More

    ಕುಡಿವ ನೀರಿನ ಘಟಕ ಅಪೂರ್ಣ, ಕಡಬದಲ್ಲಿ ಪಾಳುಬಿದ್ದ ಘಟಕವನ್ನು ಕೇಳುವವರೇ ಇಲ್ಲ

    ಕಡಬ: ಕಡಬ ಪೇಟೆಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ 2 ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಪಾಳುಬಿದ್ದಿದೆ.

    ಗ್ರಾಮೀಣ ಜನರಿಗೆ ನೀರು ಪೂರೈಕೆಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಘಟಕಗಳನ್ನು ನಿರ್ಮಿಸಲು ಹೊರಟಿತ್ತು. ಅಲ್ಲಿ ಜನರು 2 ರೂ. ನಾಣ್ಯ ಹಾಕಿ 20 ಲೀಟರ್ ನೀರು ಪಡೆಯುವ ಗುರಿ ಹೊಂದಿತ್ತು. ಆದರೆ ಬಹುತೇಕ ಕಡೆ ಈ ರೀತಿಯ ಘಟಕಗಳು ನಿಷ್ಪ್ರಯೋಜಕವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.
    ಕಡಬ ಪೇಟೆಯ ಅಂಚೆ ಕಚೇರಿ ಸಮೀಪವೂ ಘಟಕ ಆರಂಭಿಸಲು 2 ವರ್ಷಗಳ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ಲೋಹದ ಶೀಟ್ ಬಳಸಿ ಕಟ್ಟಡ ನಿರ್ಮಾಣ ನಡೆಸಿ ಅದರ ಹತ್ತಿರದಲ್ಲಿ ನೀರು ಶುದ್ಧೀಕರಿಸಲು ಒಂದು ಬೃಹತ್ ಲೋಹದ ಹಾಗೂ ಇನ್ನೊಂದು ಫೈಬರ್ ಟ್ಯಾಂಕ್ ತಂದಿರಿಸಿ ಹೋದ ಕೆಲಸಗಾರರು ಆ ಬಳಿಕ ಅತ್ತ ತಲೆಹಾಕಿಯೂ ನೋಡಿಲ್ಲ.

    ಶುದ್ಧೀಕರಿಸುವ ಬೆಲೆ ಬಾಳುವ ಯಂತ್ರ ಸೇರಿ ಕೆಲವು ಸಲಕರಣೆ ಹತ್ತಿರದ ಗುಜರಿ ವ್ಯಾಪಾರದ ಅಂಗಡಿಯಲ್ಲಿರಿಸಲಾಗಿದೆ. ಸುಮಾರು 8 ಲಕ್ಷ ರೂ. ವೆಚ್ಚದ ಘಟಕ ಈ ರೀತಿ ಪಾಳುಬಿದ್ದಿದ್ದರೂ ಅಧಿಕಾರಿಗಳು ಈ ಬಗ್ಗೆ ಚಕಾರ ಎತ್ತದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಘಟಕದ ಕೆಲಸ ನಡೆಯುವ ವೇಳೆ ಕಾಮಗಾರಿ ಕಳಪೆಯಾಗಿದೆ ಎಂದು ಜಿಪಂ ಸದಸ್ಯ ಪಿ.ಪಿ.ವರ್ಗೀಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ಕೆಲಸಗಾರರು ಅದನ್ನು ಸರಿಪಡಿಸಿದ್ದರು.

    ಈ ಹಿಂದೆ ಗ್ರಾಮ ಪಂಚಾಯಿತಿ ವ್ಯವಸ್ಥೆ ಇದ್ದಾಗ ಕಡಬ ಪೇಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕೆಲಸ ಆರಂಭಿಸಲಾಗಿತ್ತು. ಈಗ ಕಡಬದಲ್ಲಿ ಪಟ್ಟಣ ಪಂಚಾಯಿತಿ ವ್ಯವಸ್ಥೆ ಜಾರಿಗೆ ಬಂದಿದೆ. ಘಟಕದ ಕೆಲಸ ಪೂರ್ಣವಾಗದೇ ಇರುವುದರಿಂದ ಸ್ಥಳೀಯಾಡಳಿತಕ್ಕೆ ಹಸ್ತಾಂತರಿಸಿಲ್ಲ. ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಂಡು ನಮಗೆ ಹಸ್ತಾಂತರಿಸಿದ ಬಳಿಕವಷ್ಟೇ ನಾವು ಅದರ ನಿರ್ವಹಣೆ ಮಾಡಲು ಸಾಧ್ಯ.
    – ಅರುಣ್ ಕೆ., ಮುಖ್ಯಾಧಿಕಾರಿ, ಕಡಬ ಪಟ್ಟಣ ಪಂಚಾಯಿತಿ

    ನೀರಿನ ಘಟಕ ನಿರ್ಮಾಣ ಹಂತದಲ್ಲಿ ಕಳಪೆ ಕಂಡುಬಂದ ಹಿನ್ನೆಲೆ ಪ್ರತಿಭಟಿಸಿ ಹಣ ಬಿಡುಗಡೆಗೊಳಿಸದಂತೆ ಅಂದಿನ ತಾಲೂಕು ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಲಾಗಿತ್ತು. ಘಟಕದ ಕಾಮಗಾರಿ ವಹಿಸಿದ್ದ ಸಂಸ್ಥೆ ಅಪೂರ್ಣ ಕಾಮಗಾರಿ ನಡೆಸಿ, ಇತ್ತ ಗ್ರಾಪಂಗೆ ಹಸ್ತಾಂತರಿಸಿಲ್ಲ. ಕಾಮಗಾರಿ ತಕ್ಷಣ ಮುಗಿಸಬೇಕು, ಇಲ್ಲವಾದಲ್ಲಿ ಘಟಕವನ್ನು ಆ ಜಾಗದಿಂದ ತೆರವುಗೊಳಿಸಬೇಕು.
    – ಪಿ.ಪಿ.ವರ್ಗಿಸ್, ಜಿಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts