More

    ಸಾಮೂಹಿಕ ನಾಯಕತ್ವ ಫಲ ಕೊಡುವುದೇ?; ಯಡಿಯೂರಪ್ಪ ಹಾದಿಯಲ್ಲಿ ರಾಜೆ, ಚೌಹಾಣ್, ರಮಣ್!

    ಕೇಂದ್ರ ಸಚಿವರು ಮತ್ತು ಲೋಕಸಭಾ ಸದಸ್ಯರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿರುವುದು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳಲ್ಲಿ ಅತೃಪ್ತಿ ಉಂಟುಮಾಡಿದ್ದರೂ, ಈ ನಾಯಕರಿಗೆ ತಮ್ಮ ಕ್ಷೇತ್ರ ಮಾತ್ರವಲ್ಲ, ಅವುಗಳಾಚೆಗೂ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಬೇಕು ಎಂಬ ಟಾಸ್ಕ್ ನೀಡಲಾಗಿದೆ. ಅಂದರೆ, ಯಾರು ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುತ್ತಾರೋ ಅವರಿಗೆ ಸಿಎಂ ಸ್ಥಾನದ ಅದೃಷ್ಟವೂ ಒಲಿಯಬಹುದು. ಇದೇ ಕಾರಣಕ್ಕಾಗಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವ ಸಂದೇಶ ನೀಡಲಾಗಿದೆ. ರಾಜಸ್ಥಾನ ಚುನಾವಣೆಗೆ ಸಂಬಂಧಿಸಿ 200ರಲ್ಲಿ 41 ಸೀಟುಗಳಿಗೆ ಅಭ್ಯರ್ಥಿ ಘೊಷಿಸಲಾಗಿದೆ. ಅದರಲ್ಲಿ 7 ಮಂದಿ ಸಂಸದರಿಗೇ ಟಿಕೆಟ್ ನೀಡಿರುವುದು ವಿಶೇಷ. ರಾಜವರ್ಧನ್ ಸಿಂಗ್ ರಾಠೋಡ್, ದೇವ್ಜೀ ಪಟೇಲ್, ಡಾ. ಕಿಶೋರಿ ಲಾಲ್ ಮೀನಾ, ದಿಯಾ ಕುಮಾರಿ ಸೇರಿದಂತೆ ಹಲವರು ರಾಜ್ಯ ಚುನಾವಣೆಗೆ ಸಜ್ಜಾಗಬೇಕಿದೆ.

    | ರಾಘವ ಶರ್ಮ ನಿಡ್ಲೆ, ನವದೆಹಲಿ

    2018ರಲ್ಲಿ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್​ಗಢ, ತೆಲಂಗಾಣ ಮತ್ತು ಮಿಜೋರಾಂ ಒಳಗೊಂಡ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿತ್ತು. ಆದರೆ, ಈ ಸೋಲು ಬಿಜೆಪಿಗೆ 2019ರ ಲೋಕಸಭೆ ಚುನಾವಣೆ ಗೆಲುವಿಗೆ ಯಾವುದೇ ಹಾನಿ ಮಾಡಲಿಲ್ಲ. ಉತ್ತರ ಭಾರತದ ಮೂರು ಪ್ರಮುಖ ರಾಜ್ಯಗಳಾದ ರಾಜಸ್ಥಾನದಲ್ಲಿ ವಸುಂಧರಾ ರಾಜೆ ಸಿಂಧಿಯಾ, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್​ಗಢದಲ್ಲಿ ರಮಣ್ ಸಿಂಗ್ ನಾಯಕತ್ವಕ್ಕಾದ ಸೋಲು 2019ರ ಬಿಜೆಪಿ ಮತ್ತು ಪಿಎಂ ಮೋದಿ ಕನಸಿಗೆ ಅಡ್ಡಿಯುಂಟು ಮಾಡಲಿಲ್ಲ. ಮೇಲಾಗಿ, ರಾಜ್ಯ ವಿಚಾರಗಳನ್ನು ಪರಿಗಣಿಸದ ಮತದಾರ, ರಾಷ್ಟ್ರೀಯ ನಾಯಕತ್ವ ಮತ್ತು ಪ್ರಬಲ ಮೈತ್ರಿಕೂಟದ ಪರ ಮತ ಹಾಕಿದ್ದ. ಈ ಮೂರೂ ರಾಜ್ಯಗಳಲ್ಲಿ ಒಟ್ಟು 65 ಲೋಕಸಭೆ ಸೀಟುಗಳಿದ್ದು, ಅವುಗಳಲ್ಲಿ 63ನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.

    ಕಳೆದ ಚುನಾವಣೆ ಮತ್ತು ಹಾಲಿ ಚುನಾವಣೆಗಿರುವ ವ್ಯತ್ಯಾಸ ಏನೆಂದರೆ, ಈ ಬಾರಿ ಮೂರೂ ರಾಜ್ಯಗಳಲ್ಲಿ ಸಿಎಂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಪ್ರಧಾನಿ ಮೋದಿ ಜನಪ್ರಿಯತೆ ಬಳಸಿಕೊಳ್ಳುವ ಜತೆಗೆ ಸಂಸದರು, ಕೇಂದ್ರ ಸಚಿವರು ಸೇರಿ ಪ್ರಮುಖರಿಗೆ ಟಿಕೆಟ್ ನೀಡಿ ಆ ಮೂಲಕ ಹೆಚ್ಚೆಚ್ಚು ಸೀಟುಗಳನ್ನು ಗೆಲ್ಲುವ ತಂತ್ರ ಅನುಸರಿಸಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಂಚರಾಜ್ಯ ಚುನಾವಣೆ ಮಹತ್ವ ಪಡೆದುಕೊಂಡಿರುವುದೇನೋ ನಿಜ. ಆದರೆ, ಈ ರಾಜ್ಯಗಳಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ಮತ್ತು ಹೊಸ ನಾಯಕತ್ವ ಬೆಳೆಸುವ ದೃಷ್ಟಿಯಿಂದಲೂ ಬಿಜೆಪಿಗೆ ಇದು ಅತ್ಯಂತ ಮಹತ್ವದ ಚುನಾವಣೆ. ರಾಜಸ್ಥಾನದಲ್ಲಿ ವಸುಂಧರಾ ರಾಜೆ ಸಿಂಧಿಯಾ ನಾಯಕತ್ವ ವರಿಷ್ಠರಿಗೆ ಸಾಕೆನಿಸಿದ್ದು, ಹೊಸಬರಿಗೆ ಅವಕಾಶ ನೀಡಲು ತೀರ್ವನಿಸಿದಂತಿದೆ. ರಾಜಸ್ಥಾನದಲ್ಲಿ ಪಕ್ಷದ ಕಾರ್ಯಕರ್ತ ವರ್ಗ ಹಾಗೂ ಕಚೇರಿಯಿಂದ ದೂರವೇ ಇರುವ ವಸುಂಧರಾ ಅವರಿಗೆ ಇದು ರಾಜಕೀಯ ನಿವೃತ್ತಿಯೋ ಗೊತ್ತಿಲ್ಲ. ಆದರೆ, ವರಿಷ್ಠರು ಮಾತ್ರ ದೆಹಲಿಯಿಂದ ಪರೋಕ್ಷ ಸಂದೇಶ ರವಾನಿಸಿದ್ದಾರೆ. ರಾಜಮನೆತನದ ವಸುಂಧರಾ ವರಿಷ್ಠರ ನಡೆಗೆ ತಲೆಯಾಡಿಸಿ ಸುಮ್ಮನಿರುವ ವ್ಯಕ್ತಿಯೇನಲ್ಲ. ರಾಜ್ಯದ ಅಗ್ರ ನಾಯಕಿಯಾಗಿದ್ದ ವಸುಂಧರಾ, ಹೈಕಮಾಂಡ್​ಗೂ ಬಗ್ಗಿದವರಲ್ಲ. ಹೀಗಾಗಿ, ದಿಲ್ಲಿಯವರು ಕಡೆಗಣಿಸಿದ್ದಾರೆ ಎಂಬ ಅವರೊಳಗಿನ ಆಕ್ರೋಶ ಪಕ್ಷಕ್ಕೆ ಹಾನಿ ಮಾಡಬಹುದು ಎಂಬ ಆತಂಕವೂ ಕೆಲವರಲ್ಲಿದೆ.

    ಸಾಮೂಹಿಕ ನಾಯಕತ್ವ ಫಲ ಕೊಡುವುದೇ?; ಯಡಿಯೂರಪ್ಪ ಹಾದಿಯಲ್ಲಿ ರಾಜೆ, ಚೌಹಾಣ್, ರಮಣ್!

    ರಾಜಸ್ತಾನದ 200 ಕ್ಷೇತ್ರಗಳಲ್ಲಿ 41 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೊಷಿಸಲಾಗಿದೆ. ಅದರಲ್ಲಿ 7 ಮಂದಿ ಸಂಸದರಿಗೇ ಟಿಕೆಟ್ ನೀಡಿರುವುದು ವಿಶೇಷ. ರಾಜವರ್ಧನ್ ಸಿಂಗ್ ರಾಠೋಡ್, ದೇವ್ಜೀ ಪಟೇಲ್, ಡಾ. ಕಿಶೋರಿ ಲಾಲ್ ಮೀನಾ, ದಿಯಾ ಕುಮಾರಿ ಸೇರಿದಂತೆ ಹಲವರು ರಾಜ್ಯ ಚುನಾವಣೆಗೆ ಸಜ್ಜಾಗಬೇಕಿದೆ. ಇನ್ನೂ 159 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಗೊಂಡಿಲ್ಲ. ಕೇಂದ್ರ ಸಚಿವರು ಸೇರಿ ಮತ್ತಷ್ಟು ಸಂಸದರ ಹೆಸರು ಪಟ್ಟಿಯಲ್ಲಿ ಕಂಡರೂ ಅಚ್ಚರಿ ಇಲ್ಲ.

    ಸಾಮೂಹಿಕ ನಾಯಕತ್ವ ಫಲ ಕೊಡುವುದೇ?; ಯಡಿಯೂರಪ್ಪ ಹಾದಿಯಲ್ಲಿ ರಾಜೆ, ಚೌಹಾಣ್, ರಮಣ್!

    ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್, ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ, ಮತ್ತೊಮ್ಮೆ ಚೌಹಾಣ್​ರನ್ನು ಸಿಎಂ ಸ್ಥಾನದಲ್ಲಿ ಮುಂದುವರಿಸಲು ಮೋದಿ-ಅಮಿತ್ ಶಾ ಬಯಸಿಲ್ಲ ಎಂಬುದು ಅವರ ತೀರ್ವನಗಳಿಂದಲೇ ಸ್ಪಷ್ಟವಾಗುತ್ತಿದೆ. ಒಂದುವೇಳೆ ಶಿವರಾಜ್ ಸಿಂಗ್​ಗೆ ಈಗಲೂ ಅಭೂತಪೂರ್ವ ವರ್ಚಸ್ಸು, ಜನಪ್ರಿಯತೆ ಇದೆ ಎನ್ನುವುದು ನಿಜವಾಗಿದ್ದರೆ, ಮೂವರು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಫಗನ್ ಸಿಂಗ್ ಕುಲಾಸ್ತೇ, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಮಧ್ಯಪ್ರದೇಶಕ್ಕೆ ಕಳುಹಿಸಿಕೊಡುವ ಅಗತ್ಯ ದಿಲ್ಲಿ ದೊರೆಗಳಿಗೆ ಬರುತ್ತಿರಲಿಲ್ಲ. ಕೇಂದ್ರ ಬಿಜೆಪಿ ಮುಖಂಡರನ್ನು ರಾಜ್ಯ ಚುನಾವಣೆ ಸ್ಪರ್ಧೆಗೆ ಆಯ್ಕೆ ಮಾಡಿರುವುದು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳಲ್ಲಿ ಅತೃಪ್ತಿ ಉಂಟುಮಾಡಿದ್ದರೂ, ಈ ನಾಯಕರಿಗೆ ತಮ್ಮ ಕ್ಷೇತ್ರ ಮಾತ್ರವಲ್ಲ, ಅವುಗಳಾಚೆಗೂ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಬೇಕು ಎಂಬ ಟಾಸ್ಕ್ ನೀಡಲಾಗಿದೆ. ಅಂದರೆ, ಯಾರು ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುತ್ತಾರೋ ಅವರಿಗೆ ಸಿಎಂ ಸ್ಥಾನದ ಅದೃಷ್ಟವೂ ಒಲಿಯಬಹುದು. ಅಂದರೆ, ಜವಾಬ್ದಾರಿ ಒಬ್ಬ ನಾಯಕನದ್ದಲ್ಲ, ಎಲ್ಲರೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕು ಎಂಬ ಸೂಚ್ಯ ಸಂದೇಶ ಇದರಲ್ಲಡಗಿದೆ. ಕಳೆದ ಚುನಾವಣೆಯಲ್ಲಿ ಚೌಹಾಣ್ ನಾಯಕತ್ವವಿತ್ತು. ಆದರೆ ಪಕ್ಷಕ್ಕೆ ಪೂರ್ಣ ಬಹುಮತ ಬರಲಿಲ್ಲ. ಇದರಿಂದ ಕಾಂಗ್ರೆಸ್ ಸರ್ಕಾರ ರಚಿಸಿತು. ಈ ಬಾರಿ, ಪಿಎಂ ಮೋದಿ, ಗೃಹ ಸಚಿವ ಅಮಿತ್ ಷಾ ನಡೆಸುವ ರ್ಯಾಲಿಗಳಲ್ಲಿ ಸಿಎಂ ಚೌಹಾಣ್ ವೇದಿಕೆ ಹಂಚಿಕೊಂಡರೂ, ಸಿಎಂ ನಾಯಕತ್ವ ಅಥವಾ ಅವರ ಸಾಧನೆಗಳ ಬಗ್ಗೆ ಇಬ್ಬರು ನಾಯಕರು ಮಾತನಾಡುತ್ತಿಲ್ಲ. ಅಥವಾ ಅವರೇ ಮುಂದಿನ ಸಿಎಂ ಎಂಬ ಘೋಷಣೆಯನ್ನೂ ಮಾಡಿಲ್ಲ. ಅಂದರೆ, ಮೋದಿ-ಷಾ ಮನಸ್ಸಿನಲ್ಲೇ ಬೇರೆಯೇ ಚಿಂತನೆ ಇದ್ದಂತಿದೆ.

    ಸಾಮೂಹಿಕ ನಾಯಕತ್ವ ಫಲ ಕೊಡುವುದೇ?; ಯಡಿಯೂರಪ್ಪ ಹಾದಿಯಲ್ಲಿ ರಾಜೆ, ಚೌಹಾಣ್, ರಮಣ್!

    ಛತ್ತೀಸ್​ಗಢದಲ್ಲೂ ಮಾಜಿ ಸಿಎಂ ರಮಣ್ ಸಿಂಗ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಆದರೆ, ಅವರ ನಾಯಕತ್ವದ ಬಗ್ಗೆಯೂ ಖಚಿತತೆ ಇಲ್ಲ. ಹೈಕಮಾಂಡ್ ಒಬಿಸಿ ಅಥವಾ ಹಿಂದುಳಿದ ವರ್ಗಗಳ ಮುಖಂಡರತ್ತ ಚಿತ್ತಹರಿಸಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಸಿಎಂ ಭೂಪೇಶ್ ಬಗೇಲ್ ಒಬಿಸಿ ಸಮುದಾಯದವರಾಗಿರುವುದರಿಂದ ವರಿಷ್ಠರು ಕೂಡ ಇದೇ ಸಮುದಾಯದ ನಾಯಕರತ್ತ ಗಮನಹರಿಸಿದ್ದಾರೆ. ಮೂರು ಸತತ ಅವಧಿಗೆ ಮುಖ್ಯಮಂತ್ರಿಯಾಗಿದ್ದ ರಮಣ್ ಸಿಂಗ್, ಠಾಕೂರ್ ಸಮುದಾಯಕ್ಕೆ ಸೇರಿದವರು. ಒಬಿಸಿ ಮತ್ತು ಬುಡಕಟ್ಟು ಸಮುದಾಯಗಳೇ ಚುನಾವಣಾ ರಾಜಕೀಯದಲ್ಲಿ ಮಹತ್ವದ ಪಾತ್ರವಹಿಸುತ್ತಾರೆ ಎಂಬ ಗ್ರಹಿಕೆ ಈ ಜಾತಿಗಳ ಮುಖ್ಯಮಂತ್ರಿ ಬೇಕೆಂಬ ರಾಜಕೀಯ ನಿರೂಪಣೆಗೆ ನಾಂದಿ ಹಾಡಿದೆ. ಹೀಗಾಗಿ, ರಮಣ್ ಸಿಂಗ್​ರಾಚೆ ಯೋಚಿಸುವುದು ವರಿಷ್ಠರಿಗೆ ಅನಿವಾರ್ಯವಾಗಿದೆ. ಸಿಎಂ ಭೂಪೇಶ್ ಬಗೇಲ್ ಒಬಿಸಿಗಳ ಮೇಲೆ ಗಮನಾರ್ಹ ಹಿಡಿತ ಸಾಧಿಸಿದ್ದಾರೆ. ಹಾಗಾಗಿ, ಗ್ರಾಮೀಣ ಮತಗಳು ಸಿಂಗ್ ಬದಲಿಗೆ ಭೂಪೇಶ್​ರನ್ನೇ ನೆಚ್ಚಿಕೊಂಡಿವೆ.

    ಈ ಮೂರೂ ರಾಜ್ಯಗಳಲ್ಲಿ ಹೈಕಮಾಂಡ್ ಇಡುತ್ತಿರುವ ಹೆಜ್ಜೆಗಳನ್ನು ಗಮನಿಸಿದರೆ, ಕರ್ನಾಟಕದಲ್ಲಿ ಯಡಿಯೂರಪ್ಪನವರ ವಿಷಯದಲ್ಲೂ ವರಿಷ್ಠರು ಇದೇ ರೀತಿ ಕ್ರಮ ಕೈಗೊಂಡಿದ್ದನ್ನು ಕಾಣಬಹುದು. ಮಾಜಿ ಸಿಎಂ ಯಡಿಯೂರಪ್ಪನವರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮನಸ್ಸಿರಲಿಲ್ಲ. ಆದರೆ, ಅನಿವಾರ್ಯವಾಗಿ ದಿಲ್ಲಿ ಆದೇಶವನ್ನು ಅವರು ಪಾಲಿಸಬೇಕಾಯಿತು ಮತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅದರಿಂದ ಮತ್ತೊಬ್ಬರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ದೊರೆಯಿತು. ಆದರೆ, ಯಡಿಯೂರಪ್ಪನವರಂತಹ ನಾಯಕತ್ವದ ಕೊರತೆ ಪಕ್ಷವನ್ನು ಈಗಲೂ ಕಾಡುತ್ತಿದೆ. ಬಿಎಸ್​ವೈ ಅವರನ್ನು ನಾವು ಕಡೆಗಣಿಸಿಲ್ಲ ಎಂಬ ಸಂದೇಶ ರವಾನಿಸುವ ಯತ್ನವಾಗಿ ಅವರಿಗೆ ಕೇಂದ್ರ ಚುನಾವಣಾ ಸಮಿತಿ ಮತ್ತು ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಯಿತು. ಆದರೆ, ಅದು ಅಷ್ಟರಮಟ್ಟಿಗೆ ಡ್ಯಾಮೇಜ್ ಕಂಟ್ರೋಲ್ ಮಾಡಲಿಲ್ಲ. ಬೊಮ್ಮಾಯಿ ಅವರಲ್ಲಿ ಜನಸಮೂಹವನ್ನು ಸೆಳೆಯುವ ಶಕ್ತಿಯಿಲ್ಲ. ಇದೇ ಕಾರಣಕ್ಕೆ, ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ವರಿಷ್ಠರು ದೊಡ್ಡ ತಪ್ಪು ಮಾಡಿದರು ಎಂದು ಕರ್ನಾಟಕದ ಬಿಜೆಪಿಯ ಹಲವು ನಾಯಕರು ಒಪ್ಪಿಕೊಳ್ಳುತ್ತಾರೆ. ವಸುಂಧರಾ ರಾಜೆ ಸಿಂಧಿಯಾ, ಶಿವರಾಜ್ ಸಿಂಗ್ ಚೌಹಾಣ್, ರಮಣ್ ಸಿಂಗ್​ರನ್ನು ದೂರವಿಟ್ಟರೆ, ಅದರಿಂದ ಪಕ್ಷಕ್ಕೆ ಲಾಭ/ನಷ್ಟಗಳೇನು ಎಂಬುದನ್ನು ಕಾದು ನೋಡಬೇಕಷ್ಟೇ. ಏಕೆಂದರೆ, ಕರ್ನಾಟಕದಂತೆಯೇ ಇಲ್ಲೂ ಆಗಬಹುದು ಎಂದು ಈಗಲೇ ಹೇಳಲಾಗದು. ಆದರೂ, ವಸುಂಧರಾ ಬಂಡಾಯವೆದ್ದರೆ ಪಕ್ಷಕ್ಕೆ ಹಾನಿಯಾಗುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.

    ಪಿಎಂ ಮೋದಿ ನಾಯಕತ್ವವನ್ನೇ ನಂಬಿ ವಿಧಾನಸಭೆ ಚುನಾವಣೆಗಳನ್ನು ಎದುರಿಸಲು ಸಾಧ್ಯವಿಲ್ಲ ಎಂಬ ವಾಸ್ತವ ಬಿಜೆಪಿ ನಾಯಕರ ಅರಿವಿಗೂ ಬಂದಿದೆ. ಕೇಂದ್ರ ಚುನಾವಣೆ ವಿಷಯಗಳೇ ಬೇರೆ, ರಾಜ್ಯ ಚುನಾವಣೆಗಳಲ್ಲಿ ಚರ್ಚೆಯಾಗುವ ವಿಷಯಗಳೇ ಬೇರೆ. ಮೋದಿ ಪ್ರಚಾರಕ್ಕೆ ಬರುತ್ತಾರೆ ಎಂದು ವಿಧಾನಸಭೆ ಚುನಾವಣೆಯಲ್ಲಿ ವೋಟ್ ಹಾಕಿ ಏನು ಪ್ರಯೋಜನ? ಸ್ಥಳೀಯ ಸಮಸ್ಯೆಗಳು ಅವರಿಗೆ ಗೊತ್ತಾಗುತ್ತದೆಯೇ ಎಂದು ಜನರೇ ಮಾತನಾಡಿಕೊಳ್ಳುತ್ತಾರೆ. ಮೊದಲೇ ಹೇಳಿದಂತೆ, 2018ರ ಪಂಚರಾಜ್ಯ ಚುನಾವಣೆ ಫಲಿತಾಂಶ ಮತ್ತು 2019ರ ಲೋಕಸಭೆ ಚುನಾವಣೆ ಫಲಿತಾಂಶಗಳೇ ಇದಕ್ಕೆ ನಿದರ್ಶನ. ಫಲಿತಾಂಶದಲ್ಲಿ ಎಷ್ಟೊಂದು ವ್ಯತ್ಯಾಸವಿದೆ ಎಂಬುದು ಅಂಕಿ-ಅಂಶಗಳಲ್ಲೇ ಗೊತ್ತಾಗುತ್ತದೆ. ಹಾಗಾಗಿ, ರಾಜ್ಯ ಚುನಾವಣೆಗಳಿಗೂ ಮೋದಿ ನಾಯಕತ್ವವನ್ನೇ ಪೂರ್ತಿ ಅವಲಂಬಿಸಿಕೊಂಡರೆ ಹೆಚ್ಚೇನೂ ಲಾಭವಾಗದು. ವಿಪಕ್ಷಗಳು ಕೂಡ ಮೋದಿ ಅವಲಂಬನೆ ರಾಜ್ಯ ಬಿಜೆಪಿ ಘಟಕದ ದೌರ್ಬಲ್ಯದ ಸಂಕೇತ ಎಂದೇ ಬಿಂಬಿಸಲಿವೆ. ಏತನ್ಮಧ್ಯೆ, ಜಾತಿಗಣತಿ ವಿಚಾರವೂ ಚರ್ಚೆಯ ಮುನ್ನೆಲೆಗೆ ಬರುತ್ತಿದೆ. ವಿಪಕ್ಷಗಳ ಜಾತಿಗಣತಿ, ಗ್ಯಾರಂಟಿ ಯೋಜನೆಗಳ ಭರವಸೆಗಳನ್ನು ಬದಿಗೆ ಸರಿಯುವಂತೆ ಮಾಡಿ, ಜನರ ಮನಸ್ಸನ್ನು ಸೆಳೆಯಲು ಮೋದಿ ಮತ್ತು ರಾಜ್ಯದ ಸಾಮೂಹಿಕ ನಾಯಕತ್ವಕ್ಕೆ ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಗೆ ಡಿ.3ಕ್ಕೆ ಉತ್ತರ ಸಿಗಲಿದೆ.

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts