More

    ಸಂಪಾದಕೀಯ | ಆತ್ಮನಿರ್ಭರ ಆಶಯಕ್ಕೂ ಒತ್ತು ಸಿಗಲಿ

    ಚೀನಾದ ಕುತಂತ್ರ ಮತ್ತು ಷಡ್ಯಂತ್ರಗಳನ್ನು ಮಣಿಸಲು ಭಾರತ ಸರಣಿ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಚೀನಾದ ಹಲವು ಅಪಾಯಕಾರಿ ಆಪ್​ಗಳನ್ನು ನಿಷೇಧಿಸಿ ಮಹತ್ವದ ಕ್ರಮ ಕೈಗೊಂಡಿದ್ದ ಕೇಂದ್ರ ಸರ್ಕಾರ ಮಂಗಳವಾರ ಮತ್ತೊಂದು ಸುತ್ತಿನಲ್ಲಿ ಆ ರಾಷ್ಟ್ರದ 43 ಆಪ್​ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಜೂನ್​ನಲ್ಲಿ ಚೀನಾದ 59 ಮೊಬೈಲ್ ಆಪ್​ಗಳನ್ನು ನಿಷೇಧಿಸಿದ್ದ ಭಾರತ, ಸೆಪ್ಟೆಂಬರ್​ನಲ್ಲಿ 118 ಆಪ್ ನಿಷೇಧಿಸಿತು. ಅಲಿಬಾಬಾ ವರ್ಕ್​ಬೆಂಚ್, ಅಲಿಎಕ್ಸ್​ಪ್ರೆಸ್, ಅಲಿಪೇ ಕ್ಯಾಶಿಯರ್, ಕ್ಯಾಮ್ಾರ್ಡ್, ವಿಡೇಟ್ ಸೇರಿ ಪ್ರಸಕ್ತ 43 ಆಪ್​ಗಳನ್ನು ನಿಷೇಧಿಸುವ ಮೂಲಕ ಒಟ್ಟು 220 ಆಪ್​ಗಳ ಮೇಲೆ ನಿಷೇಧ ಹೇರಿದಂತಾಗಿದೆ. ಇಂಥ ಕಠಿಣ ಕ್ರಮಗಳು ಅಗತ್ಯ ಮತ್ತು ಅನಿವಾರ್ಯ ಆಗಿತ್ತು. ಡ್ರಾ್ಯಗನ್ ರಾಷ್ಟ್ರವನ್ನು ಮಣಿಸಬೇಕಾದರೆ ಮತ್ತು ಇಲ್ಲಿನ ಮಾಹಿತಿ ಸೋರಿಕೆ, ದುರುಪಯೋಗ ಆಗದಂತೆ ತಡೆಯಬೇಕಾದರೆ ಆಪ್​ಗಳ ನಿಷೇಧ ಅಗತ್ಯವಾಗಿತ್ತು. ಭಾರತದಿಂದ ಚೀನಾ ಖಂಡಿತವಾಗಿಯೂ ಇಂಥ ಕಠಿಣ ಕ್ರಮಗಳನ್ನು ನಿರೀಕ್ಷಿಸಿರಲಿಲ್ಲ. ಅದೆಷ್ಟೋ ರಂಗಗಳಲ್ಲಿ ಹಲವು ರಾಷ್ಟ್ರಗಳು ತನ್ನನ್ನು ಅವಲಂಬಿಸಬೇಕಾಗುತ್ತದೆ ಎಂಬ ಕಲ್ಪನೆಯಲ್ಲೇ ಅದು

    ಮುಳುಗಿತ್ತು. ಆದರೆ, ಭಾರತ ಗಂಭೀರ ಮತ್ತು ದಿಟ್ಟ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯವೇ ಸರಿ. ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಚೀನಾ ಉದ್ವಿಗ್ನತೆ ಸೃಷ್ಟಿಸುತ್ತಿದ್ದಂತೆ, ಆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮತ್ತು ಸಮರ್ಥವಾಗಿ ನಿಭಾಯಿಸಲು ಮುಂದಾದ ಭಾರತ ಅದೇ ಹೊತ್ತಿಗೆ ಆತ್ಮನಿರ್ಭರ (ಸ್ವಾವಲಂಬನೆ) ಸಂಕಲ್ಪಕ್ಕೂ ಮತ್ತಷ್ಟು ಶಕ್ತಿ ತುಂಬಿತು. ಹಾಗಾಗಿ, ಆ ರಾಷ್ಟ್ರದಿಂದ ಆಮದನ್ನು ಹಂತ-ಹಂತವಾಗಿ ಕಡಿಮೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿತು. ವ್ಯಾಪಾರೋದ್ಯಮಿಗಳು ಮತ್ತು ಜನಸಾಮಾನ್ಯರು ಕೂಡ ಸ್ವಯಂಸ್ಪೂರ್ತಿಯಿಂದ ಚೀನಾದ ಉತ್ಪನ್ನಗಳನ್ನು ನಿಷೇಧಿಸತೊಡಗಿ, ಅದೊಂದು ಆಂದೋಲನದ ಸ್ವರೂಪವನ್ನೇ ಪಡೆದುಕೊಂಡಿತು. ಆರ್ಥಿಕ ಬಲಾಢ್ಯತೆಯ ಹುಚ್ಚು ಅಲೆಯಲ್ಲಿ ವಿಸ್ತರಣಾವಾದಕ್ಕೆ ಅಂಟಿಕೊಂಡು, ಹಲವು ರಾಷ್ಟ್ರಗಳೊಂದಿಗೆ ವಿವಾದ, ಗಡಿತಂಟೆ ಸೃಷ್ಟಿಸಿಕೊಂಡಿರುವ ಡ್ರಾ್ಯಗನ್ ರಾಷ್ಟ್ರಕ್ಕೆ ಇಂಥ ತಿರುಗೇಟು ಅವಶ್ಯ. ಈಗಲೂ ಗಡಿ ಭಾಗದಲ್ಲಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ಮುಂದುವರಿದಿದೆಯಾದರೂ, ಚೀನಾದ ನೂರಾರು ಆಪ್​ಗಳು ನಿಷೇಧಗೊಂಡಿರುವ ಹಿನ್ನೆಲೆಯಲ್ಲಿ ದೇಶೀ ತಯಾರಿಕೆಗೂ ಒತ್ತು ನೀಡಬೇಕಿದೆ.

    ಸಾಫ್ಟ್​ವೇರ್​ಗಳ ರಫ್ತಿನಲ್ಲಿ ಈಗಾಗಲೇ ಮಹತ್ವದ ಸ್ಥಾನ ಪಡೆದುಕೊಂಡಿರುವ ಭಾರತ ಆಪ್​ಗಳ ನಿರ್ವಣದಲ್ಲೂ ಗಮನ ಸೆಳೆಯುವಂಥ ಸಾಧನೆ ಮಾಡಿದೆ. ಕರೊನಾ ಬಿಕ್ಕಟ್ಟು ಮತ್ತು ಇತರ ಕಾರಣಗಳ ಹಿನ್ನೆಲೆಯಲ್ಲಿ ಚೀನಾ ತೊರೆಯುತ್ತಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಕೂಡ ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಇಂಥ ಕ್ರಮಗಳು ಉತ್ಪಾದನೆ ಹೆಚ್ಚಿಸಲು, ತಂತ್ರಜ್ಞಾನದ ಬಲ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪೂರಕವಾಗಲಿ. ಚೀನಾದ ಆಪ್​ಗಳ ನಿಷೇಧದ ಲಾಭ ಇಲ್ಲಿನ ಕಂಪನಿ, ಕೈಗಾರಿಕೆಗಳಿಗೆ ಒದಗಿದರೆ ಉದ್ಯೋಗಸೃಷ್ಟಿಗೂ ಪೂರಕವಾಗಿ, ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಗೂ ಬಲ ಬಂದಂತಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts