More

    ನಡಾಲ್ ಜನ್ಮದಿನಕ್ಕೆ ಗೆಲುವಿನ ಗಿಫ್ಟ್​; ಪ್ರಿ ಕ್ವಾರ್ಟರ್​ಫೈನಲ್‌ಗೇರಿದ ಸೆರೇನಾ, ಅಜರೆಂಕಾ

    ಪ್ಯಾರಿಸ್: ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ಮೂಲಕ ತಮ್ಮ 35ನೇ ಜನ್ಮದಿನವನ್ನು ಸಂಭ್ರಮಿಸಿದ್ದಾರೆ. ದಾಖಲೆಯ 14ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕುವ ಹಂಬಲದಲ್ಲಿರುವ ಸ್ಪೇನ್ ದಿಗ್ಗಜ ನಡಾಲ್ 2ನೇ ಸುತ್ತಿನ ಪಂದ್ಯದಲ್ಲಿ ಸುಲಭ ಗೆಲುವು ಒಲಿಸಿಕೊಂಡರು. ಮಹಿಳಾ ಸಿಂಗಲ್ಸ್ ವಿಭಾಗದಲ್ಲೂ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ 3ನೇ ಸುತ್ತಿಗೇರಿದರು.

    ಪ್ಯಾರಿಸ್‌ನಲ್ಲಿನ ಕರೊನಾ ಮಾರ್ಗಸೂಚಿಯ ಅನ್ವಯ ರಾತ್ರಿ 9 ಗಂಟೆ ನಂತರದ ಪಂದ್ಯಗಳಿಗೆ ಪ್ರೇಕ್ಷಕರು ಹಾಜರಾಗುವಂತಿಲ್ಲ. ಹೀಗಾಗಿ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ನಡಾಲ್ ದಾಖಲಿಸಿದ 102ನೇ ಗೆಲುವಿಗೆ ಪ್ರೇಕ್ಷಕರು ಸಾಕ್ಷಿಯಾಗಲಿಲ್ಲ. ಫ್ರಾನ್ಸ್‌ನ ರಿಚರ್ಡ್ ಗಾಸ್‌ಕ್ವೆಟ್ ವಿರುದ್ಧ ಗುರುವಾರ ರಾತ್ರಿ ನಡೆದ ಕಾದಾಟದಲ್ಲಿ ನಡಾಲ್ 6-0, 7-5, 6-2 ನೇರಸೆಟ್‌ಗಳಿಂದ ಜಯಿಸಿದರು. ಈ ಮೂಲಕ ಗಾಸ್‌ಕ್ವೆಟ್ ವಿರುದ್ಧ 2004ರಿಂದ ಆಡಿದ 17 ಪಂದ್ಯಗಳಲ್ಲೂ ಅಜೇಯ ದಾಖಲೆ ಉಳಿಸಿಕೊಂಡರು. ಅದರಲ್ಲೂ ಗಾಸ್‌ಕ್ವೆಟ್ ವಿರುದ್ಧದ ಕಳೆದ 12 ಪಂದ್ಯಗಳಲ್ಲಿ ನಡಾಲ್ ಒಂದೂ ಸೆಟ್ ಕೂಡ ಸೋತಿಲ್ಲ.

    8ನೇ ಶ್ರೇಯಾಂಕಿತ ಪೋಲೆಂಡ್ ತಾರೆ ಸ್ವಿಯಾಟೆಕ್ 2ನೇ ಸುತ್ತಿನ ಪಂದ್ಯದಲ್ಲಿ ಸ್ವೀಡನ್‌ನ ರೆಬೆಕಾ ಪೀಟರ್‌ಸನ್ ವಿರುದ್ಧ 6-1, 6-1 ನೇರಸೆಟ್‌ಗಳಿಂದ ಗೆದ್ದು ಮುನ್ನಡೆದರು. 2007ರ ಬಳಿಕ (ಜಸ್ಟಿನ್ ಹೆನಿನ್) ಬಳಿಕ ಸತತ 2 ಬಾರಿ ಫ್ರೆಂಚ್ ಓಪನ್ ಗೆದ್ದ ಆಟಗಾರ್ತಿ ಎನಿಸುವ ಅವಕಾಶ 20 ವರ್ಷದ ಸ್ವಿಯಾಟೆಕ್ ಮುಂದಿದೆ.

    ಜ್ವೆರೇವ್, ನಿಶಿಕೋರಿ ಮುನ್ನಡೆ: 6ನೇ ಶ್ರೇಯಾಂಕಿತ ಜರ್ಮನಿ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ 6-2, 7-6, 6-2ರಿಂದ ಸೆರ್ಬಿಯಾದ ಲಾಸ್ಲೊ ಜೆರೆಗೆ ಸೋಲುಣಿಸಿ 4ನೇ ಸುತ್ತಿಗೇರಿದರು. ಎದುರಾಳಿ ಸ್ವಿಸ್‌ನ ಲಾಕ್‌ಸೊನನ್ ಗಾಯದಿಂದ ಪಂದ್ಯ ತ್ಯಜಿಸಿದ ಕಾರಣ ಜಪಾನ್‌ನ ಕೀ ನಿಶಿಕೋರಿ 3ನೇ ಸುತ್ತಿನಲ್ಲಿ ಸುಲಭ ಮುನ್ನಡೆ ಕಂಡರು. ಆಗ ನಿಶಿಕೋರಿ 7-5ರಿಂದ ಮುನ್ನಡೆಯಲ್ಲಿದ್ದರು.

    ಸೆರೇನಾ, ಅಜರೆಂಕಾಗೆ ಜಯ
    ಅಮೆರಿಕದ ತಾರೆ ಸೆರೇನಾ ವಿಲಿಯಮ್ಸ್ 3ನೇ ಸುತ್ತಿನಲ್ಲಿ ದೇಶಬಾಂಧವೆ ಡೇನಿಯಲ್ ಕಾಲಿನ್ಸ್ ವಿರುದ್ಧ 6-4, 6-4ರಿಂದ ಸುಲಭ ಜಯ ಸಾಧಿಸಿದರು. 39 ವರ್ಷದ ಸೆರೇನಾ ಮಾರ್ಗರೇಟ್ ಕೋರ್ಟ್ ಅವರ 24 ಗ್ರಾಂಡ್ ಸ್ಲಾಂ ಗೆಲುವಿನ ಸಾರ್ವಕಾಲಿಕ ದಾಖಲೆ ಸರಿಗಟ್ಟುವ ತವಕದಲ್ಲಿದ್ದಾರೆ. ಮಾಜಿ ವಿಶ್ವ ನಂ. 1 ವಿಕ್ಟೋರಿಯಾ ಅಜರೆಂಕಾ ಕಳೆದ 8 ವರ್ಷಗಳಲ್ಲಿ ಮೊದಲ ಬಾರಿಗೆ ಪ್ಯಾರಿಸ್‌ನಲ್ಲಿ 4ನೇ ಸುತ್ತಿಗೇರಿದ್ದಾರೆ. ಶುಕ್ರವಾರ ನಡೆದ 3ನೇ ಸುತ್ತಿನ ಕಾದಾಟದಲ್ಲಿ ಬೆಲಾರಸ್ ತಾರೆ 6-2, 6-2 ನೇರಸೆಟ್‌ಗಳಿಂದ ಅಮೆರಿಕದ ಮ್ಯಾಡಿಸನ್ ಕೀಯ್ಸ ವಿರುದ್ಧ ಜಯಿಸಿದರು. 21ನೇ ಶ್ರೇಯಾಂಕಿತೆ ಕಜಾಕಿಸ್ತಾನದ ಎಲಿನಾ ರೈಬಕಿನಾ 6-1, 6-4ರಿಂದ ರಷ್ಯಾದ ಅನುಭವಿ ಆಟಗಾರ್ತಿ ಎಲಿನಾ ವೆಸ್ನಿನಾ ವಿರುದ್ಧ ಜಯಿಸಿದರು.

    ಸಬಲೆಂಕಾಗೆ ಶಾಕ್
    3ನೇ ಶ್ರೇಯಾಂಕಿತೆ ಬೆಲಾರಸ್‌ನ ಅರಿನಾ ಸಬಲೆಂಕಾ ಶುಕ್ರವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ 4-6, 6-2, 0-6ರಿಂದ ರಷ್ಯಾದ ಅನಾಸ್ಟಸಿಯಾ ಪಾವ್ಲಚೆಂಕೋವಾ ವಿರುದ್ಧ ಆಘಾತ ಎದುರಿಸಿದರು. ಇದರಿಂದ ಟೂರ್ನಿಯಲ್ಲಿ ಅಗ್ರ 3 ಶ್ರೇಯಾಂಕಿತ ಆಟಗಾರ್ತಿಯರು ಹೊರಬಿದ್ದಂತಾಗಿದೆ. ಆಶ್ಲೆಗ್ ಬಾರ್ಟಿ, ನವೊಮಿ ಒಸಾಕ ಈಗಾಗಲೆ ಹೊರಬಿದ್ದಿದ್ದಾರೆ.

    ಫಿಕ್ಸಿಂಗ್ ಆರೋಪ, ರಷ್ಯಾ ಆಟಗಾರ್ತಿ ಬಂಧನ
    ಕರೊನಾತಂಕದ ನಡುವೆ ನಡೆಯುತ್ತಿರುವ ಫ್ರೆಂಚ್ ಓಪನ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಭೂತವೂ ಕಾಣಿಸಿಕೊಂಡಿದೆ. ಕಳೆದ ವರ್ಷದ ಟೂರ್ನಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಶಂಕಿತ ಆರೋಪಿಯಾಗಿರುವ ರಷ್ಯಾದ ಆಟಗಾರ್ತಿ ಯಾನಾ ಸಿಜಿಕೋವಾರನ್ನು ಪ್ಯಾರಿಸ್‌ನಲ್ಲಿ ಗುರುವಾರ ರಾತ್ರಿ ಬಂಧಿಸಲಾಗಿದೆ. ಬೆಟ್ಟಿಂಗ್ ಮೋಸದ ದೂರಿನ ಮೇರೆಗೆ ಫ್ರೆಂಚ್ ಪೊಲೀಸರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಕರಣದ ತನಿಖೆ ಆರಂಭಿಸಿದ್ದರು. ವಿಶ್ವ ನಂ. 765 ಆಟಗಾರ್ತಿ ಸಿಜಿಕೋವಾ ಕಳೆದ ವರ್ಷ ಆಡಿದ್ದ ಡಬಲ್ಸ್ ಪಂದ್ಯದ ವೇಳೆ ಸಾವಿರಾರು ಯುರೋ ಬೆಟ್ಟಿಂಗ್ ನಡೆದಿತ್ತು ಎನ್ನಲಾಗಿದೆ. ಸಿಜಿಕೋವಾ ಹಾಲಿ ಟೂರ್ನಿಯಲ್ಲಿ ಮೊದಲ ಸುತ್ತಿನ ಪಂದ್ಯ ಸೋತ ಬೆನ್ನಲ್ಲೇ ಅವರ ಹೋಟೆಲ್ ಕೋಣೆಯಲ್ಲಿ ತಪಾಸಣೆ ನಡೆಸಿ ಬಂಧಿಸಲಾಗಿದೆ.

    ಸಿನಿಮಾ ಕಥೆಯಂತಿದೆ ಈ ವೆಸ್ಟ್ ಇಂಡೀಸ್ ಕ್ರಿಕೆಟಿಗನ ಲವ್ ಸ್ಟೋರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts