More

    ರೋಗದ ಅರಿವು ಆರೋಗ್ಯದ ಹರಿವು

    ಧನ್ವಂತರಿಕಾಯಿಲೇ ಇಲ್ಲದೆ ಪೂರ್ತಿ ಬದುಕನ್ನು ಬಾಳುವವರು ತೀರಾ ಅಪರೂಪ. ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹಲವಾರು ಉಪಕ್ರಮಗಳು ಅನಿವಾರ್ಯ ಎಂಬುದನ್ನು ಆಯುರ್ವೆದ ಹೇಳಿದೆ. ಜನತೆಗೂ ರೋಗ ಜ್ಞಾನದ ಕಿಂಚಿತ್ ಅರಿವಿದ್ದರೆ ರೋಗಗಳಿಂದ ದೂರವಿರುವುದು ಸಾಧ್ಯ. ಪ್ರತಿಯೊಂದು ರೋಗಗಳ ಬಗ್ಗೆ ಹೇಳುತ್ತಾ ನಿದಾನ ಪಂಚಕಗಳನ್ನು ವಿವರಿಸಲಾಗಿದೆ. ನಿದಾನವೆಂದರೆ ರೋಗ ಬರಲು ಕಾರಣ, ಪೂರ್ವರೂಪ ಅಂದರೆ ಸಾಕಷ್ಟು ಮುಂಚಿತವಾಗಿ ದೇಹದಲ್ಲಿ ಕಂಡುಬರುವ ಚಿಹ್ನೆಗಳು, ಮೂರನೆಯದು ಲಕ್ಷಣ, ಉಪಶಯ- ಅನುಪಶಯ ಎಂದರೆ ಯಾವೆಲ್ಲಾ ವಿಷಯಗಳಿಂದ ಅದು ಶಮನವಾಗುತ್ತದೆ ಅಥವಾ ಹೆಚ್ಚಾಗುತ್ತದೆ ಎಂಬ ಮಾಹಿತಿ, ಐದನೆಯದಾದ ಸಂಪ್ರಾಪ್ತಿ ಎಂದರೆ ಯಾವ ರೀತಿ ಶರೀರದಲ್ಲಿ ರೋಗದ ಬೆಳವಣಿಗೆ ಆಗುತ್ತದೆ ಎಂಬ ವಿಶೇಷವಾದ ಜ್ಞಾನ. ಪ್ರತಿಯೊಂದು ಕಾಯಿಲೆಗೂ ಇಂತಹ ವಿವರಣೆಯನ್ನು ವೈಜ್ಞಾನಿಕವಾಗಿ ನೀಡಿದ ಕೀರ್ತಿ ಆಯುರ್ವೆದ ವೈದ್ಯಪದ್ಧತಿಗೆ ಸಲ್ಲುತ್ತದೆ.

    ವ್ಯಾಧಿಯ ವಿವರಣೆ ನೀಡುವಾಗ ನಾಲ್ಕು ವಿಭಜನೆ ಮಾಡಿದೆ. ನಿಜ ಅಥವಾ ಅಭ್ಯಂತರ ಎಂದರೆ ದೇಹದೊಳಗಿನ ಕಾರಣಗಳಿಂದ ಉತ್ಪನ್ನವಾಗುವ ರೋಗಗಳು, ಆಗಂತುಜ ಎಂದರೆ ಹೊರಗಿನ ಕಾರಣಗಳಿಂದ ಹುಟ್ಟುವ ಕಾಯಿಲೆಗಳು, ಮಾನಸ ಅಂದರೆ ಮಾನಸಿಕ ಏರುಪೇರುಗಳಿಂದ ಉಂಟಾಗುವ ವ್ಯಾಧಿಗಳು, ನಾಲ್ಕನೆಯ ಸ್ವಾಭಾವಿಕ ರೋಗಗಳು ಎಂದರೆ ವಯೋಸಹಜವಾಗಿ ಉದ್ಭವಿಸುವಂಥವು. ದುಃಖದಾಯಕವಾದ ವ್ಯಾಧಿಗಳನ್ನು ಸುಶ್ರುತ ಸಂಹಿತೆಯಲ್ಲಿ ಈ ನಾಲ್ಕು ವಿಧದಲ್ಲಿ ವರ್ಗೀಕರಿಸಲಾಗಿದೆ. ರೋಗಕ್ಕೆ ವಿಕಾರ, ಪಾಪ್ಮ, ರುಕ್, ರುಜ, ವ್ಯಾಧಿ, ಜ್ವರ, ಆಮಯ, ಗದ, ಯಕ್ಷ್ಮ, ಆತಂಕ, ದುಃಖ, ದೋಷ, ಅಬಾಧ ಮುಂತಾದ ಪರ್ಯಾಯ ಹೆಸರುಗಳೂ ಇವೆ.

    ರೋಗಗಳು ನಮ್ಮ ದೇಹದಲ್ಲಿ ಕಾಣಿಸಿಕೊಂಡು ರೋಗಮುಕ್ತಿ ಆಗುವ ತನಕ ನಾನಾ ಹಂತಗಳಿವೆ. ಸಾಮಾವಸ್ಥಾ- ಜೀರ್ಣ ಕ್ರಿಯೆಯಲ್ಲಿ ವ್ಯತ್ಯಯವಾಗಿ ಆಮ ಉಂಟಾಗುವ ಪ್ರಾರಂಭಿಕ ಹಂತ. ಪಚ್ಯಮಾನಾವಸ್ಥಾ- ಆಮವು ಪಾಕವಾಗಿ ಉಲ್ಬಣಗೊಳ್ಳುವ ಅವಧಿ. ಪಕ್ವಾವಸ್ಥಾ- ಆಮವು ಸಂಪೂರ್ಣ ಜೀರ್ಣವಾಗಿ ಶರೀರವು ಸಹಜ ಸ್ಥಿತಿಗೆ ಮರಳುವ ಘಟ್ಟ. ಸುಖಸಾಧ್ಯಾವಸ್ಥಾ- ಸುಲಭವಾಗಿ ಗುಣಪಡಿಸಲು ಸಾಧ್ಯ. ಕೃಚ್ಛ ಸಾಧ್ಯಾವಸ್ಥಾ- ಕಷ್ಟದಿಂದ ಗುಣಪಡಿಸಬಹುದಾದ ಹಂತ. ಯಾಪ್ಯಾವಸ್ಥಾ- ಜೀವನಪೂರ್ತಿ ಔಷಧಿ ಬೇಕಾಗುವ ಸಾಧ್ಯತೆ. ಅಸಾಧ್ಯಾವಸ್ಥಾ- ಗುಣಪಡಿಸಲು ಸಾಧ್ಯವಿಲ್ಲವೆಂಬ ಸ್ಥಿತಿ. ಈ ನಾಲ್ಕು ನಿರ್ಣಯಗಳಿಗೆ ಬರಲು ಸಾಧ್ಯವಾಗುವ ಕಾಲಘಟ್ಟ. ತರುಣಾವಸ್ಥಾ- ರೋಗದ ಪ್ರಾರಂಭಿಕ ಬೆಳವಣಿಗೆಯ ಹಂತ. ಜೀರ್ಣಾವಸ್ಥಾ- ಕಾಯಿಲೆಯು ದೀರ್ಘಕಾಲಿಕ ಆಗಿರುವ ಸಂದರ್ಭ. ಧಾತುಗತಾವಸ್ಥಾ- ದೇಹದಲ್ಲಿರುವ ಧಾತುಗಳ ಸ್ಥಿತಿಗತಿಗಳಲ್ಲಿ ವ್ಯತ್ಯಾಸವನ್ನು ಉಂಟುಮಾಡುವ ಹೊತ್ತು. ಸಾಶ್ರಯ- ನಿರಾಶ್ರಯಾವಸ್ಥಾ- ರೋಗವು ದೇಹದ ಒಂದೇ ಭಾಗದಲ್ಲಿ ಅಥವಾ ಪೂರ್ತಿ ಶರೀರದಲ್ಲಿ ಆವರಿಸುವ ಸಮಯ. ಲೀನಾವಸ್ಥಾ- ಲಕ್ಷಣಗಳನ್ನು ತೋರ್ಪಡದೆ ರೋಗವು ದೇಹದಲ್ಲಿ ಬೆಳವಣಿಗೆ ಆಗುತ್ತಾ ಇರುವಂತಹ ಕಾಲ. ಉತ್ಥಾನಾವಸ್ಥಾ- ರೋಗವು ಗಂಭೀರ ಸ್ವರೂಪ ಪಡೆದು ಪ್ರಮುಖ ಅವಯವಗಳಿಗೆ ಹರಡಿರುವ ಸ್ಥಿತಿ. ಉಪದ್ರವಾವಸ್ಥಾ- ಮೂಲ ರೋಗದಿಂದಾಗಿ ಕಾಣಿಸಿಕೊಳ್ಳುವ ತೊಂದರೆಗಳು ಹಾಗೂ ಇನ್ನೊಂದು ರೋಗದ ಉತ್ಪತ್ತಿ. ರಿಷ್ಟಾವಸ್ಥಾ- ದೇಹಾಂತ್ಯದ ಲಕ್ಷಣಗಳು ಕಾಣಿಸಿಕೊಂಡು ಪ್ರಯತ್ನಗಳೆಲ್ಲಾ ವಿಫಲವಾಗುವ ಹಂತ. ರೋಗಮುಕ್ತಾವಸ್ಥಾ- ವ್ಯಾಧಿಯು ಸಂಪೂರ್ಣವಾಗಿ ಗುಣವಾಗಿ ಪುನಹ ಆರೋಗ್ಯಪ್ರಾಪ್ತಿ ಆಗುವ ಪರಿಪೂರ್ಣ ಯಶಸ್ಸಿನ ಚಿಕಿತ್ಸಾ ಫಲದ ಸಂದರ್ಭ. ಹೀಗೆ ಹದಿನಾರು ವಿಭಿನ್ನ ಹಂತಗಳಲ್ಲಿ ವ್ಯಾಧಿಯನ್ನು ಅರ್ಥೈಸಿಕೊಳ್ಳುವ ಕಲೆಯನ್ನು ಆಯುರ್ವೆದ ವಿವರಿಸಿರುವುದು ಹಲವಾರು ರೀತಿಯಲ್ಲಿ ಉಪಯುಕ್ತವಾಗಿದೆ.

    ರೋಗಗಳನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಅನುಕೂಲ ಆಗುವಂತೆ ಬೇರೆಬೇರೆ ದೃಷ್ಟಿಕೋನದಿಂದ ವ್ಯಾಧಿ ವರ್ಗೀಕರಣವನ್ನು ಆಯುರ್ವೆದದ ಗ್ರಂಥಗಳೆಲ್ಲಾ ಮಾಡಿವೆ. ಸುಶ್ರುತ ಸಂಹಿತೆಯಲ್ಲಿನ ಆಧ್ಯಾತ್ಮಿಕ, ಆಧಿಭೌತಿಕ, ಆದಿದೈವಿಕ ಎಂಬ ವಿಭಜನೆ ಕುತೂಹಲಕಾರಿಯಾಗಿದೆ. ತಾಯಿಯಿಂದ ಬರುವ ಮಾತೃಜ, ತಂದೆಯಿಂದ ಬರುವ ಪಿತೃಜ ಅನುವಂಶಿಕ ಕಾಯಿಲೆಗಳನ್ನು ಆದಿಬಲಪ್ರವೃತ್ತ ಎಂಬ ಹೆಸರಿನಲ್ಲಿ ವಿವರಿಸಲಾಗಿದೆ. ಹುಟ್ಟಿನಿಂದಲೇ ಬರುವ ವ್ಯಾಧಿಗಳಿಗೆ ಜನ್ಮಬಲಪ್ರವೃತ್ತ ಎಂಬ ಹೆಸರು. ಅವುಗಳಲ್ಲಿ ಶಾರೀರಿಕವಾಗಿದ್ದು ಜಠರದಿಂದ ಉದ್ಭವಿಸುವ ವ್ಯಾಧಿಗಳಿಗೆ ಆಮಾಶಾಯೋತ್ಥ ಎಂದೂ ಕರುಳಿನಿಂದ ಹುಟ್ಟುವ ರೋಗಗಳಿಗೆ ಪಕ್ವಾಶಯೋತ್ಥ ಎಂದೂ ಹೆಸರಿಸಲಾಗಿದೆ. ಜನ್ಮದಿಂದಲೇ ಬರುವ ಮಾನಸಿಕ ರೋಗಗಳಲ್ಲಿ ರಾಜಸ, ತಾಮಸ ಎಂಬ ವಿಧಗಳಿವೆ. ಹುಟ್ಟಿದ ಬಳಿಕ ಬರುವವುಗಳಿಗೆ ಸಂಘಾತಬಲ ಪ್ರವೃತ್ತ ಎನ್ನಲಾಗುತ್ತದೆ. ಇದರಲ್ಲಿ ಶಸ್ತ್ರದಿಂದ, ಪ್ರಾಣಿಗಳಿಂದ, ಅಪಘಾತದಿಂದ, ಯಾಂತ್ರಿಕವಾಗಿ, ಮಾನಸಿಕವಾಗಿ, ಸೋಂಕಿನಿಂದ ಬರುವ ರೋಗಗಳೆಂದು ಆರು ವಿಧಗಳಿವೆ! ಕಾಲಬಲದಿಂದಾಗಿ, ದೈವಬಲದಿಂದಾಗಿ, ಸ್ವಭಾವ ಬಲದಿಂದಾಗಿ ಉಂಟಾಗುವ ಮೂರು ತೆರನಾದ ಆದಿದೈವಿಕ ಕಾಯಿಲೆಗಳ ವಿವರಣೆಗಳಿವೆ. ಹೀಗೆ ಬಹುವಿಧವಾದ ದೃಷ್ಟಿಕೋನದಿಂದ ರೋಗಗಳನ್ನು ಆಯುರ್ವೆದವು ಅರುಹಿದ ರೀತಿ ಬೆರಗು ಮೂಡಿಸುತ್ತದೆ.

    ಕ್ಲಿಯರ್ ಆಗಿರುವ ಹೊಳೆಯುವ ಚರ್ಮ ಬೇಕೇ? ಬೆಳಗ್ಗೆ ಎದ್ದ ತಕ್ಷಣ ಈ ಪಾನೀಯಗಳನ್ನು ಕುಡಿಯಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts