More

    ಅರ್ಥಹೀನ ಕೆಲಸ ಮಾಡಬಾರದು: ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಭಿಕ್ಕು ಆನಂದ ಭಂತೇಜಿ

    ಮೈಸೂರು: ಉತ್ತರ ಸಿಗದ, ಸಮಸ್ಯೆಗೆ ಪರಿಹಾರ ನೀಡದ ಕೆಲಸ ಅರ್ಥಹೀನ ಎಂಬುದು ಬುದ್ಧನ
    ಸಂದೇಶ ಎಂದು ಬೆಂಗಳೂರಿನ ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಭಿಕ್ಕು ಆನಂದ ಭಂತೇಜಿ ಹೇಳಿದರು.
    ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ವೈಶಾಖ ಬುದ್ಧ ಪೂರ್ಣಿಮೆ, ಬುದ್ಧ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಪ್ರತಿಯೊಬ್ಬರನ್ನೂ ಯೋಗ್ಯರನ್ನಾಗಿಸುವಲ್ಲಿ ಬುದ್ಧ ಮಾರ್ಗ ತೋರಿಸಿದ್ದಾನೆ. ದೇವರು, ಸೃಷ್ಠಿಕರ್ತ, ಸ್ವರ್ಗ, ನರಕ ಇತ್ಯಾದಿ ಕಾಲ್ಪನಿಕ ಕಥೆಗಳ ಅಸ್ತಿತ್ವ ಕುರಿತು ಬುದ್ಧ ಎಂದಿಗೂ ಚರ್ಚಿಸುತ್ತಿರಲಿಲ್ಲ. ಉತ್ತರ ಸಿಗದ, ಸಮಸ್ಯೆಗೆ ಪರಿಹಾರ ನೀಡದ ವಿಷಯಗಳ ಚರ್ಚಿಸುವುದು ವ್ಯರ್ಥಪ್ರಯತ್ನ ಮತ್ತು ಅರ್ಥಹೀನ ಕೆಲಸ ಎಂದು ನಂಬಿದ್ದ ಎಂದರು.
    ಮನುಷ್ಯನ ದುಃಖಕ್ಕೆ ಕಾರಣವಾದ ಸಂಗತಿಗಳು ಮತ್ತು ಅವುಗಳ ಪರಿಹಾರದ ಜತೆಗೆ ಜೀವ ಸಂಕುಲದ ಉನ್ನತಿಗೆ ಅಗತ್ಯವಾದ ಕಾರ್ಯಗಳ ಬಗ್ಗೆ ಮಾತ್ರ ಗಮನ ಹರಿಸಬೇಕು ಎಂಬುದು ಬದ್ಧನ ಜ್ಞಾನದ ಫಲಶೃತಿಯಾಗಿತ್ತು ಎಂದು ವಿವರಿಸಿದರು.
    ಯುದ್ಧಕ್ಕೆ ಮನದಲ್ಲೇ ಪರಿಹಾರ ಇದೆ
    ಪ್ರಪಂಚದಾದ್ಯಂತ ಹಿಂದಿನಿಂದಲೂ ಯುದ್ಧಗಳು ನಡೆದು ಅಪಾರ ಪ್ರಮಾಣದ ಸಾವು- ನೋವುಗಳು ಸಂಭವಿಸಿವೆ. ಈ ಯುದ್ಧಗಳು ಮೊದಲು ನಮ್ಮ ಮನಸ್ಸಿನಲ್ಲಿ ಆರಂಭವಾಗುತ್ತವೆ. ಯುದ್ಧಕ್ಕೆ ಪರಿಹಾರವೂ ನಮ್ಮ ಮನಸ್ಸಿನಲ್ಲಿಯೇ ಇದೆ. ವೈರತ್ವದಿಂದ ವೈರತ್ವ ಬೆಳೆಯುತ್ತದೆಯೇ ವಿನಃ ಶಾಂತಿ ನೆಲೆಸುವುದಿಲ್ಲ. ಪ್ರಜ್ಞಾ, ಕರುಣಾ, ಮೈತ್ರಿಯಿಂದ ಮಾತ್ರ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಭಂತೇಜಿ ತಿಳಿಸಿದರು.
    ನನ್ನನ್ನು ನಂಬಿದರೆ ಸ್ವರ್ಗಕ್ಕೆ ದಾರಿ ಸಿಗುತ್ತದೆ, ಇಲ್ಲವಾದರೆ ನರಕವೇ ಗತಿ ಎಂದು ಜನರನ್ನು ಭಯ ಪಡಿಸುತ್ತಿದ್ದ ಕಾಲಘಟ್ಟದಲ್ಲಿ ಬುದ್ಧ ಜನರನ್ನು ಧರ್ಮಾಧಾರಿತ ಭಯದ ಸಂಕೋಲೆಯಿಂದ ಬಿಡುಗಡೆಗೊಳಿಸಿದ. ಮನುಷ್ಯ ತನ್ನನ್ನು ತಾನು ಅರಿತುಕೊಂಡರೆ ಮಾತ್ರ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಯಾವುದೋ ಕಾಣದ ಶಕ್ತಿ ನಮ್ಮ ದುಃಖಕ್ಕೆ ಪರಿಹಾರ ಸೂಚಿಸುತ್ತದೆ ಎಂದು ಕೂರುವುದು ಸರಿಯಲ್ಲ ಎಂದು ಬುದ್ಧ ಸಾರಿದ್ದ ಎಂದು ಅವರು ಹೇಳಿದರು.
    ಉಪನ್ಯಾಸ ನೀಡುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ‘ದೇವರು ಇದ್ದಾನೋ, ಇಲ್ಲವೋ ಎಂದು ಬುದ್ಧನನ್ನು ಕೇಳುತ್ತಾನೆ. ಅದಕ್ಕೆ ಬುದ್ಧ ಈ ಚರ್ಚೆಯಿಂದ ಯಾವುದೇ ಪ್ರಯೋಜನವಿಲ್ಲ. ನಿನ್ನ ದುಃಖ ಮತ್ತು ನೋವಿನ ಬಗ್ಗೆ ಹೇಳಿದರೆ ಖಂಡಿತಾ ಪರಿಹಾರ ಸೂಚಿಸುತ್ತೇನೆ ಎಂದ.
    ಆತ ಉತ್ತರಕ್ಕೆ ಪಟ್ಟು ಹಿಡಿದಾಗ ‘ಕಾಡಿನ ಮಧ್ಯೆ ನೀನು ಹೋಗುವಾಗ ಬಾಣ ತಾಗುತ್ತದೆ.
    ಆ ಕ್ಷಣದಲ್ಲಿ ಬಾಣ ಯಾರು ಬಿಟ್ಟರು, ಯಾವ ದಿಕ್ಕಿನಿಂದ ಬಂತು ಎಂದು ಆಲೋಚಿಸುತ್ತಾ ಕೂರಬಾರದು. ದೇಹಕ್ಕೆ ನೆಟ್ಟಿರುವ ಬಾಣ ತೆಗೆದು ಪ್ರಾಣಾಪಾಯದಿಂದ ಪಾರಾಗುವುದರ ಕಡೆ ಗಮನ ಹರಿಸಬೇಕು ಎಂದರು.
    ಅಪಾಯಬಂದಾಗ ಮೊದಲು ಪ್ರಾಣಾಪಾಯದಿಂದ ಪಾರಾಗಲು ಪ್ರಯತ್ನಿಸಬೇಕು. ದೇವರನ್ನು ನಂಬುವುದು, ನಂಬದೇ ಇರುವುದರಿಂದ ದುಃಖ ಪರಿಹಾರ ಆಗುವುದಿಲ್ಲ. ನಾವು ಬದುಕಿಗೆ ಅಗತ್ಯವಾದ ವಿಷಯದ ಕಡೆ ಗಮನ ಹರಿಸಬೇಕು. ಉಪಯೋಗವಿಲ್ಲದ ಯಾವುದೇ ವಿಷಯ ಕುರಿತು ಮಾತನಾಡುತ್ತಾ ಕಾಲಹರಣ ಮಾಡಬಾರದು ಎಂದರು.
    ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಸ್.ನರೇಂದ್ರಕುಮಾರ್, ಬೌದ್ಧ ಭಿಕ್ಕುಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts