More

    ಹೇಳಿದಂತೆಯೇ ನಡೆದುಕೊಂಡರು ಡಾ. ರಾಜಕುಮಾರ್​

    ‘ಅಮೂಲ್ಯವಾದ ಈ ಕಣ್ಣುಗಳು ಮಣ್ಣುಪಾಲಾಗುವುದಕ್ಕಿಂತ ಕತ್ತಲಲ್ಲಿರುವ ಇಬ್ಬರು ಅಂಧರಿಗೆ ದಾರಿದೀಪವಾಗಲಿ …ಎಲ್ಲರೂ ಮನಸ್ಸು ಮಾಡೋಣ’

    ಹಾಗಂತ ಕರೆ ನೀಡಿದ್ದರು ಡಾ. ರಾಜಕುಮಾರ್. 90ರ ದಶಕದಲ್ಲಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವುದರ ಜತೆಗೆ ಬೇರೆಯವರಿಗೆ ಈ ಕುರಿತು ಜಾಗೃತಿ ಮೂಡಿಸಿ ಮಾದರಿಯಾದರು. ಇಷ್ಟಕ್ಕೂ ರಾಜಕುಮಾರ್ ಅವರಿಗೆ ತಮ್ಮ ಕಣ್ಣುಗಳನ್ನು ದಾನ ಮಾಡಬೇಕೆಂದನಿಸಿದ್ದು ಯಾಕೆ? ಅದಕ್ಕೆ ಕಾರಣರಾದವರು ಖ್ಯಾತ ನೇತ್ರತಜ್ಞ ಡಾ. ಭುಜಂಗ ಶೆಟ್ಟಿ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದರಂತೆ ಡಾ. ಭುಜಂಗ ಶೆಟ್ಟಿ. ಅಷ್ಟೇ ಅಲ್ಲ, 80ರ ದಶಕದಲ್ಲೇ ಒಮ್ಮೆ ರಾಜಕುಮಾರ್ ಅವರಿಗೆ ಕಣ್ಣಿನ ಸಮಸ್ಯೆಯಾದಾಗ, ಚಿಕಿತ್ಸೆ ನೀಡಿದ್ದರಂತೆ. ಭುಜಂಗ ಶೆಟ್ಟರಿಗೆ ಒಂದು ಕಣ್ಣಿನ ಬ್ಯಾಂಕ್ ಸ್ಥಾಪಿಸಬೇಕು ಎಂಬ ಆಸೆ ಬಹಳ ವರ್ಷಗಳಿಂದ ಇದ್ದು, ಅದಕ್ಕೊಂದು ಬಲವಾದ ಕಾರಣವೂ ಇತ್ತು. ಅದೇನೆಂದರೆ, ಕಣ್ಣಿನ ಕಸಿಗೆ ಆಗೆಲ್ಲ ಶ್ರೀಲಂಕಾದರಿಂದ ಕಣ್ಣುಗಳನ್ನು ತರಿಸಬೇಕಿತ್ತಂತೆ. ಶ್ರೀಲಂಕಾದಲ್ಲಿ ಸಿಗುವುದು, ನಮ್ಮಲ್ಲಿ ಯಾಕೆ ಸಿಗುವುದಿಲ್ಲ ಎಂದು ಅವರು ರೀಸರ್ಚ್ ಮಾಡಿದಾಗ, ಅವರಿಗೆ ಆಶ್ಚರ್ಯವಾಗಿದೆ. ಅದೇನೆಂದರೆ, ಅಂಗ ದಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಅಲ್ಲಿನ ಜನರಲ್ಲಿ ಬಲವಾಗಿ ಬೇರೂರಿದೆ. ಹಾಗಾಗಿ, ಯಾರಾದರೂ ನಿಧನರಾದಾಗ ಅವರ ಕಣ್ಣುಗಳನ್ನು ದಹನ ಮಾಡುವುದಿಲ್ಲ. ಅದರ ಬದಲು ದಾನ ಮಾಡಲಾಗುತ್ತದೆ.

    ಇಂಥದ್ದೊಂದು ಪರಿಕಲ್ಪನೆಯನ್ನು ನಮ್ಮಲ್ಲೂ ಯಾಕೆ ಅಳವಡಿಸಿಕೊಳ್ಳಬಾರದು, ಮನುಷ್ಯ ನಿಧನರಾದಾಗ ಆತನ ಕಣ್ಣುಗಳನ್ನು ಸುಡುವ ಅಥವಾ ಹೂಳುವ ಬದಲು, ಯಾಕೆ ಅದನ್ನು ಕಣ್ಣಿಲ್ಲದವರಿಗೆ ದಾನ ಮಾಡಬಾರದು ಎಂದನಿಸಿತಂತೆ. ದೊಡ್ಡ ವ್ಯಕ್ತಿಯೊಬ್ಬರು ಈ ವಿಷಯವಾಗಿ ಮಾತಾಡಿದರೆ, ಆಗ ಜನರಲ್ಲಿ ಜಾಗೃತಿ ಮೂಡಬಹುದು ಎಂದು ಅವರಿಗೆ ಸ್ಪಷ್ಟವಾಗಿದೆ. ಅಷ್ಟೇ ಅಲ್ಲ, ಇಂಥದ್ದೊಂದು ಮಹತ್ಕಾರ್ಯಕ್ಕೆ ರಾಜಕುಮಾರ್ ಅವರಿಗಿಂತ ಇನ್ನೊಬ್ಬ ಸೂಕ್ತ ವ್ಯಕ್ತಿಯಿಲ್ಲ ಎಂದನಿಸಿದೆ. ಈ ಮಧ್ಯೆ, ಭುಜಂಗ ಶೆಟ್ಟಿ ಅವರ ನಾರಾಯಣ ನೇತ್ರಾಲಯವು ರಾಜಾಜಿನಗರಕ್ಕೆ ಶಿಫ್ಟ್ ಆಯಿತಂತೆ. ಈ ಸಂದರ್ಭದಲ್ಲಿ ಅದನ್ನು ಉದ್ಘಾಟಿಸಿದ್ದು ರಾಜಕುಮಾರ್. ಕಣ್ಣುಗಳಿಗೆ ಇಷ್ಟು ದೊಡ್ಡ ಆಸ್ಪತ್ರೆಯನ್ನು ನೋಡಿಯೇ ಇರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಇದಾಗಿ, ಕೆಲವೇ ದಿನಗಳಲ್ಲಿ ರಾಜಕುಮಾರ್ ಅವರ ತಂಗಿ ಶಾರದಮ್ಮನವರ ಕಣ್ಣಿನ ಪೊರೆ ಆಪರೇಷನ್ ಅದೇ ನಾರಾಯಣ ನೇತ್ರಾಲಯದಲ್ಲಿ ನಡೆದಿದೆ. ತಂಗಿಯ ಆರೋಗ್ಯ ವಿಚಾರಿಸಲು ಬಂದ ರಾಜಕುಮಾರ್ ಅವರ ಜತೆಗೆ ಭುಜಂಗ ಶೆಟ್ಟಿ ಮಾತಾಡಿದರಂತೆ. ಕಣ್ಣುಗಳನ್ನು ದಹನ ಮಾಡುವ ಬದಲು ದಾನ ಮಾಡಿದರೆ, ಇಬ್ಬರು ಅಂಧರಿಗೆ ದೃಷ್ಟಿ ಕೊಡಬಹುದು ಎಂದು ಅರ್ಥ ಮಾಡಿಸಿದರಂತೆ. ಆಗ ರಾಜಕುಮಾರ್ ಅವರು ಕೇಳಿದ್ದು ಒಂದೇ ಮಾತು, ಈ ವಿಷಯದಲ್ಲಿ ತಮ್ಮಿಂದ ಏನಾಗಬೇಕು ಎಂದು. ಒಂದು ಕಣ್ಣಿನ ಬ್ಯಾಂಕ್ ಸ್ಥಾಪನೆ ಮಾಡಿ, ಅದಕ್ಕೆ ರಾಜಕುಮಾರ್ ಹೆಸರಿಟ್ಟರೆ, ಆಗ ಜನರಿಗೂ ನೇತ್ರದಾನ ಮಾಡುವ ಸ್ಪೂರ್ತಿ ಬರಬಹುದು ಎಂದು ಹೇಳಿದಾಗ ತಕ್ಷಣವೇ ಒಪ್ಪಿಕೊಂಡರಂತೆ. ಅಷ್ಟೇ ಅಲ್ಲ, ಒಂದು ತಿಂಗಳಲ್ಲಿ ಡಾ. ರಾಜ್ ನೇತ್ರದಾನ ಕೇಂದ್ರವನ್ನು ಅವರೇ ಉದ್ಘಾಟನೆ ಮಾಡಿದರಂತೆ. ಈ ಸಂದರ್ಭದಲ್ಲಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವುದರ ಜತೆಗೆ, ಕುಟುಂಬದವರ ಕಣ್ಣುಗಳನ್ನು ಸಹ ದಾನ ಮಾಡುವುದಾಗಿ ಘೋಷಿಸಿದರಂತೆ.

    ರಾಜಕುಮಾರ್ ಈ ವಿಷಯವನ್ನು ಅದೆಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರು ಎಂದರೆ, ಪದೇಪದೇ ಈ ವಿಷಯವನ್ನು ಮನೆಯವರಿಗೆ ನೆನಪಿಸುತ್ತಿದ್ದರಂತೆ. ನಿಧನರಾಗುವ ಒಂದು ವಾರದ ಹಿಂದೆ ಸಹ, ‘ನಾವು ನೇತ್ರದಾನ ಮಾಡುತ್ತೇವೆಂದು ಹೇಳಿದ್ದು ನೆನಪಿದೆ ತಾನೆ?’ ಎಂದು ತಮಗೆ ನೆನಪಿಸಿದ್ದರು ಪಾರ್ವತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದಕ್ಕೆ ಸರಿಯಾಗಿ, ರಾಜಕುಮಾರ್ ಅವರು ಹೇಳಿದ್ದಷ್ಟೇ ಅಲ್ಲ, ಅವರು ನಿಧನರಾದ ಮೇಲೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.

    ರಾಜಕುಮಾರ್ ಅವರಿಂದ ಪ್ರಾರಂಭವಾದ ಈ ‘ನೇತ್ರದಾನ ಮಹಾದಾನ’ ಅಭಿಯಾನವು ಸಾಕಷ್ಟು ಜನಪ್ರಿಯವಾಗುವುದರ ಜತೆಗೆ, ಇದುವರೆಗೆ 70 ಸಾವಿರಕ್ಕೂ ಹೆಚ್ಚು ಜನ ನೋಂದಾಯಿಸಿದ್ದಾರೆ. ಇನ್ನು, 15 ಸಾವಿರದಷ್ಟು ಜನ ಇದುವರೆಗೂ ಕಣ್ಣುಗಳನ್ನು ದಾನ ಮಾಡಿದ್ದಾರೆ ಎನ್ನುವುದು ವಿಶೇಷ.

    ನೇತ್ರದಾನ ಯಾಕೆ ಮಹತ್ವ ಪಡೆಯುತ್ತದೆ ಎಂದರೆ, ಬರೀ ಅಂಧರಿಗಷ್ಟೇ ಅಲ್ಲ, ನಾನಾ ಕಾರಣಗಳಿಂದ ಉಂಟಾಗುವ ಕಣ್ಣಿನ ಹಾನಿಗೂ ಪರಿಹಾರ ಒದಗಿಸಲಿದೆ. ಕೋವಿಡ್ ಸಂದರ್ಭದಲ್ಲಿ ದಾನಿಗಳಿಲ್ಲದೆ ಕಣ್ಣಿನ ಸಣ್ಣ-ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಇದರಿಂದ ಸಾವಿರಾರು ಜನರಿಗೆ ತೊಂದರೆಯಾಗಿದೆ. ಅದರಿಂದ ಸ್ವಯಂಪ್ರೇರಿತರಾಗಿ ನೇತ್ರದಾನ ಮಾಡಿ.

    | ಡಾ. ಭುಜಂಗ ಶೆಟ್ಟಿ ನಿರ್ದೇಶಕರು, ನಾರಾಯಣ ನೇತ್ರಾಲಯ

    ಮುತ್ತುರಾಜ ರಾಜಕುಮಾರ್ ಆಗಿದ್ದು ಹೀಗೆ…

    ಅಭಿಮಾನಿಗಳು ದೇವರಾದ ಕಥೆ: ಇಂದು ಡಾ.ರಾಜ್​ಕುಮಾರ್ ಅವರ 15ನೇ ಪುಣ್ಯಸ್ಮರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts