More

    ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿ ಇತಿಹಾಸ ಬರೆದ ಡ್ವೇನ್ ಬ್ರಾವೊ

    ಪೋರ್ಟ್ ಆಫ್​ ಸ್ಪೇನ್(ಟ್ರಿನಿಡಾಡ್): ವೆಸ್ಟ್ ಇಂಡೀಸ್‌ನ ವೇಗದ ಬೌಲಿಂಗ್ ಆಲ್ರೌಂಡರ್ ಡ್ವೇನ್ ಬ್ರಾವೊ ಟಿ20 ಕ್ರಿಕೆಟ್ ಇತಿಹಾಸದಲ್ಲಿ 500 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆಂಡರ್‌ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಕಬಳಿಸಿದ ಮೊದಲ ವೇಗಿ ಎನಿಸಿದ ಮರುದಿನವೇ ಡ್ವೇನ್ ಬ್ರಾವೊ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.

    ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಯಲ್ಲಿ ಬುಧವಾರ ಟ್ರಿನಿಬಾಗೊ ನೈಟ್‌ರೈಡರ್ಸ್‌ ತಂಡದ ಪರ ಸೇಂಟ್ ಲೂಸಿಯಾ ಜೌಕ್ಸ್ ವಿರುದ್ಧದ ಪಂದ್ಯದಲ್ಲಿ ಡ್ವೇನ್ ಬ್ರಾವೊ ಈ ಸಾಧನೆ ಮಾಡಿದ್ದಾರೆ. ಸೇಂಟ್ ಲೂಸಿಯಾ ತಂಡದ ಆರಂಭಿಕ ರಕೀಮ್ ಕಾರ್ನ್‌ವಾಲ್ (18) ವಿಕೆಟ್ ಕಬಳಿಸುವ ಮೂಲಕ ಬ್ರಾವೊ 500 ವಿಕೆಟ್ ಪೂರೈಸಿದರು. ಬಳಿಕ ರೋಸ್ಟನ್ ಚೇಸ್ ಅವರನ್ನೂ ಔಟ್ ಮಾಡಿ ವಿಕೆಟ್ ಗಳಿಕೆಯನ್ನು 501ಕ್ಕೆ ಏರಿಸಿಕೊಂಡರು.

    ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬ್ರಾವೊ ಹೊರತಾಗಿ 400 ವಿಕೆಟ್ ಕಬಳಿಸಿದ ಬೌಲರ್ ಕೂಡ ಯಾರೂ ಇಲ್ಲ. ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ 390 ವಿಕೆಟ್ ಕಬಳಿಸಿ ಅನಂತರದ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನೀಲ್ ನಾರಾಯಣ್ (383) ಮತ್ತು ದಕ್ಷಿಣ ಆಫ್ರಿಕಾ ಸ್ಪಿನ್ನರ್ ಇಮ್ರಾನ್ ತಾಹಿರ್ (374) ಅನಂತರದಲ್ಲಿದ್ದಾರೆ.

    ಇದನ್ನೂ ಓದಿ: ಯುವರಾಜ್ ಸಿಂಗ್-ದೀಪಿಕಾ ಪಡುಕೋಣೆ ಬ್ರೇಕ್-ಅಪ್ ಆಗಿದ್ದು ಯಾಕೆ ಗೊತ್ತೇ?

    ಟಿ20 ಕ್ರಿಕೆಟ್‌ನಲ್ಲಿ ಆಡಿದ 459ನೇ ಪಂದ್ಯದಲ್ಲಿ 36 ವರ್ಷದ ಡ್ವೇನ್ ಬ್ರಾವೊ ಈ ಸಾಧನೆ ಮಾಡಿದ್ದಾರೆ. ಈ ಪೈಕಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅವರು 71 ಪಂದ್ಯಗಳಲ್ಲಿ 59 ವಿಕೆಟ್ ಕಬಳಿಸಿದ್ದಾರೆ. ಇದಲ್ಲದೆ, ಚೆನ್ನೈ ಸೂಪರ್‌ಕಿಂಗ್ಸ್, ಮುಂಬೈ ಇಂಡಿಯನ್ಸ್, ಲಾಹೋರ್ ಖಲಂದರ್ಸ್‌, ಮೆಲ್ಬೋರ್ನ್ ರೆನೆಗೇಡ್ಸ್, ಮೆಲ್ಬೋರ್ನ್ ಸ್ಟಾರ್ಸ್‌ ತಂಡಗಳ ಪರ ಆಡಿ ಅವರು 500 ವಿಕೆಟ್ ಸಾಧನೆ ಮಾಡಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ಅವರು ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts