More

    ಸೂತಕದಲ್ಲೂ ಸಾಮಾಜಿಕ ಅಂತರ..!

    ಬೆಳಗಾವಿ: ಒಂದೆಡೆ ವಿದೇಶದಿಂದ ಆಗಮಿಸಿದ್ದವರು ಹೋಂ ಕ್ವಾರಂಟೈನ್ ಉಲ್ಲಂಘಿಸಿ, ಬೇಜವಾಬ್ದಾರಿಯಿಂದ ಸಾರ್ವಜನಿಕವಾಗಿ ಅಲೆದಾಡಿ ಕರೊನಾ ಆತಂಕ ಹೆಚ್ಚಿಸುತ್ತಿದ್ದರೆ, ಬೆಳಗಾವಿಯ ಕುಟುಂಬವೊಂದು ಸೂತಕದಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

    ಬೆಳಗಾವಿ ತಾಲೂಕಿನ ಬಿ.ಕೆ. ಕಂಗ್ರಾಳಿ ಗ್ರಾಮದ ವೃದ್ಧೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಳು. ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ದೇಶವನ್ನೇ ಲಾಕ್‌ಡೌನ್ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆಗೆ ಶರಣಾದ ಕುಟುಂಬ ಸದಸ್ಯರು, ನೋವಲ್ಲೂ ಗುಂಪುಗೂಡದೇ ಅಂತರ ಕಾಯ್ದುಕೊಂಡು ಅಗಲಿದ ಜೀವಕ್ಕೆ ಕಂಬನಿ ಮಿಡಿದಿದ್ದಾರೆ.

    ಹೆಸರು ಉಲ್ಲೇಖಿಸದಂತೆ ಮನವಿ: ಈ ಸಂಬಂಧ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಕುಟುಂಬ ಸದಸ್ಯರು, ವೃದ್ಧೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಕುಟುಂಬದ ಹಿರಿಯ ಜೀವ ಕಳೆದುಕೊಂಡಿರುವುದು ನಮಗೆ ದುಃಖ ತಂದಿದೆ. ಸಮಾಜದ ಒಳಿತಿಗಾಗಿ ನಾವು ಹೆಚ್ಚು ಜನರನ್ನು ಸೇರಿಸಿಲ್ಲ. ಮಕ್ಕಳು ಹಾಗೂ ಐವರು ಸಂಬಂಧಿಕರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದೆವು. ಶವದ ಮೇಲೂ ಪ್ರಚಾರ ತೆಗೆದುಕೊಂಡರು ಎಂದು ಸಮಾಜ ಆಡಿಕೊಳ್ಳುತ್ತದೆ. ಹೀಗಾಗಿ ತಮ್ಮ ಹೆಸರು ಉಲ್ಲೇಖಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

    ವಾಹನ ವ್ಯವಸ್ಥೆ: ವೃದ್ಧೆ ಮೃತಪಟ್ಟಾಗ ಅಂತ್ಯಕ್ರಿಯೆಗಾಗಿ ರುದ್ರಭೂಮಿಗೆ ತೆಗೆದುಕೊಂಡು ಹೋಗಲು ಯಾವುದೇ ಆಂಬುಲೆನ್ಸ್ ಸಿಕ್ಕಿರಲಿಲ್ಲ. ಸ್ಮಶಾನದ ವರೆಗೂ ವಾಹನ ನೀಡುವಂತೆ ಖಾಸಗಿ ಗೂಡ್ಸ್ ವಾಹನ ಮಾಲೀಕರನ್ನು ವಿಚಾರಿಸಿದರೆ ಎಲ್ಲರೂ ಲಾಕ್‌ಡೌನ್ ನೆಪ ಹೇಳಿ ಹಿಂದೆ ಸರಿದರು. ಹೀಗಾಗಿ ಅನಾಥ ಶವಗಳ ಸಂಸ್ಕಾರ ಮಾಡುವ ವಿಜಯ ಮೋರೆ ಅವರನ್ನು ಸಂಪರ್ಕಿಸಿದಾಗ ಅವರ ವಾಹನ ವ್ಯವಸ್ಥೆ ಮಾಡಿಕೊಟ್ಟರು. ಸದಾಶಿವನಗರದ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲಾಯಿತು ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts