More

    ವರದಕ್ಷಿಣೆ ಕಿರುಕುಳ ಆರೋಪ : ದಂತವೈದ್ಯನಿಗೆ ಹೈಕೋರ್ಟ್ ಜಾಮೀನು

    ಬೆಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಬಂಧನ ಭೀತಿ ಎದುರಿಸುತ್ತಿರುವ ಮಲೇಷ್ಯಾದ ದಂತವೈದ್ಯನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ಪ್ರಕರಣ ಸಂಬಂಧ ಜಾಮೀನು ಕೋರಿ ತುಮಕೂರಿನ ಅಮರಜ್ಯೋತಿನಗರ ನಿವಾಸಿ ಎಂ.ಎಸ್. ಮಧು ನಿರಂಜನ್ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಎಸ್. ರಾಚಯ್ಯ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

    ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪತಿಯೂ ಆಗಾಗ ಭಾರತಕ್ಕೆ ಬರುತ್ತಿದ್ದು, ದೂರುದಾರರ ಜತೆ ಒಟ್ಟಾಗಿ ಕಾಲ ಕಳೆಯುತ್ತಿದ್ದರು. ಆತನಿಗೆ ಅನಿವಾರ್ಯ ಕಾರಣದಿಂದಾಗಿ ಪತ್ನಿಯನ್ನು ಜತೆಗೆ ಮಲೇಷ್ಯಾಗೆ ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ದಂಪತಿಗಳ ನಡುವೆ ಮೂಡಿದ ಭಿನ್ನಾಭಿಪ್ರಾಯ ಪರಸ್ಪರ ಮಾತನಾಡಿಕೊಂಡು ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.

    ಅಲ್ಲದೆ, ದೂರಿನಲ್ಲಿ ಅರ್ಜಿದಾರರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ. ತನಿಖೆಯ ಎಲ್ಲ ಹಂತದಲ್ಲೂ ಸಹಕರಿಸಲು ಸಿದ್ಧವಿದ್ದು, ನ್ಯಾಯಾಲಯ ವಿಧಿಸುವ ಷರತ್ತು ಪಾಲನೆ ಮಾಡುವಲ್ಲಿ ಬದ್ಧರಾಗಿದ್ದಾರೆ. ಹಾಗಾಗಿ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
    ಈ ವೇಳೆ ಸರ್ಕಾರಿ ಪರ ವಕೀಲರು, ಅರ್ಜಿದಾರರು ಪತ್ನಿಗೆ ನಂಬಿಸಿ ಮೋಸ ಮಾಡಿದ್ದಾರೆ.

    ದೂರಿನ ಪ್ರತಿಯನ್ನು ಗಮನಿಸಿದರೆ ಆತ ಪತ್ನಿಯ ಮೇಲೆ ಕ್ರೌರ್ಯ ಎಸಗಿರುವುದು, ವರದಕ್ಷಿಣೆಗಾಗಿ ಕಿರುಕುಳ ನೀಡಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಪ್ರಕರಣದಲ್ಲಿ ಅರ್ಜಿದಾರರಿಗೆ ಜಾಮೀನು ನೀಡಿದಲ್ಲಿ ಪ್ರಕರಣವನ್ನು ತಿದ್ದುವ ಸಾಧ್ಯತೆ ಇದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

    ಕೆಲ ಕಾಲ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿದಾರನಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದೇಶದ ಪ್ರತಿ ಲಭ್ಯವಾದ ತಿಂಗಳೊಳಗಾಗಿ ಅರ್ಜಿದಾರರು ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಅರ್ಜಿದಾರ 2 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯಾಧಾರ ತಿರುಚಲು ಪ್ರಯತ್ನಿಸಬಾರದು.

    ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಇದೇ ಮಾದರಿಯ ಅಪರಾಧದಲ್ಲಿ ಭಾಗಿಯಾಗಬಾರದು ಎಂದು ನ್ಯಾಯಪೀಠ ಷರತ್ತು ವಿಧಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts