More

    ಕರಾಳ ಘಟನೆ: ಗೌರವಯುತವಾಗಿ ಅಧಿಕಾರ ಹಸ್ತಾಂತರವಾಗಬೇಕು…

    ವಿಶ್ವದ ಅತಿ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕದಲ್ಲಿ ಅಧಿಕಾರದ ಸಂಘರ್ಷ ಅತ್ಯಂತ ಕಹಿಘಟನೆಗೆ ಸಾಕ್ಷಿಯಾಗಿದ್ದು, 207 ವರ್ಷಗಳ ನಂತರ ಹಿಂಸಾಚಾರ ಮರುಕಳಿಸಿದೆ. ಅಲ್ಲಿನ ಚುನಾವಣೆ ವ್ಯವಸ್ಥೆ, ದೀರ್ಘ ಪ್ರಕ್ರಿಯೆ, ಅದರಲ್ಲಿನ ಗೊಂದಲ, ಗೋಜಲುಗಳನ್ನು ನೋಡಿದಾಗಲೇ ಭಾರತದ ಚುನಾವಣೆ ವ್ಯವಸ್ಥೆ ಎಷ್ಟು ಶಕ್ತಿಶಾಲಿ ಮತ್ತು ಪಾರದರ್ಶಕವಾಗಿದೆ ಎಂಬ ಸಂಗತಿ ಇನ್ನಷ್ಟು ಸ್ಪಷ್ಟಗೊಂಡಿತ್ತು. ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಚುನಾವಣೆ ಸುಗಮವಾಗಿ ನಡೆದು, ಫಲಿತಾಂಶದ ಬಳಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ವಿಳಂಬವಿಲ್ಲದೆ ನಡೆಯುತ್ತದೆ.

    ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಗೆಲುವನ್ನು ಅಧಿಕೃತಗೊಳಿಸಲು ಅಲ್ಲಿನ ಸಂಸತ್ತು ಸೇರಿತ್ತು. ಆ ಸಂದರ್ಭದಲ್ಲೇ ಅಮೆರಿಕದ ಪ್ರಜಾತಂತ್ರದಲ್ಲಿ ಕರಾಳ ಘಟನೆ ನಡೆದು, ಕಪು್ಪಚುಕ್ಕೆ ಅಂಟಿಕೊಂಡಿದೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ಸ್​ನಲ್ಲಿ ನಡೆಸಿದ ಹಿಂಸಾಚಾರ, ದಾಂಧಲೆಯಿಂದ ಹಲವರು ಪ್ರಾಣವನ್ನೂ ಕಳೆದು ಕೊಂಡಿದ್ದಾರೆ. ಇಂಥದ್ದೊಂದು ಹಿಂಸೆ ನಡೆಯುವ ಸಾಧ್ಯತೆಯನ್ನು ಅಮೆರಿಕ ಮಾಧ್ಯಮಗಳು ಕೆಲ ದಿನಗಳ ಹಿಂದೆಯೇ ವ್ಯಕ್ತಪಡಿಸಿದ್ದವು. ಇದಕ್ಕೆ ಕಾರಣ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಠಮಾರಿ ಹಾಗೂ ಅವಿವೇಕತನದ ಧೋರಣೆ. ನವೆಂಬರ್ 3ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆ ಬಳಿಕ ನಡೆದ ಮತಎಣಿಕೆಯಲ್ಲಿ ಟ್ರಂಪ್ 232, ಬೈಡೆನ್ 306 ಸ್ಥಾನ (ಸ್ಪಷ್ಟ ಬಹುಮತ) ಪಡೆದುಕೊಂಡರು. ಆದರೆ, ಟ್ರಂಪ್ ಸೋಲು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಕೋರ್ಟ್ ಮೆಟ್ಟಿಲು ಹತ್ತಿ ಮುಖಭಂಗ ಅನುಭವಿಸಿದರು. ಆ ಬಳಿಕವೂ ಅಧಿಕಾರ ಉಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಅನುಸರಿಸಿದರು. ಅದ್ಯಾವವೂ ಫಲ ನೀಡದಿದ್ದಾಗ ಕೊನೆಗೆ ಹರಡಿದ್ದು ಹಿಂಸಾಚಾರವನ್ನು.

    ಚುನಾವಣೆಗಳು ಪ್ರಜಾತಂತ್ರದ ಆರೋಗ್ಯವನ್ನು ಕಾಪಾಡುವ ಅಸ್ತ್ರಗಳು. ಚುನಾವಣೆ ಎಂದ ಮೇಲೆ ಒಂದು ಪಕ್ಷ ಗೆಲ್ಲಬೇಕು, ಇನ್ನೊಂದು ಸೋಲಬೇಕು. ಚುನಾವಣೆ ಸಮಯದಲ್ಲೇ ರಾಜಕೀಯ ಪಕ್ಷಗಳು ತೀವ್ರ ಆರೋಪ-ಪ್ರತ್ಯಾರೋಪ ನಡೆಸುತ್ತವೆ. ಜನರ ಮನಗೆಲ್ಲಲು ಎಲ್ಲ ಬಗೆಯ ಕಸರತ್ತುಗಳನ್ನು ಮಾಡುತ್ತವೆ. ಆದರೆ, ಇವು ಚುನಾವಣೆಗಷ್ಟೇ ಸೀಮಿತವಾಗಿರಬೇಕು. ಫಲಿತಾಂಶ ಬಂದ ಮೇಲೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮನ್ನಣೆ ನೀಡುತ್ತ, ಗೌರವಯುತವಾಗಿ ಅಧಿಕಾರ ಹಸ್ತಾಂತರ ಮಾಡಬೇಕು. ಅಮೆರಿಕದಲ್ಲಿ ಈ ಹಿಂದೆ ಇದೇ ಪರಂಪರೆ ನಡೆದುಕೊಂಡು ಬಂದಿದೆ. ಆದರೆ, ಅದಕ್ಕೆ ಚ್ಯುತಿ ತರುವಂಥ ಘಟನೆ ನಡೆದಿರುವುದು ದುರದೃಷ್ಟಕರ. ಜೋ ಬೈಡೆನ್ ಜನವರಿ 20ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಪರಿಸ್ಥಿತಿ ಕೈಮೀರಿದ ಮೇಲೆ ಟ್ರಂಪ್ ಸೋಲನ್ನು ಒಪ್ಪಿಕೊಂಡಿದ್ದಾರೆ.

    ಜಾಗತಿಕ ನಾಯಕರು ಈ ಹಿಂಸಾಚಾರ ಘಟನೆಯನ್ನು ಖಂಡಿಸಿದ್ದಾರೆ. ಆದರೆ, ರಾಜಕೀಯ ಪಕ್ಷಗಳ ಮತ್ತು ಅದರ ನಾಯಕರ ಮನಸ್ಥಿತಿ ಬದಲಾಗುವವರೆಗೂ ಇಂಥ ಘಟನೆಗಳನ್ನು ತಡೆಯುವುದು ಕಷ್ಟ. ಮುಂದೆಂದೂ ಈ ಬಗೆಯ ಘಟನೆ ನಡೆಯದಂತೆ ಅಮೆರಿಕ ಪಾಠ ಕಲಿಯಬೇಕಿದೆ. ಜಗತ್ತು ಮತ್ತೊಮ್ಮೆ ಭಾರತದ ಪ್ರಜಾತಂತ್ರ ಶಕ್ತಿಯನ್ನು, ಇಲ್ಲಿನ ಅಂತಃಸತ್ವವನ್ನು ಹೆಮ್ಮೆಯಿಂದ ಅವಲೋಕಿಸುವ ಸಂದರ್ಭವೂ ಇದರಿಂದ ಬಂದೋದಗಿದೆ. ಹೊಸ ಅಧ್ಯಕ್ಷರ ಅವಧಿಯಲ್ಲಾದರೂ ಅಮೆರಿಕ ಮತ್ತೆ ತನ್ನ ಘನತೆಯನ್ನು ಕಂಡುಕೊಳ್ಳಲಿ. ರಾಜಕೀಯ ವೈಷಮ್ಯ, ವೈಮನಸ್ಸುಗಳು ಮರೆಯಾಗಲಿ. ಅಧಿಕಾರ ಹಸ್ತಾಂತರವನ್ನು ಟ್ರಂಪ್ ಇನ್ನಷ್ಟು ಕ್ಲಿಷ್ಟಗೊಳಿಸದೆ ಹೊಸ ಅಧ್ಯಕ್ಷರ ಆಡಳಿತಕ್ಕೆ ದಾರಿ ಮಾಡಿಕೊಡಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts