More

    ಉಡುಪಿಯಲ್ಲಿ ಗ್ಯಾಂಗ್​ ವಾರ್​, ಮೂವರ ಬಂಧನ

    ಕಾಪು ಗರುಡ ತಂಡದಲ್ಲಿ ವೈಮನಸ್ಸು | ತಲವಾರ್​ನಿಂದ ಬಡಿದಾಡಿಕೊಂಡ ಯುವಕರು

    • ಮೇ 18ರಂದು ನಡೆದ ಘಟನೆ ವೈರಲ್​
    • ನಾಪತ್ತೆಯಾದವರ ಬಂಧನಕ್ಕೆ ಪೊಲೀಸ್​ ಜಾಲ

    ವಿಜಯವಾಣಿ ಸುದ್ದಿಜಾಲ ಉಡುಪಿ
    ನಗರದ ಕುಂಜಿಬೆಟ್ಟು (ಉಡುಪಿ-ಮಣಿಪಾಲ ಮಾರ್ಗ) ಮುಖ್ಯ ರಸ್ತೆಯಲ್ಲಿಯೇ ಮೇ 18ರಂದು ತಡರಾತ್ರಿ ಒಂದೇ ತಂಡದ ಸದಸ್ಯರ ನಡುವೆ ಗ್ಯಾಂಗ್​ ವಾರ್​ ನಡೆದಿದ್ದು, ಹೊಡೆದಾಟದ ದೃಶ್ಯಾವಳಿ ತಡವಾಗಿ ವೈರಲ್​ ಆಗಿದೆ.

    ಘಟನೆಗೆ ಸಂಬಂಧಿಸಿ ಉಡುಪಿ ನಗರ ಠಾಣೆ ಪೊಲೀಸರು ಕಾಪುವಿನ ಗರುಡ ಗ್ಯಾಂಗ್​ ವಾರ್​ ತಂಡದ ಸದಸ್ಯರಾದ ಆಶಿಕ್​, ರಾಕೀಬ್​ ಮತ್ತು ಸಕ್ಲೇನ್​ ಎಂಬ ಮೂವರನ್ನು ಬಂಧಿಸಿದ್ದಾರೆ. ಎರಡು ಸ್ವಿಫ್ಟ್ ಕಾರು, 2 ಬೈಕ್​, ಒಂದು ತಲವಾರ್​ ಮತ್ತು ಒಂದು ಡ್ರ್ಯಾಗರ್​ ವಶಕ್ಕೆ ಪಡೆಯಲಾಗಿದ್ದು, ನಾಪತ್ತೆಯಾದವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

    GangWar3

    ಕುಕೃತ್ಯದ ಗರುಡ ಗ್ಯಾಂಗ್

    ಹತ್ತು ವರ್ಷದ ಹಿಂದೆ ಕಾಪುವಿನಲ್ಲಿ ಗರುಡ ಎಂಬ ಹೆಸರಿನಲ್ಲಿ ಒಂದು ಕೋಮಿನ ಯುವಕರು ಗ್ಯಾಂಗ್​ವಾರ್​ ನಡೆಸಲೆಂದೇ ಟೀಮ್​ ಕಟ್ಟಿದ್ದರು. ದನಗಳ ಕಳ್ಳತನ, ದರೋಡೆ, ಬಡ್ಡಿ ಮಾಫಿಯಾದವರಿಗಾಗಿ ಸಾಲಗಾರರಿಗೆ ಬೆದರಿಸಿ, ಹಲ್ಲೆ ಮಾಡಿ ಹಣ ವಸೂಲಿ ಮಾಡಿಕೊಡುವ ಕೆಲಸವನ್ನು ಈ ಗ್ಯಾಂಗ್​ ಮಾಡುತ್ತಿತ್ತು ಎಂದು ತಿಳಿದುಬಂದಿದೆ.

    UDP-25-1D-GyangWar
    ಬಂಧಿತ ಆಶಿಕ್​.

    ತಂಡದಲ್ಲಿ ಭಿನ್ನಮತ

    ಇತ್ತೀಚೆಗೆ ಈ ಗ್ಯಾಂಗ್​ನ ಸದಸ್ಯರಲ್ಲಿ ಭಿನ್ನಮತ ಹುಟ್ಟಿಕೊಂಡಿದ್ದು, ಕುಕೃತ್ಯಗಳಲ್ಲಿ ಹೆಚ್ಚು ಸಕ್ರಿಯ ಇರಲಿಲ್ಲ. ಅವರಲ್ಲಿಯೇ ಒಳಜಗಳ ನಡೆದು ಎರಡು ಬಣವಾಗಿ ತಂಡ ಇಬ್ಭಾಗವಾಗಿತ್ತು. ಮಜೀದ್​ ಹಾಗೂ ಅಲ್ಫಾಜ್​ ಎಂಬವರದ್ದು ಒಂದು ತಂಡ ಹಾಗೂ ಆಶಿಕ್​ ಎಂಬಾತನದ್ದು ಇನ್ನೊಂದು ತಂಡವಾಗಿ ಬೇರ್ಪಟ್ಟಿತ್ತು. ಈ ಗ್ಯಾಂಗ್​ನಲ್ಲಿ ಕಾಪು, ಕುಂದಾಪುರ, ಹುಡೆ ಭಾಗದ ಯುವಕರೂ ಸದಸ್ಯರಾಗಿದ್ದರು.

    UDP-25-1E-GyangWar
    ಬಂಧಿತ ರಾಕೀಬ್

    ಏನಿದು ಘಟನೆ?

    ಉಡುಪಿಯಲ್ಲಿ ಪರಸ್ಪರ ತಲವಾರ್​ನಿಂದ ಹಲ್ಲೆ ಮಾಡಿಕೊಳ್ಳುವ ಕೆಲವು ದಿನದ ಹಿಂದೆ ಆಶಿಕ್​ ಮತ್ತು ಅಲ್ಫಾಜ್​ ನಡುವೆ ಕಾಪುವಿನಲ್ಲಿ ಜಗಳ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಮೇ 18ರಂದು ರಾತ್ರಿ ಮಾತನಾಡುವುದಿದೆ ಉಡುಪಿಗೆ ಬಾ ಎಂದು ಮಜೀದ್​ ತಂಡದವರು ಆಶಿಕ್​ನನ್ನು ಕರೆದಿದ್ದು, ಆತ ಕಾರಿನಲ್ಲಿ ಬಂದಿದ್ದ. ಬಳಿಕ ತನ್ನ ಮೇಲೆ ಹಲ್ಲೆ ನಡೆಸುತ್ತಾರೆಂದು ತಿಳಿದು ಕಾರಿನಿಂದ ಇಳಿದಿರಲಿಲ್ಲ. ಇದರಿಂದ ಆಕ್ರೋಶಗೊಂಡ ಇನ್ನೊಂದು ತಂಡ, ಆತ ಕುಳಿತಿದ್ದ ಕಾರಿಗೆ ಮತ್ತೊಂದು ಕಾರಿನಿಂದ ಡಿಕ್ಕಿ ಹೊಡೆಯುತ್ತಿದ್ದರು. ಬಳಿಕ ಸಿನಿಮೀಯ ರೀತಿಯಲ್ಲಿ ತಲವಾರ್​ನಿಂದ ಕಾದಾಡುತ್ತ, ಶರೀಫ್ ಎಂಬಾತನ ಮೇಲೆ ಕಾರು ಹಾಯಿಸಿ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗುತ್ತಾರೆ. ತೀವ್ರ ಗಾಯಗೊಂಡಿದ್ದ ಆತನನ್ನು ಕಾರಿನೊಳಗೆ ಹಾಕಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ದೃಶ್ಯವಿಗ ಉಡುಪಿ ಜನತೆಯ ನಿದ್ದೆಗೆಡಿಸಿದೆ.

    UDP-25-1F-GyangWar
    ಬಂಧಿತ ಸಕ್ಲೇನ್

    ಜನತೆಯಲ್ಲಿ ಆತಂಕ ಮೂಡಿಸಿದ ದೃಶ್ಯಾವಳಿ

    ಉಡುಪಿಯಲ್ಲಿ ನಡೆದ ಗ್ಯಾಂಗ್​ವಾರ್​ನಿಂದ ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಎರಡು ತಂಡಗಳ ನಡುವೆ ರಾತ್ರಿ ವೇಳೆ ತಲವಾರ್​ನಿಂದ ನಡೆದ ಭೀಕರ ಹೊಡೆದಾಟದ ವೈರಲ್​ ಆದ ದೃಶ್ಯಾವಳಿ ನೋಡಿದ ಜನರು ಬೆಚ್ಚೀಬಿಳುವಂತಾಗಿದೆ. ನಡು ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಡಿಕ್ಕಿ ಹೊಡೆಯುವುದು, ಚಾಕು-ತಲವಾರ್​ನಿಂದ ಹಲ್ಲೆ ಮಾಡುತ್ತ, ಸಿನಿಮಾ ಶೈಲಿಯಲ್ಲಿ ಫೈಟ್​ ಮಾಡುತ್ತಿರುವ ಯುವಕರು ಎತ್ತ ಸಾಗುತ್ತಿದ್ದಾರೆ ಎಂದು ಚಿಂತಿಸುವಂತಾಗಿದೆ. ಶಾಂತಪ್ರಿಯ ಜಿಲ್ಲೆಯಾದ ಉಡುಪಿಯಲ್ಲಿ ಇತ್ತೀಚೆಗೆ ಕೊಲೆ, ಹಲ್ಲೆ ಇನ್ನಿತರ ಅಪರಾಧ ಪ್ರಕರಣ ಹೆಚ್ಚುತ್ತಿದೆ. ಜನತೆಗೆ ಸೂಕ್ತ ಭದ್ರತೆಯೊಂದಿಗೆ ಸ್ವಸ್ಥ ಸಮಾಜ ನೀಡುವಂತೆ ಉಡುಪಿಗರು ಜಿಲ್ಲಾಡಳಿತಕ್ಕೆ ವಿನಂತಿಸಿದ್ದಾರೆ.

    ಪುಂಡರ ವಿರುದ್ಧ ಗೂಂಡಾ ಕಾಯ್ದೆ ಏಕಿಲ್ಲ?

    • ಹೈಕೋರ್ಟ್​ ನ್ಯಾಯವಾದಿ ಶ್ರೀನಿಧಿ ಹೆಗ್ಡೆ ಪ್ರಶ್ನೆ
    • ಎಸ್ಪಿಗೆ ಕಾಂಗ್ರೆಸ್​ ಸರ್ಕಾರದ ಒತ್ತಡವಿತ್ತೇ?

    ಉಡುಪಿ ನಗರದ ರಾಷ್ಟ್ರೀ ಹೆದ್ದಾರಿಯಲ್ಲಿ ಮಾರಕಾಸ್ತ್ರಗಳಿಂದ ಎರಡು ಗುಂಪು ಹಲ್ಲೆ ನಡೆಸಿ ವಾರ ಕಳೆದರೂ ಸಹ ಜಿಲ್ಲಾ ಪೋಲಿಸ್​ ಇಲಾಖೆ ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾಗಿದೆ. ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಗರುಡ ಗ್ಯಾಂಗ್​ನ ಪುಂಡರ ವಿರುದ್ಧ ಗೂಂಡಾ ಕಾಯ್ದೆ ಯಾಕೆ ಹಾಕಿಲ್ಲ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಹಾಗೂ ಹೈಕೋರ್ಟ್​ ನ್ಯಾಯವಾದಿ ಶ್ರೀನಿಧಿ ಹೆಗ್ಡೆ ಪ್ರಶ್ನಿಸಿದ್ದಾರೆ.

    ಮೇ 18ರಂದು ರಾತ್ರಿ ಘಟನೆ ನಡೆದಿದ್ದರೂ, ಎರಡು ದಿನ ತಡವಾಗಿ ಮೇ 20ರಂದು ಪ್ರಕರಣ ದಾಖಲಿಸಿದ್ದೇಕೆ? ಪೊಲೀಸರು ಸ್ಥಳಿಯ ಸಿಸಿಟಿವಿ ದೃಶ್ಯ ಪರಿಶೀಲಿಸಿರಲಿಲ್ಲವೇ? ಪರಿಶೀಲಿಸಿದ್ದರೂ ಘಟನೆಯ ಗಂಭೀರತೆ ಅರಿತು ಜಾಣ ಮೌನ ತೋರಿಸಿದರೇ ಎಂಬ ಅನುಮಾನ ಕಾಡುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕಾಂಗ್ರೆಸ್​ ಸರ್ಕಾರದ ಒತ್ತಡವಿತ್ತೇ?

    ಚುನಾವಣೆಯ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ಭಂಗವಾಗುತ್ತದೆ ಎಂಬ ಕಾರಣ ನೀಡಿ ಬಜರಂಗದಳ, ವಿಶ್ವ ಹಿಂದು ಪರಿಷತ್​ ಕಾರ್ಯಕರ್ತರನ್ನು ಗಡಿಪಾರು ಮಾಡುತ್ತಾರೆ. ಆದರೆ, ರಾಜ್ಯದಲ್ಲಿ ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಈಗಾಗಲೇ ರೌಡಿ ಶೀಟರ್​ ಆಗಿರುವ ಅವರನ್ನು ಏಕೆ ಗಡಿಪಾರು ಮಾಡಿಲ್ಲ? ಭ್ರಷ್ಟಾಚಾರ ರಹಿತ ಅಧಿಕಾರಿ ಎಂದು ಹೆಸರು ಪಡೆದಿರುವ ಜಿಲ್ಲಾ ಪೋಲಿಸ್​ ವರಿಷ್ಠಾಧಿಕಾರಿ ಡಾ. ಅರುಣ್​ ಅವರಿಗೆ ಈ ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್​ ಸರ್ಕಾರದ ಒತ್ತಡವಿತ್ತೇ ಎಂದು ಶ್ರೀನಿಧಿ ಹೆಗ್ಡೆ ಪ್ರಶ್ನಿಸಿದ್ದಾರೆ.

    ರಾಜ್ಯ ಗೃಹ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ

    • ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ

    ಉಡುಪಿ: ಸುಸಂಸ್ಕೃತ, ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿ ಜಿಲ್ಲೆಯಲ್ಲಿ ನಡುರಾತ್ರಿ ಉಡುಪಿಯ ಮುಖ್ಯರಸ್ತೆಯಲ್ಲಿ ರೌಡಿಗಳು ಮಾರಕಾಸ್ತ್ರ ಬಳಸಿ ಅಟ್ಟಹಾಸ ಮೆರೆದು, ಗ್ಯಾಂಗ್​ ವಾರ್​ ನಡೆಸಿರುವುದು ರಾಜ್ಯದ ಗೃಹ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್​ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡ್ರಗ್ಸ್​ ದಂಧೆ ನಿಯಂತ್ರಿಸಿ

    ಗ್ಯಾಂಗ್​ ವಾರ್​ ಘಟನೆ ಉಡುಪಿಯ ಪಾಲಿಗೆ ಕಪ್ಪುಚುಕ್ಕೆಯಾಗಿದ್ದು, ಶಾಂತಿಪ್ರಿಯ ಜನತೆ ಆತಂಕಕ್ಕೀಡಾಗಿದ್ದಾರೆ. ನಡುಬೀದಿಯಲ್ಲಿ ತಲವಾರು ಹಿಡಿದು ಬಡಿದಾಡಿಕೊಂಡ ಎಲ್ಲ ರೌಡಿಗಳನ್ನು ಪೊಲೀಸ್​ ಇಲಾಖೆ ಬಂಧಿಸಿ, ಉನ್ನತ ತನಿಖೆ ನಡೆಸಬೇಕು. ಮರಿ ರೌಡಿಗಳ ಹೆಡೆಮುರಿ ಕಟ್ಟಿ ಇಂತಹ ಪ್ರಕರಣ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಅಪರಾಧ ಪ್ರಕರಣಗಳಿಗೆ ಉತ್ತೇಜನ ನೀಡುತ್ತಿರುವ ಡ್ರಗ್ಸ್​ ದಂಧೆಯನ್ನು ಮೊದಲು ನಿಯಂತ್ರಿಸಲೇಬೇಕು.

    ಜಿಲ್ಲೆಗೆ ಭೇಟಿ ನೀಡಿ

    ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್​, ಧಾರ್ಮಿಕ ಕ್ಷೇತ್ರದ ಮೂಲಕ ಜಗತ್ತಿನ ಗಮನ ಸೆಳೆಯುವ ಉಡುಪಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಕಾಂಗ್ರೆಸ್​ ಸರ್ಕಾರ ವಿಫಲವಾಗಿದೆ. ತಕ್ಷಣ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕನ ಮಾಡಬೇಕು ಎಂದು ಯಶ್​ಪಾಲ್​ ಸುವರ್ಣ ಆಗ್ರಹಿಸಿದ್ದಾರೆ.

    ವಿಡಿಯೋ ದೃಶ್ಯಾವಳಿ ಆಧರಿಸಿ ಉಡುಪಿ ನಗರ ಠಾಣೆಯಲ್ಲಿ ಮೇ 20ರಂದು ಪ್ರಕರಣ ದಾಖಲು ಮಾಡಿಕೊಂಡಿದ್ದು ಕಾಪುವಿನ ಗರುಡ ಗ್ಯಾಂಗ್​ನ ಮೂವರನ್ನು ಬಂಧಿಸಿದ್ದೇವೆ. ಅವರ ಗ್ಯಾಂಗ್​ ಈಗ ಸಕ್ರಿಯವಾಗಿರಲಿಲ್ಲ. ಅವರೊಳಗೇ ಒಳಜಗಳ, ವೈಮನಸ್ಸು ಇದ್ದು, ಎರಡು ತಂಡವಾಗಿತ್ತು. ಹೀಗಾಗಿಯೇ ಅವರು ಹೊಡೆದಾಡಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ. ಗ್ಯಾಂಗ್​ನಲ್ಲಿರುವ ನಾಪತ್ತೆಯಾದವರನ್ನೂ ಶ್ರೀ ಬಂಧಿಸಲಾಗುವುದು.

    ಡಾ. ಕೆ.ಅರುಣಕುಮಾರ್​.
    ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts