More

    ಸ್ಥಳೀಯಾಡಳಿತ ಬಲಗೊಳ್ಳಲಿ; ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು..

    ಗ್ರಾಮೀಣ ಭಾಗದ ಜನರ ಮನೆಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಅರಿಯುವ, ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ಸಿಕ್ಕಿರುವುದು ಒಳ್ಳೆಯ ಬೆಳವಣಿಗೆ. ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಆಯಾ ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ತೆರಳಿ, ಜನರ ಅಹವಾಲು ಸ್ವೀಕರಿಸಿದ್ದಾರೆ. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ್ದಾರೆ. ಜಿಲ್ಲಾಧಿಕಾರಿಗಳೇ ಗ್ರಾಮಕ್ಕೆ ಬಂದು, ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಕಂಡು ಗ್ರಾಮೀಣ ಜನರು ಪುಳಕಗೊಂಡಿದ್ದಾರೆ. ಮೊನ್ನೆಯ ಈ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಜತೆಗೆ ಹಳ್ಳಿಗಳ ದುರವಸ್ಥೆಯ ಚಿತ್ರಣವೂ ಸ್ಪಷ್ಟವಾಗಿ ಕಂಡುಬಂದಿದೆ. ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡುವ ಈ ಕಾರ್ಯಕ್ರಮದಿಂದ ಗ್ರಾಮೀಣ ಜನರಲ್ಲಿ ವಿಶ್ವಾಸ ವೃದ್ಧಿಯಾಗುತ್ತದೆ, ಅಧಿಕಾರಿಗಳಿಗೆ ಅಲ್ಲಿನ ನಿಜವಾದ ಸಮಸ್ಯೆಗಳೇನು ಮತ್ತು ಆದ್ಯತೆಯಲ್ಲಿ ಪರಿಹರಿಸಬೇಕಾದ ಸಂಗತಿಗಳಾವವು ಎಂಬುದು ಮನದಟ್ಟಾಗುತ್ತದೆ. ಈ ನಿಟ್ಟಿನಲ್ಲಿ ಇದೊಂದು ಉತ್ತಮ ಆಶಯದ ಕಾರ್ಯಕ್ರಮ. ಆದರೆ, ಸ್ಥಳೀಯ ಮಟ್ಟದಲ್ಲೇ ಪರಿಹರಿಸಬಹುದಾದ ಸಮಸ್ಯೆಗಳೇ ಜಿಲ್ಲಾಧಿಕಾರಿಗಳವರೆಗೂ ಬಂದಿದ್ದು, ಸ್ಥಳೀಯಾಡಳಿತಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

    ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳ ರಚನೆಯ ಉದ್ದೇಶವೇ ಆಯಾಯ ಗ್ರಾಮ, ಹೋಬಳಿ, ತಾಲೂಕಿನ ಸಮಸ್ಯೆಗಳು ಅಲ್ಲೇ ಬಗೆಹರಿಯಬೇಕು ಮತ್ತು ಸಾಮಾನ್ಯ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯು ವಂತಾಗಬಾರದು ಎಂಬ ಕಳಕಳಿಯಿಂದ. ಆದರೆ, ವಾಸ್ತವದಲ್ಲಿ ಹೀಗೆ ಆಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಪಿಂಚಣಿ, ಜಾತಿ ಪ್ರಮಾಣಪತ್ರ, ಮೂಲಸೌಕರ್ಯ, ಸರ್ಕಾರದ ಕೆಲ ಸವಲತ್ತುಗಳಿಗಾಗಿ ಶ್ರೀಸಾಮಾನ್ಯರು ಅಲೆದಾಡಿ, ಬೇಸತ್ತು ಕೊನೆಗೆ ಹಿರಿಯ ಅಧಿಕಾರಿಗಳಿಗೆ ದುಂಬಾಲು ಬೀಳುವಂಥ ಸ್ಥಿತಿ. ಸರ್ಕಾರ ಎಷ್ಟೇ ಒಳ್ಳೆಯ ಯೋಜನೆಗಳನ್ನು ರೂಪಿಸಿದರೂ, ಅದರ ಅನುಷ್ಠಾನದ ಹಂತದಲ್ಲಿ ದಲ್ಲಾಳಿಗಳು ಹುಟ್ಟಿಕೊಳ್ಳುತ್ತಾರೆ. ಅಂಥ ದಲ್ಲಾಳಿಗಳು ಪ್ರಕ್ರಿಯೆಯನ್ನು ಜಟಿಲವಾಗಿಸಿ, ಕಮಿಷನ್ ಪಡೆದುಕೊಂಡು ಬಳಿಕ ಕೆಲಸ ಮಾಡುತ್ತಾರೆ. ನೇರವಾಗಿ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಹೋದರೆ ಲಂಚ ಕೊಡದೆ ಕೆಲಸವೇ ಆಗುವುದಿಲ್ಲ ಎಂಬ ಸ್ಥಿತಿ ಬಹುತೇಕ ಕಡೆ ಇದೆ. ಮರಣ ಪ್ರಮಾಣಪತ್ರ ನೀಡುವುದಕ್ಕೂ ಲಂಚ ಕೇಳಿದ ಅಮಾನವೀಯ ಪ್ರಕರಣಗಳು ಸಂಭವಿಸಿದ್ದಿದೆ. ಹಳ್ಳಿಯ ಜನರಿಗೆ ಯೋಜನೆಗಳ ಅರಿವು ಕಡಿಮೆ ಎಂದು ಏನೋ ಸಬೂಬು ಹೇಳಿ, ಸಾಗಿ ಹಾಕುವ ಸಿಬ್ಬಂದಿಯೂ ಇದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳ ಜನತಾದರ್ಶನದಲ್ಲೂ ಸ್ಥಳೀಯ ಸಮಸ್ಯೆಗಳೇ (ಅಂಗವಿಕಲರ ಪಿಂಚಣಿ, ವೃದ್ಧಾಪ್ಯ ವೇತನ, ಇತರ ಸಬ್ಸಿಡಿಗಳು ಮತ್ತು ಆಶ್ರಯ ಮನೆಗಳು) ಹೆಚ್ಚಾಗಿ ಕಂಡುಬರುತ್ತಿದ್ದವು. ಸ್ಥಳೀಯ ಆಡಳಿತವನ್ನು ಬಿಗಿಗೊಳಿಸದೆ ಇಂಥ ಅಪಸವ್ಯಗಳಿಗೆ ಕೊನೆಯೇ ಇಲ್ಲ.

    ಎಲ್ಲ ಸಮಸ್ಯೆಗಳನ್ನು ಖುದ್ದು ಮುಖ್ಯಮಂತ್ರಿಯಾಗಲಿ, ಜಿಲ್ಲಾಧಿಕಾರಿಗಳಾಗಲಿ ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಡ್ಯ, ಸಬೂಬನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆಗಲೇ, ನಿಜವಾದ ಅರ್ಥದಲ್ಲಿ ಗ್ರಾಮಗಳ ಸ್ಥಿತಿ ಬದಲಾಗಿ, ಅಭಿವೃದ್ಧಿಯ ಆಶಯ ಈಡೇರಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts