More

    ಅಭಿವೃದ್ಧಿಗಿರಲಿ ಆದ್ಯತೆ; 31ನೇ ಜಿಲ್ಲೆಯಾಗಿ ವಿಜಯನಗರ

    ಪರ-ವಿರೋಧದ ವ್ಯಾಪಕ ಕಸರತ್ತುಗಳ ಬಳಿಕ ಕೊನೆಗೂ ಬಳ್ಳಾರಿ ಜಿಲ್ಲೆ ವಿಭಜನೆಯಾಗಿ ವಿಜಯನಗರ ಹೊಸ ಜಿಲ್ಲೆಯಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಸೋಮವಾರ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಉದಯವಾಗಿದೆ. ಹೊಸಪೇಟೆ ಇದರ ಮುಖ್ಯ ಕೇಂದ್ರ. ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ, ಕನ್ನಡ ವಿಶ್ವವಿದ್ಯಾಲಯದಿಂದಾಗಿ ಹೊಸ ಜಿಲ್ಲೆ ವಿಶೇಷವಾಗಿ ಗುರುತಿಸಿಕೊಳ್ಳಲಿದೆ. ಬಳ್ಳಾರಿ ಜಿಲ್ಲೆ ಅಖಂಡವಾಗಿ ಇರಬೇಕು ಎಂದು ಪ್ರತಿಭಟನೆಗಳು ನಡೆಯುತ್ತಿದ್ದರೆ, ಆಡಳಿತಾತ್ಮಕ ಅನುಕೂಲ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ಸರ್ಕಾರದ ಸಮರ್ಥನೆ. ಭೌಗೋಳಿಕವಾಗಿ ಪಶ್ಚಿಮ ತಾಲೂಕುಗಳೆಂದು ಗುರುತಿಸಲಾಗುತ್ತಿದ್ದ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳಿಗೆ ಜಿಲ್ಲಾ ಕೇಂದ್ರ ಹೊಸಪೇಟೆ ಹತ್ತಿರವಾಗಲಿದ್ದು, ಆಡಳಿತಾತ್ಮಕ ಅನುಕೂಲವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ. 2004ರಲ್ಲಿ ವಿಜಯನಗರ ಜಿಲ್ಲೆಗಾಗಿ ಹೋರಾಟ ಆರಂಭವಾಗಿತ್ತು. 2006ರಿಂದ ಹೋರಾಟ ತೀವ್ರ ಸ್ವರೂಪ ಪಡೆದಿತ್ತು ಎಂಬುದು ಗಮನಾರ್ಹ.

    ಚಾರಿತ್ರಿಕವಾಗಿ, ಭೌಗೋಳಿಕವಾಗಿ ಈ ಭಾಗ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ವಿಶ್ವ ಪ್ರವಾಸೋದ್ಯಮದ ನಕ್ಷೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಹೀಗಿರುವಾಗ ಹೊಸ ಜಿಲ್ಲೆಯು ತಾಲೂಕುಗಳ ಮತ್ತು ಅವುಗಳನ್ನು ಒಳಪಡುವ ಗ್ರಾಮಗಳ ಸಮಗ್ರ ಅಭಿವೃದ್ಧಿಗೂ ನಾಂದಿ ಹಾಡಬೇಕು. ಅವಿಭಜಿತ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಅಸಮಾಧಾನ, ವಿರೋಧವನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಬೇಕು. ಯಾವುದೇ ಪ್ರದೇಶಕ್ಕೆ ಅನ್ಯಾಯವಾಗದಂತೆ, ಜನರ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಕಾಳಜಿ ವಹಿಸಬೇಕು. ಕಚೇರಿಗಳ ವರ್ಗಾವಣೆ, ಸಿಬ್ಬಂದಿ ನಿಯೋಜನೆ, ಸಂಪನ್ಮೂಲಗಳ ಹಂಚಿಕೆ ಇದೆಲ್ಲ ಹಂತ-ಹಂತವಾಗಿ ನಡೆಯಬೇಕಿದ್ದು, ಈ ಪ್ರಕ್ರಿಯೆ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ವ್ಯವಸ್ಥಿತವಾಗಿ ಸಾಗಬೇಕು. ಹೊಸ ಜಿಲ್ಲೆ ಬರೀ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ವೇದಿಕೆಯಾಗಬಾರದು. ಅಧಿಕಾರ, ಸ್ಥಾನಮಾನದ ಗುದ್ದಾಟದಲ್ಲೇ ಮುಳುಗಿದರೆ ಹೊಸ ಜಿಲ್ಲೆ ಮಾಡಿಯೂ ಹೇಳಿಕೊಳ್ಳುವಂಥ ಪ್ರಯೋಜನ ದಕ್ಕುವುದಿಲ್ಲ.

    ಈ ಭಾಗದ ಶಕ್ತಿ, ಸಾಮರ್ಥ್ಯಗಳನ್ನು ಅರಿತು, ಅದಕ್ಕೆ ಪೂರಕವಾಗಿ ಅಭಿವೃದ್ಧಿಯ ನೀಲಿನಕ್ಷೆಯನ್ನು ರೂಪಿಸಬೇಕು. ಹಂಪಿ ಜಾಗತಿಕವಾಗಿ ಪ್ರಸಿದ್ಧಿ ಪಡೆದಿದ್ದರೂ, ಪ್ರವಾಸಿಗರಿಗೆ ಮೂಲಸೌಕರ್ಯಗಳ ಕೊರತೆ ಇದೆ. ತೀವ್ರ ಗಣಿಗಾರಿಕೆಯ ಅಬ್ಬರ ಅಲ್ಲಿಯ ಜನರ ಬದುಕು, ಪರಿಸರ ಎರಡಕ್ಕೂ ಹಾನಿ ಮಾಡಿದೆ. ಹಾಗಾಗಿ, ಗಂಭೀರ ಸಮಸ್ಯೆಗಳನ್ನು ಮೊದಲ ಆದ್ಯತೆಯಲ್ಲಿ ಪರಿಹರಿಸುವ ಇಚ್ಛಾಶಕ್ತಿ ಜಾಗೃತವಾಗಬೇಕು. ಕೆಲ ಹೊಸ ಕಟ್ಟಡ, ಕಚೇರಿಗಳಿಗೆ ಹೊಸ ಜಿಲ್ಲೆ ಸೀಮಿತವಾಗದೆ, ಜನರ ಬದುಕನ್ನು ಬದಲಾಯಿಸುವ ಕೆಲಸ ಆಗಬೇಕು. ಕೆಲ ವರ್ಷಗಳ ಹಿಂದೆ ಕಲಬುರಗಿ ಜಿಲ್ಲೆಯನ್ನು ವಿಭಜಿಸಿ ಯಾದಗಿರಿಯನ್ನು ಹೊಸ ಜಿಲ್ಲೆಯನ್ನಾಗಿಸಲಾಯಿತು. ಆದರೆ, ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಯಾದಗಿರಿಯ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿ ಉಳಿದಿದೆ. ವಿಜಯನಗರ ಜಿಲ್ಲೆ ವಿಷಯದಲ್ಲೂ ಇದು ಮರುಕಳಿಸಬಾರದು. ವಿಜಯನಗರ ಜಿಲ್ಲೆಯಾಗಬೇಕು ಎಂಬ ಹಲವು ವರ್ಷಗಳ ಬೇಡಿಕೆ, ಗೊಂದಲ, ಕಗ್ಗಂಟನ್ನು ಬಗೆಹರಿಸುವ ಮೂಲಕ ಸರ್ಕಾರ ಉತ್ತಮ ಹೆಜ್ಜೆ ಇರಿಸಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೂ ಇಷ್ಟೇ ಕಾಳಜಿ ತೋರಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts