More

    ಪ್ರಚಾರ ಸಭೆ ನಡೆಸಲು ಪೂರ್ವಾನುಮತಿ ಕಡ್ಡಾಯ:ಹೆಗಡೆ

    ಶಿವಮೊಗ್ಗ: ಲೋಕಸಭೆ ಚುನಾವಣೆ ಅಭ್ಯರ್ಥಿಗಳು ಪ್ರಚಾರ ಸಭೆಗಳನ್ನು ನಡೆಸಲು ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿರುವ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಅನುಮತಿ ಪಡೆಯಲು ಕಾರ್ಯಕ್ರಮಕ್ಕೂ 48 ತಾಸು ಮುನ್ನ ಅರ್ಜಿ ಸಲ್ಲಿಸಬೇಕು. 24 ತಾಸಿನೊಳಗೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

    ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಾತಿ, ಸಮುದಾಯ, ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ. ವಸತಿ ಪ್ರದೇಶಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಪ್ರಚಾರ ನಡೆಸುವ ಮಾರ್ಗ ನಕ್ಷೆಯನ್ನು ನಿಖರವಾಗಿ ನೀಡಿದರೆ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಹೇಳಿದರು.
    ದ್ವೇಷ ಭಾಷಣ, ವ್ಯಕ್ತಿಯ ಕುರಿತು ಅವಹೇಳನಕಾರಿ ಭಾಷಣ ಮಾಡುವಂತಿಲ್ಲ. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಜಿಲ್ಲಾ ಮಟ್ಟದಲ್ಲಿ ಚುನಾವಣಾಧಿಕಾರಿಗಳು ಮತ್ತು ತಾಲೂಕು ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಬಳಿ ಅನುಮತಿ ಪಡೆಯಬೇಕು ಎಂದರು.
    ಮಾಧ್ಯಮಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ನೀಡುವ ಮುನ್ನ ಎಂಸಿಸಿ ಮುಂದೆ ಜಾಹೀರಾತು ವಿಷಯ ನೀಡಿ ದೃಢೀಕರಣ ಪಡೆಯಬೇಕು. ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಲು ಮತದಾನ ಮುಕ್ತಾಯಕ್ಕೆ ನಿಗದಿಯಾದ ಸಮಯಕ್ಕಿಂತ 48 ಗಂಟೆ ಮುಂಚಿತವಾಗಿ ದೃಢೀಕರಣ ಪಡೆಯುವುದು ಕಡ್ಡಾಯ. ಕರಪತ್ರಗಳನ್ನು ಪ್ರಕಟಿಸುವ ಅಭ್ಯರ್ಥಿಗಳು ಮುದ್ರಕರ ಹೆಸರು, ಮುದ್ರಿಸುವ ಪ್ರತಿಗಳ ಸಂಖ್ಯೆಯನ್ನು ಘೋಷಿಸಿ ವಿತರಣೆಗೆ ಅನುಮತಿ ಪಡೆಯಬೇಕು ಎಂದು ಹೇಳಿದರು.
    ವೆಚ್ಚ ವೀಕ್ಷಕ ಸರೋಜ್‌ಕುಮಾರ್ ಬೆಹೆರ ಮಾತನಾಡಿ, ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ನಡೆಸಲು ಅಭ್ಯರ್ಥಿಗಳ ಸಹಕಾರ ಅಗತ್ಯ. ಚುನಾವಣಾ ವೆಚ್ಚ ನಿರ್ವಹಣೆಗೆ ಸಂಬಂಧಿಸಿ ನೆರವು ನೀಡಲು ವೆಚ್ಚ ವೀಕ್ಷಕರು ಲಭ್ಯವಿರುತ್ತಾರೆ. ಇದಕ್ಕಾಗಿ ಮೀನಾಕ್ಷಿ ಸಿಂಗ್(ಮೊ. 8904703613) ಅವರನ್ನು ಸಂಪರ್ಕಿಸಬಹುದು ಎಂದರು.
    ವೆಚ್ಚ ನೋಡಲ್ ಅಧಿಕಾರಿ ಪ್ರಶಾಂತ ನಾಯಕ ಅಭ್ಯರ್ಥಿಗಳು ಚುನಾವಣಾ ವೆಚ್ಚ ನಿರ್ವಹಿಸುವ ಪ್ರಕ್ರಿಯೆ ಕುರಿತು ವಿವರಿಸಿದರು. ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ವೆಚ್ಚದ ಮಿತಿ 95 ಲಕ್ಷ ರೂ. ಆಗಿರುತ್ತದೆ. ಚುನಾವಣಾ ವೆಚ್ಚ ನಿರ್ವಹಿಸಲು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು ಎಂದರು. ವೆಚ್ಚ ವೀಕ್ಷಕಿ ಮೀನಾಕ್ಷಿ ಸಿಂಗ್, ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts