More

    ವಿಡಿಯೋ ಕಾಲ್​ನಲ್ಲಿ ಕೊಹ್ಲಿ ಹೇಳಿದ್ದೇನು? RCB ಫ್ಯಾನ್ಸ್​ಗೆ ಇಷ್ಟವಾಗಲಿಲ್ಲ ಸ್ಮೃತಿ ಮಂದಾನ ಉತ್ತರ!

    ನವದೆಹಲಿ: ನಿನ್ನೆ (ಮಾರ್ಚ್​ 17) ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್​ಸಿಬಿ ಪಡೆ ಅಮೋಘ ಜಯದೊಂದಿಗೆ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ವುಮೆನ್ಸ್​ ಐಪಿಎಲ್​ನಲ್ಲಿ​​ ಹೊಸ ಇತಿಹಾಸ ಬರೆಯಿತು. ಅಭಿಮಾನಿಗಳ ಸುದೀರ್ಘ ಕಾಯುವಿಕೆಗೆ ಆರ್​ಸಿಬಿ ವನಿತೆಯರ ಗೆಲುವು ಸಮಾಧಾನ ತಂದಿತು.

    ಆರ್​ಸಿಬಿ ಮಹಿಳಾ ತಂಡ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬೆನ್ನಲ್ಲೇ ಆರ್​ಸಿಬಿ ಪುರುಷರ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ವಿಡಿಯೋ ಕಾಲ್​ ಮೂಲಕ ಆರ್​ಸಿಬಿ ಹೆಣ್ಣು ಹುಲಿಗಳಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಕೆಲವೊತ್ತು ಸಂಭಾಷಣೆ ಸಹ ನಡೆಸಿದರು. ಬಳಿಕ ವಿಡಿಯೋ ಕಾಲ್​ನಲ್ಲಿ ಕೊಹ್ಲಿ ನಿಮಗೆ ಏನು ಹೇಳಿದರು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸ್ಮೃತಿ ಮಂದಾನ ನೀಡಿರುವ ಉತ್ತರ ಆರ್​ಸಿಬಿ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

    ಆ ಸಂದರ್ಭದಲ್ಲಿ ವಿರಾಟ್​ ಕೊಹ್ಲಿಯ ಮಾತುಗಳು ಕೇಳಿಸಲಿಲ್ಲ. ಇಡೀ ಸ್ಟೇಡಿಯಂನಲ್ಲಿ ಜಯಘೋಷ ಮೊಳಗಿದ್ದರಿಂದ ಕೊಹ್ಲಿ ಏನು ಹೇಳಿದರು ಎಂಬುದು ಕೇಳಿಸಲಿಲ್ಲ, ಆದರೆ ಕೊಹ್ಲಿಯವರು ಥಂಬ್ಸ್​ ಅಪ್​ ಮಾಡಿ ಅಭಿನಂದಿಸಿದರು. ಕೊಹ್ಲಿಯವರ ಮುಖದಲ್ಲಿ ತುಂಬಾ ಖುಷಿಯಿತ್ತು ಎಂದು ಸ್ಮೃತಿ ಮಂದಾನ ಹೇಳಿದರು. ಈ ಹೇಳಿಕೆ ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

    ಕಳೆದ ವರ್ಷ ಡಬ್ಲ್ಯುಪಿಎಲ್ ವೇಳೆ ವಿರಾಟ್ ಕೊಹ್ಲಿ ಅವರು ಮಹಿಳಾ ಕ್ರಿಕೆಟಿಗರ ಬಳಿ ಹೋಗಿ ಮಾತನಾಡಿದ್ದರು. ಡಬ್ಲ್ಯುಪಿಎಲ್ ಸಮಯದಲ್ಲಿ ಆರ್‌ಸಿಬಿ ತಂಡದೊಂದಿಗೆ ಸಂವಾದ ನಡೆಸಿದ ಕೊಹ್ಲಿ, ತಮ್ಮ ಅನುಭವಗಳು ಮತ್ತು ಆಟದ ಕೆಲ ತಂತ್ರಗಳನ್ನು ಹಂಚಿಕೊಂಡರು. ಬಳಿಕ ಮಾತನಾಡಿದ್ದ ಸ್ಮೃತಿ ಮಂದನಾ ಕೊಹ್ಲಿ ಅವರು ತಮ್ಮ ಅಮೂಲ್ಯ ಸಮಯವನ್ನು ನಮ್ಮೊಂದಿಗೆ ಹಂಚಿಕೊಂಡರು. ಕೊಹ್ಲಿ ನೀಡಿದ ಸಲಹೆಗಳು ನಮಗೆ ತುಂಬಾ ಉಪಯುಕ್ತವಾಗಿವೆ ಎಂದು ಮಂದಾನ ಹೇಳಿದ್ದಾರೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ 114 ರನ್​​ ಗುರಿ ಬೆನ್ನತ್ತಿದ ಆರ್​ಸಿಬಿ, 19.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 115 ರನ್​ ಗಳಿಸುವ ಮೂಲಕ 8 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ವ್ಯುಮೆನ್ಸ್​ ಐಪಿಎಲ್​ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು. ಆರ್​ಸಿಬಿ ಪರ ನಾಯಕಿ ಸ್ಮೃತಿ ಮಂದನಾ (31), ಸೋಫಿ ಡಿವೈನ್​ (32), ಎಲ್ಲಿಸ್​ ಪೆರ್ರಿ (35 ಅಜೇಯ) ಹಾಗೂ ರಿಚಾ ಘೋಷ್​ (17 ಅಜೇಯ) ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ನಾಲ್ಕು ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಈ ನಾಲ್ವರು ಆಟಗಾರರು ಡೆಲ್ಲಿ ಬೌಲರ್​ಗಳ ಬೆವರಿಳಿಸಿದರು.

    ಡೆಲ್ಲಿ ಕ್ಯಾಪಿಟಲ್​ ಪರ ಶಿಖಾ ಪಾಂಡೆ ಮತ್ತು ಮಿನ್ನು ಮನಿ ತಲಾ ಒಂದು ವಿಕೆಟ್​ ಪಡೆದನ್ನು ಬಿಟ್ಟರೆ ಉಳಿದ ಯಾವೊಬ್ಬ ಬೌಲರ್​ ಕೂಡ ಆರ್​ಸಿಬಿ ಬ್ಯಾಟ್ಸ್​ವುಮೆನ್​ಗಳಿಗೆ ಸವಾಲಾಗಲೇ ಇಲ್ಲ.

    ಇದಕ್ಕೂ ಮುನ್ನ ಟಾಸ್​​ ಗೆದ್ದು ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ 18.3 ಓವರ್​ಗಳಲ್ಲಿ 113 ರನನ್​ಗಳಿಗೆ ಆಲೌಟ್​ ಆಯಿತು. ತಂಡದ ಪರ ಶಫಾಲಿ ವರ್ಮಾ (27 ಎಸೆತ 44 ರನ್​, 2 ಬೌಂಡರಿ, 3 ಸಿಕ್ಸರ್​) ಹಾಗೂ ನಾಯಕಿ ಲ್ಯಾನಿಂಗ್​ (23) ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್​ವುಮೆನ್​ ಕೂಡ ಆರ್​ಸಿಬಿ ಬೌಲರ್​ಗಳನ್ನು ಎದುರಿಸುವಲ್ಲಿ ವಿಫಲವಾದರು.

    ಆರ್​ಸಿಬಿ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಶ್ರೇಯಾಂಕ ಪಾಟೀಲ್​ 4 ವಿಕೆಟ್​ ಬಳಿಸಿದರೆ, ಮೊಲಿನೆಕ್ಸ್ 3 ವಿಕೆಟ್​ ಹಾಗೂ ಆಶಾ ಶೋಭನಾ 2 ವಿಕೆಟ್​ ಪಡೆದರು. ಆರ್​ಸಿಬಿ ಬೌಲರ್​ಗಳ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್​ ತರಗೆಲೆಗಳಂತೆ ವಿಕೆಟ್​ ಒಪ್ಪಿಸುವ ಮೂಲಕ 113 ರನ್​ಗಳ ಸಾಧಾರಣ ಮೊತ್ತಕ್ಕೆ ಕುಸಿದರು. (ಏಜೆನ್ಸೀಸ್​)

    1965ರಲ್ಲಿ ಎರಡು ಇಡ್ಲಿ, ಒಂದು ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ದರ ಪಟ್ಟಿ ನೋಡಿದ್ರೆ ಹುಬ್ಬೇರೋದು ಖಚಿತ!

    ಇವರೇ ನೋಡಿ ಭಾರತೀಯ ಚಿತ್ರರಂಗದಲ್ಲಿ 1 ಕೋಟಿ ರೂ. ಸಂಭಾವನೆ ಪಡೆದ ಮೊದಲ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts