More

    ಬಿಜೆಪಿ-ಜೆಡಿಎಸ್​ಗೆ ಶಾಕ್​; ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಸಿ. ಎನ್. ಮಂಜುನಾಥ್ ಹೆಸರಿನ ಮತ್ತೋರ್ವ ಕಣಕ್ಕೆ

    ಬೆಂಗಳೂರು: ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆಯಲ್ಲಿ ನಿರತರಾಗಿದ್ದಾರೆ. ಅದರಂತೆ ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಇಡೀ ರಾಜ್ಯದ ಗಮನ ಸೆಳೆದಿದ್ದು, ಹೈವೋಲ್ಟೇಜ್​ ಕ್ಷೇತ್ರವಾಗಿ ಹೊರಹೊಮ್ಮಿದೆ. ಇದೀಗ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ. ಸಿ.ಎನ್. ಮಂಜುನಾಥ್​ ವಿರುದ್ಧ ಅದೇ ಹೆಸರಿನ ಅಭ್ಯರ್ಥಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯಿಂದ ಡಾ. ಸಿ.ಎನ್‌. ಮಂಜುನಾಥ್ ಅವರು ಸ್ಪರ್ಧಿಸಿದ್ದಾರೆ. ಇದೀಗ ಅದೇ ಹೆಸರಿನ ಮತ್ತೊಬ್ಬರು ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಇವರ ಹೆಸರು ಸಹ ಸಿ.ಎನ್. ಮಂಜುನಾಥ್. ಅಂದಹಾಗೆ ಇವರು ಸಹ ಡಾ. ಮಂಜುನಾಥ್ ಅವರ ತವರು ಚನ್ನರಾಯಪಟ್ಟಣದವರೇ ಎಂಬುದು ವಿಶೇಷ.

    ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಸ್ಪರ್ಧೆ ಒಡ್ಡಲು ಅದೇ ಹೆಸರಿನ ಗೌರವ ಡಾಕ್ಟರೇಟ್ ಮೂಲಕ ತಮ್ಮ ಹೆಸರಿನ ಮುಂದೆ ಡಾಕ್ಟರ್ ಹೊಂದಿರುವ ಡಾ.ಸಿ.ಎನ್.ಮಂಜುನಾಥ್ ಎಂಬುವವರು ಬಹುಜನ ಭಾರತ್ ಪಾರ್ಟಿಯಿಂದ ಸ್ಪರ್ಧಿಸಲು ನಿರ್ಧರಿಸಿರೊದಾಗಿ ಘೋಷಣೆ ಮಾಡಿದ್ದು ತೀವ್ರ ಕುತೂಹಲ ಮೂಡಿಸಿದೆ. ಅಚ್ಚರಿಯ ಸಂಗತಿಯೆಂದರೆ ಒಂದೇ ಹೆಸರು ಹೊಂದಿರುವ ಇಬ್ಬರು ಮಂಜುನಾಥ್​ ಅವರುಗಳ ತಂದೆಯ ಹೆಸರೂ ಒಂದೇ ಆಗಿದ್ದು, ಒಂದೇ ಜಿಲ್ಲೆ, ಒಂದೇ ತಾಲ್ಲೂಕಿನವರಾಗಿರೋದು ಕೂಡ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.

    DR CN Manjunath

    ಇದನ್ನೂ ಓದಿ: ಬಿಸಿಲಿನ ಝಳದಿಂದ ದೇಹವನ್ನು ಹೈಡ್ರೇಟೆಡ್ ಆಗಿಡುವ ಹಣ್ಣುಗಳಿವು; ನಿರಂತರ ಸೇವನೆಯಿಂದ ಹಲವಾರು ಪ್ರಯೋಜನಗಳು

    ಇಬ್ಬರಲ್ಲಿ ಒಬ್ಬರು ವೃತ್ತಿಯಿಂದ ವೈದ್ಯರು, ಮತ್ತೊಬ್ಬರು ಸಮಾಜ ಸೇವೆಗೆ ಗೌರವ ಡಾಕ್ಟರೇಟ್ ಪಡೆದಿರುವವರು ಎಂಬುದಷ್ಟೇ‌ ವ್ಯತ್ಯಾಸವಿದೆ. ಚನ್ನರಾಯಪಟ್ಟಣದ ತಾಲ್ಲೂಕು ಪಂಚಾಯಿತಿ ಮತ್ತು ಪುರಸಭೆಯ ಮಾಜಿ ಸದಸ್ಯರಾಗಿರುವ ಮಂಜುನಾಥ್ ಅವರು ಪಟ್ಟಣದ ಶಾರದಾನಗರದವರು. ದಲಿತ ಸೇನಾ ಪಡೆ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಅವರು, ಮಾದಿಗ ದಂಡೋರ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್‌ಪಿ ಕಾರ್ಯಕರ್ತರಾಗಿಯೂ ಕೆಲಸ ಮಾಡಿರುವ ಇವರು ಏಪ್ರಿಲ್​ 02 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಇಂತಹದೊಂದು ಘಟನೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಡೆದಿತ್ತು. ಹೌದು, ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​​ ಅವರ ಗೆಲುವಿಗಾಗಿ, ಪ್ರತಿಸ್ಪರ್ಧಿಯಾಗಿದ್ದ ಸುಮಲತಾ ಅವರನ್ನು ಸೋಲಿಸಲು, ಅವರ ಹೆಸರಿನವರನ್ನೇ ನಾಲ್ಕು ಮಹಿಳೆಯರನ್ನು ಕಣಕ್ಕೀಳಿಸಲಾಗಿತ್ತು. ಇದೀಗ ಅಂತಹುದೇ ಘಟನೆ ಮತ್ತೆ ಜರುಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts