More

    ಛತ್ರಿ ಹಿಡಿದು ರೀಲ್ಸ್ ಮಾಡಿದ ಚಾಲಕ-ನಿರ್ವಾಹಕಿ ಅಮಾನತು

    ಧಾರವಾಡ: ಮಳೆ ಸುರಿಯುತ್ತಿದ್ದ ವೇಳೆ ಛತ್ರಿ ಹಿಡಿದು ಬಸ್ ಚಾಲನೆ ಮಾಡಿದ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ನಿರ್ವಾಹಕಿ ಅಮಾನತಾಗಿದ್ದಾರೆ. ಚಾಲಕ ಹನುಮಂತಪ್ಪ ಕಿಲ್ಲೇದಾರ ಹಾಗೂ ನಿರ್ವಾಹಕಿ ಅನಿತಾ ಎಚ್. ಅವರ ನೌಕರಿಗೆ ಈ ವಿಡಿಯೋ ಕುತ್ತು ತಂದಿದೆ.

    ಧಾರವಾಡ- ಉಪ್ಪಿನಬೆಟಗೇರಿ ಮಾರ್ಗದ ಬಸ್ ಅನ್ನು ಹನುಮಂತಪ್ಪ ಕಿಲ್ಲೇದಾರ ಚಲಾಯಿಸುತ್ತಿದ್ದರು. ಅವರೊಂದಿಗೆ ನಿರ್ವಾಹಕಿ ಅನಿತಾ ಎಚ್. ಇದ್ದರು. ಇಬ್ಬರನ್ನೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಶುಕ್ರವಾರ ಸಂಜೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಏನಿದು ಪ್ರಕರಣ?: ಗುರುವಾರ ಸಂಜೆ 4ಸುಮಾರಿಗೆ ಗಾಳಿ ಸಮೇತ ಭಾರಿ ಮಳೆ ಸುರಿಯುತ್ತಿತ್ತು. ಈ ವೇಳೆ ಚಾಲಕ ಹನುಮಂತಪ್ಪ ಮತ್ತು ಅನಿತಾ ಅವರು ಮನರಂಜನೆಯ ಉದ್ದೇಶದಿಂದ ಚಲಿಸುತ್ತಿದ್ದ ಬಸ್‌ನಲ್ಲೇ ಛತ್ರಿ ಹಿಡಿದು ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
    ಬಸ್ ತಪಾಸಣೆ ಮಾಡಲಾಗಿದ್ದು, ಅದರ ಮೇಲ್ಭಾಗದಲ್ಲಿ ಸೋರಿಕೆ ಕಂಡುಬಂದಿಲ್ಲ. ಅಲ್ಲದೆ, ಈ ಕುರಿತು ಯಾವುದೇ ದೂರುಗಳು ಬಂದಿಲ್ಲ. ಆದರೆ, ಚಾಲಕ ಮತ್ತು ನಿರ್ವಾಹಕರು ಮನರಂಜನೆಗಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದು, ಇಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಎಂಡಿ ಪ್ರಿಯಾಂಗಾ ಎಂ. ಸ್ಪಷ್ಟೀಕರಣ ನೀಡಿದ್ದಾರೆ.

    ಸರ್ಕಾರಕ್ಕೆ ಯತ್ನಾಳ ತರಾಟೆ

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟ್ವೀಟ್ (ಎಕ್ಸ್) ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೃಶ್ಯವನ್ನು ಹಂಚಿಕೊಂಡಿರುವ ಅವರು, ‘ಇದು ನಮ್ಮ ಸರ್ಕಾರಿ ಬಸ್‌ಗಳ ದುಃಸ್ಥಿತಿ. ಈ ರೀತಿ ಒಂದು ಕೈಯಲ್ಲಿ ಕೊಡೆ, ಒಂದು ಕೈಯ್ಯಲ್ಲಿ ಸ್ಟೀಯರಿಂಗ್ ಬ್ಯಾಲೆನ್ಸ್ ಮಾಡುತ್ತ ಬಸ್ ಓಡಿಸುವುದರಿಂದ ಚಾಲಕರು ಹಾಗೂ ಪ್ರಯಾಣಿಕರ ಜೀವಕ್ಕೆ ಕುತ್ತು. ಇದೇನಾ ಚಾಲಕರಿಗೆ ಇರುವ ಕಾರ್ಯಾಚರಣೆ ವಿಧಾನ? ಚಾಲಕರ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಇರಲಿ’. ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts