುಗಳು ದೇಶ, ವಿದೇಶಗಳಲ್ಲಿ ಹರಡಿರುವುದರಿಂದ ಮತ್ತು ಇದೊಂದು ಅತ್ಯಂತ ದೊಡ್ಡ ಪ್ರಕರಣ ಆಗಿರುವುದರಿಂದ ಕೂಡಲೇ ಸಿಬಿಐಗೆ ಒಪ್ಪಿಸುವುದು ಸೂಕ್ತ ಎಂದು ತಿಳಿಸಿದರು.
    ವಕೀಲ ದೇವರಾಜೇಗೌಡ ಚುನಾವಣೆ ಪೂರ್ವದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಪತ್ರ ಬರೆದಿರುವ ಮಾಹಿತಿ ನನಗಿಲ್ಲ. ಆದರೆ ಕಾಂಗ್ರೆಸ್‌ನವರಿಗೆ ಇದರ ಬಗ್ಗೆ ನಾಲ್ಕು ವರ್ಷಗಳ ಹಿಂದೆಯೇ ತಿಳಿದಿತ್ತು. ಇಷ್ಟು ವರ್ಷ ಸುಮ್ಮನಿದ್ದವರು ಈಗ ಏಕೆ ಪೆನ್‌ಡ್ರೈವ್ ಬಿಡುಗಡೆ ಮಾಡಿದರು ಎಂಬುದೇ ಪ್ರಶ್ನೆಯಾಗಿದೆ ಎಂದರು.
    ಸಾವಿರಾರು ಪೆನ್‌ಡ್ರೈವ್‌ಗಳನ್ನು ಹಂಚಿ ರಾಜಕಾರಣ ಮಾಡಲು ಹೊರಟಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಮಾಡಿದವರನ್ನು ನಾನು ಬೆಂಬಲಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಕೂಡಾ ಇದನ್ನೇ ಹೇಳಿದ್ದಾರೆ. ಇಳಿವಯಸ್ಸಿನಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ ಘನತೆ ಕುಗ್ಗಿಸಲು ಸಿಎಂ ಹಾಗೂ ಡಿಸಿಎಂ ಷಡ್ಯಂತ್ರ ಮಾಡಿದ್ದಾರೆ. ಗೌಡರಿಗೆ ಮಾನಸಿಕ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts