More

    ಮಾತಿನ ಮಹತ್ವ ಅರಿಯಲಿ: ಸ್ವಯಂಪ್ರೇರಿತ ದೂರು ದಾಖಲಿಸಲು ಸುಪ್ರೀಂಕೋರ್ಟ್ ಸೂಚನೆ

    ದ್ವೇಷ ಭಾಷಣ ಪ್ರಕರಣಗಳ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಪೊಲೀಸರಿಗೆ ಸೂಚಿಸಿ 2022ರಲ್ಲಿ ನೀಡಿದ್ದ ಆದೇಶದ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್ ಈಗ ದೇಶಾದ್ಯಂತ ವಿಸ್ತರಿಸಿದ್ದು, ಯಾವುದೇ ದೂರು ಬಾರದಿದ್ದರೂ ದ್ವೇಷ ಭಾಷಣ ಕುರಿತ ಪ್ರಕರಣಗಳನ್ನು ದಾಖಲಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿರುವ ಭಾರತದ ಜಾತ್ಯತೀತ ಸ್ವರೂಪವನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ದ್ವೇಷ ಭಾಷಣ ಮಾಡುವವರ ಧರ್ಮವನ್ನು ಪರಿಗಣಿಸಿದೆಯೇ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿರುವುದು ಹಾಗೂ ಪ್ರಕರಣಗಳನ್ನು ದಾಖಲಿಸಲು ವಿಳಂಬ ಮಾಡಿದರೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದೂ ಎಚ್ಚರಿಕೆ ನೀಡಿರುವುದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕೆಂಬ ನ್ಯಾಯಾಲಯದ ಸ್ಪಷ್ಟ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.

    ದೆಹಲಿಯಲ್ಲಿ ವಿಎಚ್​ಪಿ ಮತ್ತು ಇತರ ಹಿಂದೂ ಸಂಘಟನೆಗಳು ಆಯೋಜಿಸಿದ್ದ ವಿರಾಟ್ ಹಿಂದೂ ಸಭೆಯಲ್ಲಿ ಮತ್ತು ಕೆಲವು ಧರ್ಮ ಸಂಸತ್​ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಕುರಿತಂತೆ ಕ್ರಮ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 2022ರ ಅಕ್ಟೋಬರ್ 21ರಂದು ಮಧ್ಯಂತರ ತೀರ್ಪು ನೀಡಿ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಮೂರು ರಾಜ್ಯಗಳಿಗೆ ಆದೇಶಿಸಿದ್ದನ್ನು ಈಗ ದೇಶದೆಲ್ಲೆಡೆ ವಿಸ್ತರಿಸಬೇಕೆಂದು ಸೂಚಿಸಿದೆ.

    ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ನೇರವಾದ ಕಾನೂನುಗಳು ಇಲ್ಲವಾದರೂ ಪರೋಕ್ಷವಾಗಿ ವ್ಯಾಖ್ಯಾನಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಬಂಧನೆಗಳಿವೆ.

    ಇವುಗಳು ಮೂಲತಃ ಧರ್ಮಗಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಾಗಿವೆ. ಐಪಿಸಿ ಸೆಕ್ಷನ್ 295 ಎ ಪ್ರಕಾರ, ಧರ್ಮ ಅಥವಾ ಧಾರ್ವಿುಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ವಿುಕ ಭಾವನೆಗಳನ್ನು ಉದ್ರೇಕಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು ಶಿಕ್ಷಾರ್ಹ ಅಪರಾಧಗಳಾಗಿವೆ. ಐಪಿಸಿ ಸೆಕ್ಷನ್ 153ಎ ಅನುಸಾರ, ಧರ್ಮ, ಜನಾಂಗ, ಹುಟ್ಟಿದ ಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದರೆ ಮತ್ತು ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡಿದರೆ ಶಿಕ್ಷೆ ವಿಧಿಸಬಹುದಾಗಿದೆ. ಇದಲ್ಲದೆ, ಐಪಿಸಿಯ ಸೆಕ್ಷನ್ 505ರ ಪ್ರಕಾರ, ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳಿಗೆ ಶಿಕ್ಷೆ ವಿಧಿಸಬಹುದಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೆಕ್ಷನ್ 66ಎ ಪ್ರಕಾರ, ಕಂಪ್ಯೂಟರ್ ಅಥವಾ ಯಾವುದೇ ಇತರ ಎಲೆಕ್ಟ್ರಾನಿಕ್ ಸಾಧನವನ್ನು ಬಳಸಿಕೊಂಡು ಆನ್​ಲೈನ್​ನಲ್ಲಿ ಭಾಷಣ ಮಾಡುವುದು, ಯಾವುದೇ ವ್ಯಕ್ತಿಗೆ ಆಕ್ಷೇಪಾರ್ಹ ಮಾಹಿತಿ, ಸಂದೇಶಗಳನ್ನು ಕಳುಹಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.

    ಈ ಕಾನೂನುಗಳಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದ ನೇರ ಉಲ್ಲೇಖವಿಲ್ಲ. ವಿಶಾಲವಾದ ಮತ್ತು ಅಸ್ಪಷ್ಟ ಪದಗಳಿರುವುದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ ದ್ವೇಷ ಭಾಷಣ ಪ್ರಕರಣಗಳಲ್ಲಿ ಅಪರಾಧ ಸಾಬೀತು ಸಾಧ್ಯತೆ ಕಡಿಮೆಯಾಗಿದೆ ಎಂದು ಪರಿಣತರು ಕಳವಳ ವ್ಯಕ್ತಪಡಿಸುತ್ತಾರೆ. ಜನಾಂಗ, ಲಿಂಗ, ಧಾರ್ವಿುಕ ರೀತಿಯ ನಂಬಿಕೆಯುಳ್ಳ ವ್ಯಕ್ತಿಗಳ ಗುಂಪುಗಳಲ್ಲಿ ದ್ವೇಷವನ್ನು ಪ್ರಚೋದಿಸುವುದು ದ್ವೇಷ ಭಾಷಣ ಎಂದು ಭಾರತದ ಕಾನೂನು ಆಯೋಗದ 267 ನೇ ವರದಿ ಹೇಳುತ್ತದೆ. ಇದರನುಸಾರವಾಗಿ ಪ್ರತ್ಯೇಕ ಹಾಗೂ ಸ್ಪಷ್ಟ ಕಾನೂನು ರೂಪಿಸಿ, ಸೂಕ್ತ ರೀತಿಯಲ್ಲಿ ಶಿಕ್ಷೆ ವಿಧಿಸುವಂತಾದರೆ ದ್ವೇಷ ಭಾಷಣಗಳಿಗೆ ಕಡಿವಾಣ ಬೀಳಬಹುದಾಗಿದೆ.

    ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!

    ಸಿಂಹವನ್ನೇ ಹೋಲುವ ಕರುವಿಗೆ ಜನ್ಮ ನೀಡಿದ ಹಸು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts