More

    ಧನ್ವಂತರಿ: ಬಹುಪಯೋಗಿ ಔಷಧ ದಾಲ್ಚಿನ್ನಿ

    ಧನ್ವಂತರಿ: ಬಹುಪಯೋಗಿ ಔಷಧ ದಾಲ್ಚಿನ್ನಿದಾಲ್ಚಿನ್ನಿ ರುಚಿಗಾಗಿ ಮಾತ್ರವಲ್ಲ, ಇದರಲ್ಲಿನ ಅಂಶಗಳು ಆರೋಗ್ಯವನ್ನು ಪೋಷಿಸಬಲ್ಲವು. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಇದರಿಂದ ತಯಾರಿಸಿದ ಮನೆಮದ್ದುಗಳು ಅತ್ಯಂತ ಪರಿಣಾಮಕಾರಿ. ಇದನ್ನು ಚಕ್ಕೆ ಎಂದೂ ಕರೆಯಲಾಗುತ್ತದೆ. ಚಕ್ಕೆಯು ಮ್ಯಾಂಗನೀಸ್​ನ್ನು ಹೊಂದಿದ್ದು, ಇದು ಮೂಳೆಗಳಿಗೆ, ರಕ್ತನಾಳಗಳಿಗೆ, ಕೊಲ್ಲಾಜನ್ ಸಿದ್ಧವಾಗಲು ಸಹಾಯವಾಗುವ ಅಂಶವಾಗಿದೆ. ಅಲ್ಲದೆ ಕಬ್ಬಿಣಾಂಶ, ಕ್ಯಾಲ್ಸಿಯಂ ಇದ್ದು, ದೇಹಕ್ಕೆ ಎಲ್ಲ ರೀತಿಯಲ್ಲಿ ಪೂರಕ.

    ಹಿಪ್ಪಲಿ ಹಾಗೂ ದಾಲ್ಚಿನ್ನಿಯ ಪುಡಿ ಮಾಡಿ (ದಾಲ್ಚಿನ್ನಿಯ ಮೂರು ಭಾಗದಷ್ಟು ಹಿಪ್ಪಲಿ, ಆರು ಭಾಗದಷ್ಟು ತುಳಸಿಯನ್ನು ಸೇರಿಸಬೇಕು) ಕುದಿಯುತ್ತಿರುವ ನೀರಿಗೆ ಹಾಕಬೇಕು. ಮಂದ ಉರಿಯಲ್ಲಿ ಕುದಿಸಿ ಕಷಾಯ ಮಾಡಬೇಕು. ಇದು ಕೆಮ್ಮು, ಕಫ ನಿವಾರಣೆಗೆ ಸಹಕಾರಿ. ಶ್ವಾಸಕೋಶದ ಎಲ್ಲ ತೊಂದರೆಗಳ ಹತೋಟಿಗೆ ಉಪಯೋಗಕಾರಿ. ಇದನ್ನು ದಿನಕ್ಕೆರಡು ಬಾರಿ ಅರ್ಧರ್ಧ ಲೋಟದಂತೆ ಕುಡಿಯಬಹುದು. ಆದರೆ ಒಮ್ಮೆ ಮಾಡಿದ ಕಷಾಯವನ್ನು ಪುನಃ ಕಾಯಿಸಬಾರದು. ಇಲ್ಲದಿದ್ದಲ್ಲಿ ಒಮ್ಮೆಲೇ ಮುಕ್ಕಾಲು ಲೋಟ ಕುಡಿಯಬಹುದು. ಬೇಕಾದಲ್ಲಿ ಕಷಾಯಕ್ಕೆ ಜೇನುತುಪ್ಪವನ್ನೂ ಹಾಕಿ ಕುಡಿಯಬಹುದು. ದಿನಕ್ಕೆರಡು ಬಾರಿ ಚಕ್ಕೆ ಕಷಾಯವನ್ನು ಕುಡಿಯುತ್ತ ಬಂದಲ್ಲಿ ರಕ್ತನಾಳಗಳು ಶುದ್ಧಗೊಂಡು ನಿಮಿರುವಿಕೆ ಸಮಸ್ಯೆಯು ಕಡಿಮೆಯಾಗುವುದು.

    ನೀರನ್ನು ಬಿಸಿಗಿರಿಸಿಕೊಂಡು ಅದಕ್ಕೆ ಚಕ್ಕೆಯನ್ನು ಕುಟ್ಟಿ ಹಾಕಿಕೊಳ್ಳಬೇಕು. ಕುದಿಯುತ್ತಿರುವಾಗ ಕಾಳುಮೆಣಸನ್ನೂ ಕುಟ್ಟಿ ಹಾಕಬೇಕು. ಸಿಪ್ಪೆ ಸಮೇತ ಒಂದು ಏಲಕ್ಕಿಯನ್ನು ಜಜ್ಜಿ ಹಾಕಬೇಕು. ಇದಕ್ಕೆ ಅರ್ಧ ಚಮಚ ಒಣಶುಂಠಿ ಪುಡಿ ಹಾಕಿ ಕಷಾಯ ಮಾಡುವುದು. ಇದು ಶೀತ, ನೆಗಡಿ, ಕೆಮ್ಮು, ಕಫ, ಮೈಕೈ ನೋವು, ಹೊಟ್ಟೆ ಉಬ್ಬರ, ಮುಖ್ಯವಾಗಿ ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿ. (ಈ ಕಷಾಯವನ್ನು ಗರ್ಭಿಣಿ ಸ್ತ್ರೀಯರು ಹೆಚ್ಚು ಕುಡಿಯುವುದು ಒಳ್ಳೆಯದಲ್ಲ.) ಈ ಕಷಾಯವನ್ನು ನಮ್ಮ ಮುಖ್ಯ ಆಹಾರದ ಮೊದಲು ಹಸಿದ ಹೊಟ್ಟೆಯಲ್ಲಿ ಕುಡಿಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಬೇಕಾದಲ್ಲಿ ಕಷಾಯಕ್ಕೆ ಜೇನುತುಪ್ಪ ಸೇರಿಸಿಕೊಳ್ಳಬಹುದು.

    ಪ್ರತಿನಿತ್ಯ ಚಕ್ಕೆಯ ಬಳಕೆಯಿಂದ ಬಾಯಿಯ ದುರ್ಗಂಧವನ್ನು ಕಡಿಮೆ ಮಾಡಬಹುದು. ಮಧುಮೇಹ ಇರುವವರಲ್ಲಿ ಇನ್ಸುಲಿನ್​ನ ಕೊರತೆ ಉಂಟಾಗುತ್ತದೆ. ದಾಲ್ಚಿನ್ನಿಯ ಉಪಯೋಗವು ದೇಹದಲ್ಲಿ ಇರುವ ಕಡಿಮೆ ಇನ್ಸುಲಿನ್​ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಡಿಮೆ ಇನ್ಸುಲಿನಲ್ಲಿಯೇ ಸಕ್ಕರೆ ಅಂಶವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಹೆಚ್ಚು ಸಹಕಾರಿಯಾದ ದಾಲ್ಚಿನ್ನಿಯನ್ನು ದಿನನಿತ್ಯ ಬಳಸುವುದು ಒಳ್ಳೆಯದು.

    ಒಂದು ಚಿಟಿಕೆ ದಾಲ್ಚಿನ್ನಿ ಪುಡಿ, ಎರಡು ಚಿಟಿಕೆ ಕಸ್ತೂರಿ ಅರಿಶಿಣವನ್ನು ಲಿಂಬೆರಸದಲ್ಲಿ ಕಲಸಿ ಮೊಡವೆಗಳಿಗೆ ಹಚ್ಚಿದರೆ ಮೊಡವೆ, ಕಪ್ಪುಕಲೆ ಕಡಿಮೆಯಾಗುತ್ತದೆ. ದಾಲ್ಚಿನ್ನಿಯು ಮಿದುಳನ್ನು ಚುರುಕುಮಾಡುವ ಗುಣ ಹೊಂದಿದೆ. ಮರೆಗುಳಿತನ ನಿವಾರಣೆಗೆ ಸಹಾಯಕಾರಿ. ಎರಡು ಚಮಚ ಮೊಸರಿಗೆ ಕಾಲು ಚಮಚ ಚಕ್ಕೆ ಪುಡಿ ಸೇರಿಸಿ ಕಲಸಿ ಸೇವಿಸುವುದರಿಂದ ತೊದಲುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಮಾನಸಿಕ ಸಮಸ್ಯೆಯನ್ನು ನಿರ್ವಹಣೆ ಮಾಡಲು ಹೆಚ್ಚು ಸಹಕಾರಿ. ಮಲಬದ್ಧತೆ ಇರುವಲ್ಲಿ ದಾಲ್ಚಿನ್ನಿ ಪುಡಿ ಹಾಗೂ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಹೃದಯದ ಸ್ವಾಸ್ಥ್ಯಕ್ಕೆ ದಾಲ್ಚಿನ್ನಿ ಹೆಚ್ಚು ಸಹಕಾರಿ. ರಕ್ತನಾಳಗಳಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆಯುತ್ತದೆ. ಇನ್​ಫ್ಲಮೇಶನ್​ನ್ನು ಕಡಿಮೆಮಾಡುವುದು. ದಿನಕ್ಕೆ ಒಂದರಿಂದ ಒಂದೂವರೆ ಚಮಚದಷ್ಟು ಪುಡಿ ಉಪಯೋಗಿಸಬಹುದು. ಆದ್ದರಿಂದ ಯೋಗ್ಯ ರೀತಿಯಲ್ಲಿ ಧನಿಯತ ಪ್ರಮಾಣದಲ್ಲಿ ದಾಲ್ಚಿನ್ನಿ ಬಳಸುವುದು ಉತ್ತಮ.

    ನೀವೂ ಪ್ರಶ್ನೆ ಕೇಳಿ
    ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಬರೆದು ಈ ವಿಳಾಸಕ್ಕೆ ಕಳಿಸಬಹುದು: ಸಂಪಾದಕರು, ಧನ್ವಂತರಿ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು – 18

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts