More

    ವಿಮಾ ಯೋಜನೆಯ ಪ್ರಯೋಜನ ಪಡೆಯಿರಿ

    ಎಚ್.ಡಿ.ಕೋಟೆ: ಪತ್ರಿಕಾ ವಿತರಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ವಿಮಾ ಯೋಜನೆಯನ್ನು ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜೇಶ್ ಜಾದವ್ ತಿಳಿಸಿದರು.

    ಪಟ್ಟಣದ ಪತ್ರಕರ್ತರ ಕಚೇರಿಯಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಮತ್ತು ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಿಕಾ ವಿತರಕರಿಗೆ ಇ-ಶ್ರಮ ಕಾರ್ಡ್ ವಿತರಿಸಿ ಮಾತನಾಡಿದರು. ಇ-ಶ್ರಮ ಕಾರ್ಡ್‌ನಲ್ಲಿ ವಿಮಾ ಸೌಲಭ್ಯವು ಕರ್ತವ್ಯದಲ್ಲಿ ಇರುವಾಗ ಅಥವಾ ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೆ ಅನ್ವಯವಾಗಲಿದೆ. ಯೋಜನೆಯ ನೋಂದಣಿಯನ್ನು ಸಂಪೂರ್ಣ ಉಚಿತವಾಗಿ ಯಾವುದೇ ರೀತಿಯ ಪ್ರೀಮಿಯಂ ಪಾವತಿಸದೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಸ್ವಿಗ್ಗಿ, ಜೊಮ್ಯಾಟೊ, ಇ -ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಫಾರ್ಮಸಿ, ಬ್ಲಿಂಕಿಟ್, ಬಿಗ್ ಬಾಸ್ಕೆಟ್, ಡಾಮಿನೊಸ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲ ಅಸಂಘಟಿತ ವಲಯದ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಉಚಿತವಾಗಿ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳಿದರು.

    ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ 2 ಲಕ್ಷ ರೂ. ಹಾಗೂ ಜೀವ ವಿಮಾ 2 ಲಕ್ಷ ರೂ. ಸೇರಿ ಒಟ್ಟು 4 ಲಕ್ಷ ರೂ.ಗಳನ್ನು ಈ ವಿಮೆಯು ಹೊಂದಿದೆ. ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ಎರಡು ಲಕ್ಷ ರೂ.ವರೆಗೆ ಆಸ್ಪತ್ರೆ ವೆಚ್ಚ, ಜೀವ ವಿಮೆ 2 ಲಕ್ಷ ರೂ.ಗಳವರೆಗೆ ಸೌಲಭ್ಯವಿದೆ. 18ರಿಂದ 60 ವರ್ಷದ ವಯೋಮಾನದವರು ಹಾಗೂ ಆದಾಯ ತೆರಿಗೆ ಪಾವತಿ ದಾರದಲ್ಲದವರು, ಕರ್ನಾಟಕದಲ್ಲಿ ವೃತ್ತಿ ಕಾರ್ಯನಿರ್ವಹಿಸುತ್ತಿರುವವರು ನೋಂದಣಿ ಮಾಡಿಸಬಹುದು ಎಂದರು.

    ಇದೇ ವೇಳೆ ಪತ್ರಿಕಾ ವಿತರಕರು ಸೇರಿದಂತೆ 62 ಜನರಿಗೆ ನೋಂದಣಿ ಮಾಡಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು, ಉಪಾಧ್ಯಕ್ಷ ಎಡತೊರೆ ಮಹೇಶ್, ಖಜಾಂಚಿ ಮಂಜು ಕೋಟೆ, ಪ್ರಧಾನ ಕಾರ್ಯದರ್ಶಿ ನಾಗರಾಮ್, ಹಿರಿಯ ಕಾರ್ಮಿಕ ನಿರೀಕ್ಷಕ ಶಶಿಧರ್, ಮಧುರಾ, ಪರಶಿವಮೂರ್ತಿ, ಸವಿತಾ, ಕನ್ನಡ ಪ್ರಮೋದ್, ಚಿಕ್ಕಣ್ಣೇಗೌಡ, ರೇಣುಕಾಸ್ವಾಮಿ, ರಘು ನಂಜುಂಡಪ್ಪ, ದಾಸೇಗೌಡ, ಸುರೇಶ್, ಪುಟ್ಟರಾಜು, ವಾಸುಕಿ ನಾಗೇಶ್, ಪುರುಷೋತ್ತಮ್, ಶ್ರೀನಿಧಿ, ರವಿಕುಮಾರ್, ದೊಡ್ಡಸಿದ್ದು, ಸರಗೂರು ಪೈಂಟ್ ನಾಗರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts