More

    ರಾತ್ರಿಯ ಊಟ ಬೇಗ ಮುಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು

    ಧನ್ವಂತರಿ

    ಬಹಳಷ್ಟು ರೋಗಿಗಳಿಗೆ ನಾವು ರೋಗ ಬರಲು ಕಾರಣವೇನೆಂದು ಯೋಚಿಸುವಾಗ ಮತ್ತು ಪಥ್ಯ ಹೇಳುವಾಗ ರಾತ್ರಿಯ ಊಟವನ್ನು ಯಾವ ಸಮಯದಲ್ಲಿ ಮಾಡುತ್ತೀರಿ ಮತ್ತು ಯಾವ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸುತ್ತೀರಿ ಎಂದು ಕೇಳುತ್ತೇವೆ. ಏಕೆಂದರೆ ರಾತ್ರಿಯ ಊಟ ಸರಿಯಾಗಿದ್ದರೆ ಮಾತ್ರ ಬಹಳಷ್ಟು ರೋಗಗಳು ಬರದಂತೆ ತಡೆಯಲು ಮತ್ತು ಅಂತಹ ರೋಗಗಳು ಬಂದರೂ ಅವುಗಳು ಬೇಗ ಗುಣವಾಗಲು ಸಾಧ್ಯವಾಗುತ್ತದೆ.

    ಹಾಗಾಗಿ ಇಂದು ನಾವು ರಾತ್ರಿಯ ಊಟವನ್ನು ಯಾವ ರೀತಿಯಲ್ಲಿ ಮತ್ತು ಎಂತಹ ಆಹಾರ ಪದಾರ್ಥಗಳನ್ನು ಬಳಸಿ ಸೇವಿಸಬೇಕು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ. ರಾತ್ರಿ ಪ್ರಾರಂಭವಾದ ಮೊದಲ ಮೂರು ತಾಸಿನ ಒಳಗಡೆ ಊಟವನ್ನು ಮುಗಿಸಬೇಕು ಎಂದು ಆಯುರ್ವೆದ ಹೇಳುತ್ತದೆ. ಅಂದರೆ ಅತ್ಯಂತ ತಡವೆಂದರೂ ಎಂಟು ಗಂಟೆ ಅಥವಾ 8.30ರ ಒಳಗೆ ಊಟವನ್ನು ಮುಗಿಸಬೇಕು. ರಾತ್ರಿ ಅತ್ಯಂತ ತಡವಾಗಿ ಅದರಲ್ಲೂ ವಿಶೇಷವಾಗಿ 9 ಗಂಟೆಯ ನಂತರ ಊಟ ಮಾಡಿದರೆ ಅಂತಹ ಊಟ ಸುಲಭವಾಗಿ ಜೀರ್ಣವಾಗಲು ಸಾಧ್ಯವಿಲ್ಲ. ಏಕೆಂದರೆ ಸೂರ್ಯಾಸ್ತದ ನಂತರ ನಿಧಾನವಾಗಿ ನಮ್ಮ ಜೀರ್ಣಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ನಂತರ ಮರುದಿನ ಸೂರ್ಯೋದಯದ ನಂತರವೇ ಮತ್ತೆ ಜೀರ್ಣಶಕ್ತಿ ಚಿಗುರುತ್ತದೆ. ಈ ಕಾರಣದಿಂದಲೇ ರಾತ್ರಿಯ ಊಟ ಸಾಧ್ಯವಾದಷ್ಟು ಲಘುವಾಗಿರಬೇಕು.

    ಊಟ ತ್ಯಜಿಸಲು ಪ್ರಯತ್ನಿಸಿ: ಯಾರಿಂದ ಸಾಧ್ಯವೋ ಅಂಥವರೆಲ್ಲಾ ರಾತ್ರಿ ಊಟ ತ್ಯಜಿಸುವುದು ಒಳ್ಳೆಯದು. ಹೀಗೆ ರಾತ್ರಿ ಊಟ ಬಿಟ್ಟರೆ ಬೊಜ್ಜು, ಅಸ್ತಮಾ, ಆಟೋ ಇಮ್ಯೂನ್ ಕಾಯಿಲೆ, ಚರ್ಮದ ತೊಂದರೆ, ಕಫದ ಸಮಸ್ಯೆ, ಗುಣವಾಗಲು ಸಾಧ್ಯವಾಗುತ್ತದೆ. ಯಾರಿಗೆ ರಾತ್ರಿಯ ಊಟವನ್ನು ಬಿಟ್ಟರೆ ತೊಂದರೆ ಎನಿಸುತ್ತದೆಯೋ ಅಂಥವರು ಸಾಧ್ಯವಾದಷ್ಟು ಲಘುವಾಗಿ ಸೇವಿಸಲು ಪ್ರಯತ್ನಿಸಬೇಕು. ಅಂದರೆ ಹಣ್ಣು, ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಅನ್ನ ಸಾಂಬಾರ್, ರೊಟ್ಟಿ, ಚಪಾತಿಯಂತಹ ಆಹಾರಗಳನ್ನು ಸೇವಿಸಬಹುದು. ಯಾವುದೇ ಕಾರಣಕ್ಕೂ ಕರಿದ ಪದಾರ್ಥಗಳು, ಗಡ್ಡೆಗೆಣಸು, ಹಾಲು, ಮೊಸರು, ತುಪ್ಪಗಳಂತಹ ಆಹಾರ ಪದಾರ್ಥಗಳನ್ನು ಸೇವಿಸಬಾರದು.

    ರಾತ್ರಿ ಹಾಲನ್ನು ಸೇವಿಸುವುದಿದ್ದರೆ ಸೂರ್ಯಾಸ್ತದ ಮೊದಲೇ ಸೇವಿಸುವುದು ಒಳ್ಳೆಯದು. ಹಾಲಿಗೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಬಿಸಿ ಮಾಡಿ ಅದಕ್ಕೆ ಅರಿಶಿನ ಹಾಕಿ ಸೇವಿಸುವುದು ಸೂಕ್ತ. ರಾತ್ರಿಯ ಊಟ ಮುಗಿದ ನಂತರ ಹಾಲು ಕುಡಿಯುವುದು ಅಥವಾ ಐಸ್ಕ್ರೀಮ್ ನಂತಹ ಪದಾರ್ಥಗಳನ್ನು ಸೇವಿಸುವುದು ಸರಿಯಲ್ಲ.

    ಮಲಗುವ ಮುನ್ನ: ಊಟವಾದ ತಕ್ಷಣ ಮಲಗಬಾರದು. ಬದಲಿಗೆ ಕೆಲ ಹೊತ್ತು ನೆಮ್ಮದಿಯಿಂದ ಶಾಂತವಾಗಿ ಕುಳಿತುಕೊಳ್ಳಬೇಕು. ನಂತರ ಎಡ ಮಗ್ಗುಲಲ್ಲಿ ಮಲಗಬೇಕು. ಶಾಸ್ತ್ರೀಯವಾಗಿ ಹೇಳುವುದಾದರೆ ರಾತ್ರಿ 9ಕ್ಕಿಂತ ಮುಂಚೆ ಮಲಗುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಒಳ್ಳೆಯದು. ಅದು ಇಂದಿನ ಕಾಲದಲ್ಲಿ ಸಾಧ್ಯವಿಲ್ಲ ಎಂದಾದರೆ ಕನಿಷ್ಠ 10 ಗಂಟೆಯ ಒಳಗೆ ಮಲಗಬೇಕು. ಮಲಗುವ ಮೊದಲು 10 ನಿಮಿಷ ಉಸಿರನ್ನು ಗಮನಿಸುತ್ತಾ ಕುಳಿತುಕೊಂಡು ಮನಸ್ಸು ಶಾಂತವಾದ ನಂತರ ಮಲಗಿದರೆ ನಿದ್ದೆ ಆಳವಾಗಿ ಬರುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಅಥವಾ ನಿದ್ರೆಯ ಗುಣಮಟ್ಟ ಹೆಚ್ಚಬೇಕು ಎಂದು ಬಯಸುವವರು ಚಿನ್ಮುದ್ರೆಯನ್ನು ಹಾಕಿ 20 ನಿಮಿಷ ಕುಳಿತು ನಂತರ ಮಲಗಬೇಕು. ಹಾಸಿಗೆಗೆ ಹೋಗುವ ಕನಿಷ್ಠ ಒಂದು ತಾಸು ಮೊದಲು ಟಿವಿ-ಮೊಬೈಲ್​ಗಳನ್ನು ಬಳಸದೇ ಇರುವುದು ಒಳ್ಳೆಯದು. ಇದರಿಂದ ನಿದ್ದೆ ಬೇಗನೆ ಬರುತ್ತದೆ; ಏಕೆಂದರೆ ನಿದ್ದೆಗೆ ಅನುಕೂಲ ಮಾಡಿಕೊಡುವ ಮೆಲಟೋನಿನ್ ಎಂಬ ಹಾರ್ವೇನ್ ಕತ್ತಲಿನಲ್ಲಿ ಬಿಡುಗಡೆ ಆಗುತ್ತದೆ. ರಾತ್ರಿ ಮಲಗುವ ಮೊದಲು ನೆತ್ತಿಗೆ ಮತ್ತು ಪಾದಕ್ಕೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿಕೊಂಡರೆ ಸುಖವಾದ ನಿದ್ದೆ ಬರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts