More

    ಮೂಲ ಫಲಾನುಭವಿಗೆ ಇ-ಸ್ವತ್ತು ವಿತರಿಸಿ

    ಕಡೂರು: ಮೂಲ ನಿವೇಶನದಾರರ ಸಂಪೂರ್ಣ ವಿವರ ಹಾಗೂ ಮೂಲ ಮಂಜೂರಾತಿ ಕಡತಗಳನ್ನು ಹುಡುಕಿ ಪರಿಶೀಲಿಸಬೇಕು. ನಂತರ ಮೂಲ ಲಾನುಭವಿಗಳಿಗೆ ಮಾತ್ರ ಇ-ಸ್ವತ್ತು ನೀಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಸೂಚಿಸಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಂಚಾಯಿತಿವಾರು ಮಾಹಿತಿ ಪಡೆದ ಬಳಿಕ ಬಹಳಷ್ಟು ಗ್ರಾಮಗಳಲ್ಲಿ ಇ-ಸ್ವತ್ತು ಪಡೆಯಲು ಜನರು ಪರದಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಒದಗಿಸುವ ಉದ್ದೇಶದಿಂದ ಸಮಗ್ರ ಪರಿಶೀಲನೆ ನಡೆಸಲಾಗಿದೆ ಎಂದರು.
    ಇ-ಸ್ವತ್ತು ಸಮಸ್ಯೆ ಬಹುತೇಕ ಎಲ್ಲ ಕಡೆ ಇದೆ. ಆರ್‌ಟಿಸಿ ವ್ಯತ್ಯಾಸ, ಸರ್ವೇ ಕಾರ್ಯ, ಅರಣ್ಯ ಭೂಮಿ ಮುಂತಾದ ಸಂಗತಿಗಳ ಬಗ್ಗೆ ಸಮಗ್ರ ವರದಿ ಪಡೆಯಲಾಗಿದೆ. ಬೀರೂರು ಸೇರಿ ಕೆಲವೆಡೆ ವರದಿ ಪರಿಶೀಲನೆ ಆಗಬೇಕಿದೆ. ಕ್ಷೇತ್ರ ವ್ಯಾಪ್ತಿಯ ಯಾವ್ಯಾವ ಗ್ರಾಮಗಳನ್ನು ಕಂದಾಯ ಉಪಗ್ರಾಮ ಅಥವಾ ನೂತನ ಕಂದಾಯ ಗ್ರಾಮವನ್ನಾಗಿ ಮಾಡಬಹುದು, ಗ್ರಾಮ ಠಾಣಾ ವಿಸ್ತರಣೆ ಮಾಡಬಹುದು ಮತ್ತು 2ಎ ನೋಟಿಫಿಕೇಷನ್ ಬಗ್ಗೆ ಮಾಹಿತಿ ಸಂಗ್ರಹಿಸಲು ಕಂದಾಯ ಅಧಿಕಾರಿಗಳು, ಪಿಡಿಒಗಳು ಖುದ್ದು ಸ್ಥಳ ಪರಿಶೀಲಿಸಿ ವರದಿ ನೀಡಬೇಕಿದೆ. ಶೀಘ್ರವೇ ಪಟ್ಟಿ ಅಂತಿಮಗೊಳಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
    ಕಡೂರು ಕ್ಷೇತ್ರದಲ್ಲಿ 14 ಸಾವಿರ ಇ-ಸ್ವತ್ತು ಸಮಸ್ಯೆ ಪ್ರಕರಣಗಳಿವೆ. ಖಾಸಗಿ ಬಡಾವಣೆಗಳ ನಿವೇಶನಗಳಲ್ಲಿಯೂ ಕೆಲ ಸಮಸ್ಯೆಗಳಿವೆ. ಇವುಗಳಿಗೆ ಅಂತಿಮ ಪರಿಹಾರ ದೊರಕಿಸಲು ಈ ಒಂದು ಕಾರ್ಯದಲ್ಲಿ ಎಲ್ಲರೂ ಪ್ರಯತ್ನ ಮಾಡಲೇಬೇಕು. ಸಾರ್ವಜನಿಕರಿಗೆ ಯಾವ ಸಮಸ್ಯೆಯೂ ಆಗದಂತೆ ಕ್ರಮ ಕೈಗೊಳ್ಳುವುದು ನಮ್ಮ ಆಶಯ ಎಂದರು.
    ವಿ.ಯರದಕೆರೆ ಗ್ರಾಮದಲ್ಲಿ 1998ರಲ್ಲಿ 176ನೇ ಸರ್ವೇ ನಂಬರ್‌ನಲ್ಲಿರುವ ಕೆಎಂಕೆ ಬಡಾವಣೆಯಲ್ಲಿ ಸುಮಾರು 9 ಎಕರೆ ಇದೆ. ಆದರೆ 15 ಎಕರೆ ಜಮೀನು ಖರೀದಿ ಮಾಡಿರುವುದಾಗಿ ಸ್ಥಳೀಯರು ಹೇಳುತ್ತಾರೆ. 330 ನಿವೇಶನಗಳಲ್ಲಿ 130 ಮನೆ ನಿರ್ಮಾಣವಾಗಿವೆ. ಕೆಲವು ಬಡವರ ಬಳಿ ನಿವೇಶನ ಖರೀದಿ ಮಾಡಿ ಮನೆ ನಿರ್ಮಿಸಿದ್ದಾರೆ. ಪ್ರಸ್ತುತ ಈ ಬಡಾವಣೆಯಲ್ಲಿ ನಿವೇಶನದ ವಾರಸುದಾರರ ವಿಚಾರ ಸಂಪೂರ್ಣ ಗೊಂದಲವಾಗಿದೆ ಎಂದು ಪಿಡಿಒ ಶ್ರೀನಿವಾಸ್ ಸಭೆ ಗಮನಕ್ಕೆ ತಂದರು.
    ವೈ.ಮಲ್ಲಾಪುರ ಪಿಡಿಒ ದೊಡ್ಡವೀರಪ್ಪ ಮಾತನಾಡಿ, ಗ್ರಾಮದ ಕಾಲನಿಯಲ್ಲಿ ಒಂದನೇ ಸರ್ವೇ ನಂಬರ್ 4 ಎಂದಾಗಬೇಕಿದೆ. ಆರ್‌ಟಿಸಿಯಲ್ಲಿ ಗ್ರಾಮಠಾಣಾ ಎಂದಿದ್ದರೂ ಸ್ಕೆಚ್ ದೊರೆಯುತ್ತಿಲ್ಲ. ಸೂರಾಪುರ, ಮಲ್ಲಿದೇವಿಹಳ್ಳಿಯಲ್ಲೂ ಇಂತಹ ಸಮಸ್ಯೆ ಇದೆ ಎಂದು ಹೇಳಿದರು.
    ನಿವೇಶನ ವಿಸ್ತೀರ್ಣವೇ ಗೊಂದಲ: ದೊಡ್ಡಪ್ಪನಹಳ್ಳಿಯಲ್ಲಿ 30 ಮನೆಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ. ನಕ್ಷೆಯಲ್ಲಿ 6040 ಇದ್ದರೆ ಹಕ್ಕುಪತ್ರದಲ್ಲಿ 3040 ಎಂದಿದೆ. ಹಕ್ಕುಪತ್ರದಲ್ಲಿರುವ ಜಾಗವೇ ಒಂದಾದರೆ ಮನೆ ಕಟ್ಟಿರುವ ಜಾಗವೇ ಬೇರೆ. ಚಕ್ಕುಬಂದಿಯಲ್ಲೂ ವ್ಯತ್ಯಾಸವಾಗಿದೆ. 60 ಮನೆಗಳಿರುವ ಹುಳಿಗೆರೆ ಗೊಲ್ಲರಹಟ್ಟಿಯಲ್ಲಿ 9 ಮನೆಗಳು ಬೇರೆಯವರ ಹೆಸರಿನಲ್ಲಿವೆ. ಮುಗಳಿಕಟ್ಟೆ ಗೇಟ್ ಬಳಿ ಸುಮಾರು ನಾಲ್ಕೈದು ಮನೆಗಳ ಮಾಲೀಕರು ಹಕ್ಕುಪತ್ರಕ್ಕಾಗಿ 94ಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವು ತಿರಸ್ಕೃತವಾಗಿವೆ ಎಂದು ಹುಳಿಗೆರೆ ಪಿಡಿಒ ತನುಜಾ ಸಭೆಯ ಗಮನಕ್ಕೆ ತಂದರು.
    ಬಹುತೇಕ ಜನರ ಬಳಿ ಇಲ್ಲ ಹಕ್ಕುಪತ್ರ: ಯಗಟಿ 1300 ಮನೆಗಳಿರುವ ದೊಡ್ಡ ಗ್ರಾಮ. ಪರ್ವತನಹಳ್ಳಿಯಲ್ಲಿ 1982ರಲ್ಲಿ ನೀಡಿದ್ದ ಹಕ್ಕುಪತ್ರಗಳು ಈಗ ಮತ್ತೆ ಪುನರಾವರ್ತನೆಯಾಗಿವೆ. ಸೀತಾಪುರ ಗ್ರಾಮದಲ್ಲಿ 1981-82ರಲ್ಲೇ ಹಕ್ಕುಪತ್ರ ನೀಡಲಾಗಿದೆ. 215 ಮನೆಗಳ ಪೈಕಿ 2 ಅಥವಾ 3 ಜನರ ಬಳಿ ಮಾತ್ರ ಹಕ್ಕುಪತ್ರಗಳಿವೆ. ಉಳಿದವರ ಬಳಿ ಇಲ್ಲ. ಮನೆಗಳಿರುವ ಸ್ಥಳದ ಮಾಲೀಕತ್ವದ ಬಗ್ಗೆಯೇ ಕೆಲ ಗೊಂದಲಗಳಿವೆ ಎಂದು ಯಗಟಿ ಪಿಡಿಒ ನವೀನ್ ತಿಳಿಸಿದರು. ಶಾಲೆಯಿರುವ ಜಾಗ ಮಾತ್ರ ಮೈಸೂರು ಸರ್ಕಾರವೆಂದು ಬರುತ್ತಿದೆ. ಉಳಿದದ್ದು ಖಾಸಗಿಯವರ ಹೆಸರಲ್ಲಿವೆ. ಹರಿಸಮುದ್ರದಲ್ಲಿ ಸಹ ಮನೆಗಳಿರುವ ಜಾಗ ಏಳು ಜನರ ಹೆಸರಲ್ಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಸಮಸ್ಯೆಗಳ ಪರಿಹಾರಕ್ಕೆ ಯಾವ ರೀತಿ ಕಾನೂನಾತ್ಮಕವಾದ ಕ್ರಮ ಕೈಗೊಳ್ಳಬಹುದು ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು. ಹುಳಿಗೆರೆ, ಗೊಲ್ಲರಹಟ್ಟಿಯನ್ನು ಕಂದಾಯ ಗ್ರಾಮವನ್ನಾಗಿಸಲು ಪೂರಕ ಕ್ರಮ ಕೈಗೊಳ್ಳಬೇಕು. ಕೊತ್ತಿಗೆರೆ, ಮುಗಳೀಕಟ್ಟೆ ಗ್ರಾಮವನ್ನು ಮರು ಸರ್ವೇ ಮಾಡಿಸಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಹಸೀಲ್ದಾರ್ ಎಂ.ಪಿ.ಕವಿರಾಜ್, ಇಒ ಸಿ.ಆರ್.ಪ್ರವೀಣ್, ಎಡಿಎಲ್‌ಆರ್ ಶ್ರೀನಿಧಿ, ಪಿಡಿಒಗಳು, ಕಂದಾಯ ವಿಭಾಗದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts