More

    ಬಳ್ಳಾರಿ ಜಿಲ್ಲೆಯಲ್ಲಿ ಭತ್ತ ನಾಟಿಗೆ ವರುಣನ ಅವಕೃಪೆ

    ಬಳ್ಳಾರಿ: ಜಿಲ್ಲೆಯಲ್ಲಿ ವರುಣದೇವನ ಅವಕೃಪೆಯಿಂದಾಗಿ ಕೃಷಿ ಚಟುವಟಿಕೆಗೆ ಮಂಕುಬಡಿದಂತಾಗಿದೆ. ಜೂನ್‌ನಿಂದ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಭತ್ತ ಸೇರಿದಂತೆ ವಿವಿಧ ಬೆಳೆ ಬಿತ್ತನೆ ಕುಂಠಿತಗೊಂಡಿದೆ. ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕ್ಷೇತ್ರ ಕಡಿಮೆಯಾಗಿದ್ದು, ರೈತರು ಹಿಂಗಾರಿನತ್ತ ಗಮನಹರಿಸಿದ್ದಾರೆ.

    ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಯದ ಹಿನ್ನೆಲೆಯಲ್ಲಿ ಭತ್ತ ಬಿತ್ತನೆ ಕ್ಷೇತ್ರ ಕುಸಿದಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 85,100 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಗುರಿ ಹೊಂದಲಾಗಿತ್ತು. ಆದರೆ 1,923 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಭತ್ತದ ಕಣಜ ಎಂದೇ ಖ್ಯಾತಿ ಪಡೆದ ಸಿರಗುಪ್ಪ ತಾಲೂಕಿನಲ್ಲಿ 35,142 ಹೆಕ್ಟೇರ್ ಗುರಿ ಹೊಂದಲಾಗಿತ್ತು. 785 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಉಳಿದಂತೆ ಕಂಪ್ಲಿ 18,550 ಹೆಕ್ಟೇರ್ ಪೈಕಿ 875, ಸಂಡೂರು 2008 ಹೆಕ್ಟೇರ್ ಪೈಕಿ 45, ಕುರುಗೋಡು 12,600 ಹೆಕ್ಟೇರ್ ಪೈಕಿ 210, ಬಳ್ಳಾರಿ ತಾಲೂಕಿನಲ್ಲಿ 16,800 ಹೆಕ್ಟೇರ್ ಪೈಕಿ 8 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿದೆ.

    ಇದನ್ನೂ ಓದಿ: ಬೆಳಗಾವಿಯ ಬಳ್ಳಾರಿ ನಾಲಾ ನೊರೆ, ಬೆಳೆಗೆ ಬರೆ : ವಿಷಕಾರಿ ರಾಸಾಯನಿಕ ಪರಿಣಾಮ ಕಮರಿದ ಭತ್ತದ ಪೈರು

    ಭತ್ತ ಸಸಿ ತಯಾರಿ ಜೋರು: ಭತ್ತ ನಾಟಿಗೆ ಜುಲೈ ತಿಂಗಳು ಸೂಕ್ತವಾಗಿದ್ದು, ಅದಕ್ಕಾಗಿ ನಾಟಿಗಾಗಿ ಭತ್ತ ಸಸಿ ತಯಾರಿ ಮಾಡುಕೊಳ್ಳುತ್ತಿರುವುದು ಹೆಚ್ಚಾಗಿದೆ. ಭತ್ತ ಬೆಳೆಯುವವರಿಗಿಂತರ ಸಸಿ ಮಾಡಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಆದರೆ ಜಲಾಶಯದಿಂದ ನೀರು ಹೊರಗಡೆ ಹರಿಯದೇ ಇರುವುದರಿಂದ ಬೋರ್‌ವೆಲ್ ಹೊಂದಿರುವ ರೈತರು ಭತ್ತ ಸಸಿ ಮಡಿ ಮಾಡಿಕೊಂಡು ನಾಟಿಗಾಗಿ ತಯಾರಿಯಲ್ಲಿದ್ದಾರೆ. ಕೆಲವರು ಇದನ್ನೇ ವಾಣಿಜ್ಯ ಉದ್ದೇಶವನ್ನಾಗಿ ಮಾಡಿಕೊಂಡು ಲಕ್ಷಾಂತರ ರೂ.ಗಳಿಸುತ್ತಿದ್ದಾರೆ. ಕಂಪ್ಲಿ, ಕುರುಗೋಡು ಹಾಗೂ ಸಿರಗುಪ್ಪ ಭಾಗದಲ್ಲಿ ಹೆಚ್ಚಾಗಿ ಭತ್ತ ಬೆಳೆಯುವುದರಿಂದ ಒಂದು ಎಕರೆ ಪ್ರದೇಶದಲ್ಲಿ ಭತ್ತ ಸಸಿ ತಯಾರಿ ಮಾಡುಕೊಂಡರೆ ಸುಮಾರು 50 ಎಕರೆ ಪ್ರದೇಶಕ್ಕೆ ಭತ್ತ ನಾಟಿ ಮಾಡಬಹುದಾಗಿದೆ. ಇದರಿಂದ ಕೆಲ ರೈತರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ರೈತರು ಗದ್ದೆಗೆ ಇಳಿಯುವುದು ಕಡಿಮೆ ಆಗಿದೆ. ಹಾಗಾಗಿ ಭತ್ತದ ಸಸಿಗಳನ್ನು ಖರೀದಿಸುವುದು ಕಡಿಮೆ ಆಗಿದೆ.

    ಜಿಲ್ಲೆಯಲ್ಲಿ ಶೇ.34 ಮಳೆ ಕೊರತೆ

    ಪ್ರಸಕ್ತ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಸರಾಸರಿ ಶೇ.34 ಮಳೆ ಕೊರತೆಯಾಗಿದೆ. ಜುಲೈನಲ್ಲಿ 171.7 ಮಿಮೀ ಮಳೆ ಆಗಬೇಕಿತ್ತು. ಆದರೆ 113 ಮಿಮೀ ಆಗಿದೆ. ಬಳ್ಳಾರಿ ತಾಲೂಕಿನಲ್ಲಿ ಶೇ.48, ಸಂಡೂರು ಶೇ.55, ಸಿರಗುಪ್ಪ ಶೇ.28, ಕುರುಗೋಡು ಶೇ.22, ಕಂಪ್ಲಿ ಶೇ.18 ಮಳೆ ಕೊರತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಆಮೆಗತಿಯಲ್ಲಿ ನಾಟಿ ಕಾರ್ಯ

    ಬಳ್ಳಾರಿ ಜಿಲ್ಲೆಯ ಒಟ್ಟು 1.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 12,492 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ಶೇ.7.18 ಪ್ರಗತಿಯಾಗಿದೆ. 1.22 ಲಕ್ಷ ಹೆಕ್ಟೇರ್‌ನಲ್ಲಿ ಏಕದಳ ಬೆಳೆ ಬಿತ್ತನೆ ಮಾಡಬೇಕಿದ್ದು ಆ ಪೈಕಿ 5,836 ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗಿದೆ. 9095 ಹೆಕ್ಟೇರ್ ಪೈಕಿ 298 ಹೆಕ್ಟೇರ್‌ನಲ್ಲಿ ದ್ವಿದಳ ಬಿತ್ತನೆ ಆಗಿದೆ. ಒಟ್ಟು 1.31 ಲಕ್ಷ ಹೆಕ್ಟೇರ್ ಪೈಕಿ 6134 ಹೆಕ್ಟೇರ್‌ನಲ್ಲಿ ಆಹಾರ ಧಾನ್ಯ ಬೆಳೆ ಬಿತ್ತನೆ ಮಾಡಲಾಗಿದೆ. 35,700 ಹೆಕ್ಟೇರ್ ಪೈಕಿ 12,264 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆ ಹಾಕಲಾಗಿದೆ. ಜೋಳ 570 ಹೆಕ್ಟೇರ್, ರಾಗಿ 15, ಮೆಕ್ಕೆಜೋಳ 2,971, ಸಜ್ಜೆ 357 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆ ಆಮೆಗತಿಯಲ್ಲಿ ಸಾಗುತ್ತಿದೆ.

    ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಜಲಾಶಯದಿಂದ ಕಾಲುವೆಗೆ ನೀರು ಹಿರಿಸುವುದು ವಿಳಂಬವಾಗಿದೆ. ಹಾಗಾಗಿ ಭತ್ತ ನಾಟಿ ಮಾಡಲಾಗುತ್ತಿಲ್ಲ. ಆಗಸ್ಟ್‌ವರೆಗೆ ಭತ್ತ ನಾಟಿ ಮಾಡಲು ಅವಕಾಶ ಇದೆ.

    ಡಾ.ಮಲ್ಲಿಕಾರ್ಜುನ
    ಜಂಟಿ ನಿರ್ದೇಶಕ, ಕೃಷಿ ಇಲಾಖೆ

    ಪ್ರತಿವರ್ಷವೂ ರೈತರು ಜುಲೈನಲ್ಲೇ ಹೆಚ್ಚು ಭತ್ತ ನಾಟಿ ಮಾಡುತ್ತಿದ್ದರು. ಆದರೆ ಈ ಬಾರಿ ಮಳೆ ಅಭಾವದಿಂದ ತುಂಗಭದ್ರಾ ಡ್ಯಾಮ್‌ನಿಂದ ಕಾಲುವೆಗೆ ನೀರು ಹರಿದಿಲ್ಲ. ರೈತರ ಮೊಗದಲ್ಲಿ ಖುಷಿ ಕಾಣುತ್ತಿಲ್ಲ. ಬರದ ಛಾಯೆ ಆವರಿಸಿದೆ. ಸರ್ಕಾರ ಕೂಡಲೇ ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ರೈತರಿಗೆ ಪರಿಹಾರ ಒದಗಿಸಬೇಕು.

    ಪುರುಷೋತ್ತಮಗೌಡ
    ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts