ಧೋನಿ ಮೇಲೆ ದ್ರಾವಿಡ್ ಸಿಟ್ಟಾಗಿದ್ದರು ಎಂದ ವೀರೇಂದ್ರ ಸೆಹ್ವಾಗ್​!

dravid sehwag dhoni web
Published on

ನವದೆಹಲಿ: ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸದಾ ಶಾಂತಚಿತ್ತದವರಾಗಿಯೇ ಕಾಣಿಸಿದ್ದ ರಾಹುಲ್ ದ್ರಾವಿಡ್, ಜಾಹೀರಾತು ಒಂದರಲ್ಲಿ ‘ಗೂಡಾ’ಗಿರಿ ಪ್ರದರ್ಶಿಸಿರುವುದು ಇದೀಗ ಭಾರಿ ಚರ್ಚೆಗೆ ಒಳಗಾಗಿದೆ. ಬೆಂಗಳೂರು ಟ್ರಾಫಿಕ್‌ನಲ್ಲಿ ದ್ರಾವಿಡ್ ಕೂಡ ಯಾವ ರೀತಿ ಸಿಟ್ಟಾಗಬಹುದು ಎಂಬುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ದ್ರಾವಿಡ್‌ರ ಸಹ-ಆಟಗಾರರಾಗಿದ್ದ ವೀರೇಂದ್ರ ಸೆಹ್ವಾಗ್ ದ್ರಾವಿಡ್ ಈ ಹಿಂದೆಯೂ ಸಿಟ್ಟಾಗಿದ್ದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.

ಎಂಎಸ್ ಧೋನಿ ಯುವ ಆಟಗಾರರಾಗಿ ಟೀಮ್ ಇಂಡಿಯಾಗೆ ಬಂದಿದ್ದ ವೇಳೆ ಅವರ ಮೇಲೆ ದ್ರಾವಿಡ್ ಯಾವ ರೀತಿ ಸಿಟ್ಟಾಗಿದ್ದರು ಎಂದು ಸೆಹ್ವಾಗ್ ವಿವರಿಸಿದ್ದಾರೆ. ‘ರಾಹುಲ್ ದ್ರಾವಿಡ್ ಅವರ ನಿಜವಾದ ಕೋಪವನ್ನು ನಾನು ನೋಡಿದ್ದೇನೆ. ನಾವಾಗ ಪಾಕಿಸ್ತಾನದಲ್ಲಿದ್ದೆವು ಮತ್ತು ಧೋನಿ ಆಗಷ್ಟೇ ತಂಡಕ್ಕೆ ಬಂದಿದ್ದರು. ಧೋನಿ ಪಂದ್ಯವೊಂದರಲ್ಲಿ ಬಾರಿಸಿದ ಹೊಡೆತ ಪಾಯಿಂಟ್‌ನಲ್ಲಿ ಕ್ಯಾಚ್ ಆಗಿತ್ತು. ಆಗ ಧೋನಿ ಮೇಲೆ ಭಾರಿ ಸಿಟ್ಟಾಗಿದ್ದ ದ್ರಾವಿಡ್, ‘ಹೀಗಾ ನೀನು ಆಡುವುದು? ನೀನು ಪಂದ್ಯವನ್ನು ಮುಗಿಸಿ ಬರಬೇಕಾಗಿತ್ತು’ ಎಂದು ಸಿಡುಕಿದ್ದರು ಎಂಬುದಾಗಿ ಸೆಹ್ವಾಗ್​ ವಿವರಿಸಿದ್ದಾರೆ.

ಮುಂದಿನ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್‌ಗೆ ಇಳಿದಾಗ ದೊಡ್ಡ ಹೊಡೆತಗಳನ್ನು ಬಾರಿಸುತ್ತಿರಲಿಲ್ಲ. ಏನಾಯಿತು ನಿನಗೆ ಎಂದು ಕೇಳಿದಾಗ ಧೋನಿ, ದ್ರಾವಿಡ್‌ರಿಂದ ಮತ್ತೊಮ್ಮೆ ಬೈಗುಳ ತಿನ್ನಲಾರೆ. ಈ ಬಾರಿ ಪಂದ್ಯವನ್ನು ಮುಗಿಸಿಯೇ ಹೋಗುತ್ತೇನೆ ಎಂದಿದ್ದರು ಎಂದು ಸೆಹ್ವಾಗ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net