More

    ನಿಗೂಢವಾಗಿಯೇ ಉಳಿಯುತ್ತಿದ್ದಾರೆ ಕಿಮ್​ ಜಾಂಗ್​ ಉನ್​…! ಈಗ ಅಮೆರಿಕ ಅಧ್ಯಕ್ಷ ಟ್ರಂಪ್​ ಮಾತು ಅನುಮಾನ ಹುಟ್ಟುಹಾಕಿದೆ…

    ವಾಷಿಂಗ್ಟನ್​: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್​ ಅವರ ಆರೋಗ್ಯ ಸ್ಥಿತಿ ಸದ್ಯದ ಮಟ್ಟಿಗೆ ಜಗತ್ತಿನ ಮಟ್ಟಿಗೆ ಅತ್ಯಂತ ದೊಡ್ಡ ಗುಟ್ಟಾಗಿ ಪರಿಣಮಿಸಿದೆ.

    ಅವರ ಆರೋಗ್ಯ ಸರಿಯಿಲ್ಲ ಎಂದಷ್ಟೇ ಹೇಳಲಾಗುತ್ತಿದೆ. ಆದರೆ ಎಲ್ಲಿದ್ದಾರೆ? ಯಾವ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ಕಿಂಚಿತ್ತೂ ಸಿಗುತ್ತಿಲ್ಲ. ಈ ಮಧ್ಯೆ ಕಿಮ್​ ಜಾಂಗ್​ ಉನ್​ ಅವರು ಮೃತಪಟ್ಟಿದ್ದಾರೆ. ಆದರೆ ಅಧಿಕೃತ ಘೋಷಣೆ ಮಾಡುತ್ತಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಇದರಿಂದಾಗಿ ಪ್ಯೊಂಗ್ಯಾಂಗ್ ಸೇರಿ ಉತ್ತರ ಕೊರಿಯಾದ ಹಲವು ಭಾಗಗಳಲ್ಲಿ ಜನರು ಆತಂಕಕ್ಕೀಡಾಗಿದ್ದಾರೆ.

    ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರು ಮತ್ತೊಂದು ಗೊಂದಲಮಯ ಹೇಳಿಕೆ ನೀಡಿದ್ದಾರೆ. ವೈಟ್​ಹೌಸ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಕಿಮ್​ ಜಾಂಗ್​ ಉನ್​ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಚೆನ್ನಾಗಿ ಗೊತ್ತಿದೆ. ಆದರೆ ನಿಮಗೆ ಅದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅವರ ಬಗ್ಗೆ ನನಗೆ ಎಲ್ಲವೂ ತಿಳಿದಿದೆ. ಸಾರ್ವಜನಿಕರೆದುರು ಅದನ್ನು ಮಾತನಾಡಲಾಗುವುದಿಲ್ಲ. ನಾನು ಕಿಮ್​ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಅಷ್ಟೇ ಎಂದಿದ್ದಾರೆ.

    ಎಪ್ರಿಲ್​ 15ರಂದು ಕಿಮ್ ಜಾಂಗ್​ ಉನ್​ ಅವರ ತಾತನ ಹುಟ್ಟುಹಬ್ಬದ ವಾರ್ಷಿಕೋತ್ಸವ ಇತ್ತು. ಆದರೆ ಅದರಲ್ಲಿ ಕಿಮ್​ ಅವರು ಪಾಲ್ಗೊಂಡಿರಲಿಲ್ಲ. ಏಪ್ರಿಲ್​ 11ರಿಂದಲೇ ನಾಪತ್ತೆಯಾಗಿದ್ದ ಅವರು ಈ ಸಮಾರಂಭಕ್ಕೆ ಬರುತ್ತಾರೆ ಎಂಬ ನಂಬಿಕೆ ಇತ್ತು. ಯಾಕೆಂದರೆ 2011ರಲ್ಲಿ ಅವರು ಸರ್ವಾಧಿಕಾರಿ ಪಟ್ಟಕ್ಕೆ ಏರಿದಾಗಿನಿಂದಲೂ ತಮ್ಮ ತಾತನ ಹುಟ್ಟುಹಬ್ಬದ ಸಮಾರಂಭವನ್ನು ತಪ್ಪಿಸುತ್ತಿರಲಿಲ್ಲ. ಏ.15ರ ಕಾರ್ಯಕ್ರಮದಲ್ಲಿ ಅವರು ಗೈರಾದಾಗಿನಿಂದಲೂ ಹಲವು ರೂಮರ್​ಗಳು ಹರಡಲು ಶುರುವಾದವು.

    ಕಿಮ್​ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಆದರೆ ಸರ್ಜರಿಯ ಬಳಿಕ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ ಎನ್ನಲಾಗಿದೆ. ಈ ಮಧ್ಯೆ ದಕ್ಷಿಣ ಕೊರಿಯಾದ ಭದ್ರತಾ ಸಲಹೆಗಾರ ಉತ್ತರ ಕೊರಿಯಾ ಸರ್ವಾಧಿಕಾರಿ ಆರೋಗ್ಯವಾಗಿದ್ದಾರೆ..ಬದುಕಿದ್ದಾರೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.

    ಆದರೆ ಈಗ ಟ್ರಂಪ್​ ಅವರು ಬೇರೆಯದ್ದೇ ಅರ್ಥ ಬರುವಂತೆ ಮಾತನಾಡುತ್ತಿದ್ದಾರೆ. ಕಿಮ್​ ಆರೋಗ್ಯದ ಬಗ್ಗೆ, ಅವರ ಸ್ಥಿತಿಯ ಬಗ್ಗೆ ನನಗೆ ಗೊತ್ತು, ಆದರೆ ಅದನ್ನು ಹೇಳಲಾಗುವುದಿಲ್ಲ. ನನಗೆ ಕಿಮ್ ಜಾಂಗ್ ಅವರೊಂದಿಗೆ ಉತ್ತಮ ಬಾಂಧವ್ಯ ಇದೆ. ಅಮೆರಿಕದಲ್ಲಿ ನಾನು ಅಧ್ಯಕ್ಷನಾಗಿದ್ದಕ್ಕೆ ಈ ದೇಶ ಮತ್ತು ಉತ್ತರ ಕೊರಿಯಾದ ಸಂಬಂಧ ಚೆನ್ನಾಗಿದೆ. ಇಲ್ಲದಿದ್ದರೆ ಯುದ್ಧ ಸನ್ನಿವೇಶ ಸೃಷ್ಟಿಯಾಗುತ್ತಿತ್ತು ಎಂದಿದ್ದಾರೆ.

    ಕಿಮ್ ಅವರು ಚೆನ್ನಾಗಿದ್ದಾರೆಂದು ನಾನು ಭಾವಿಸುತ್ತೇನೆ. ಉತ್ತರ ಕೊರಿಯಾ ಸರ್ವಾಧಿಕಾರಿಯ ಬಗ್ಗೆ ಸತ್ಯ ನನಗೆ ಗೊತ್ತಿದೆ..ನೀವು ಇನ್ನೇನು ಕೆಲವೇ ದಿನಗಳಲ್ಲಿ ಅದನ್ನು ಕೇಳುತ್ತೀರಿ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts