More

    ಉಪವಿಭಾಗಾಧಿಕಾರಿ ಕಚೇರಿ ಜಪ್ತಿ

    ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣ, ರಾಜೀವ ಗಾಂಧಿ ವಸತಿ ನಿಗಮಕ್ಕೆ ಭೂ ಸ್ವಾಧೀನಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ವಕೀಲರು ಮತ್ತು ಫಲಾನುಭವಿಗಳು ಶನಿವಾರ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿ ಹಾಗೂ ವಾಹನ ಜಪ್ತಿ ಮಾಡಿದರು. ಬಳಿಕ ಅಧಿಕಾರಿಗಳು ಪರಿಹಾರ ನೀಡಲು ಸಮಯಾವಕಾಶ ಕೇಳಿದ್ದರಿಂದ ಜಪ್ತಿ ಮಾಡಲಾಗಿದ್ದ ವಾಹನ ಬಿಡುಗಡೆಗೊಳಿಸಲಾಯಿತು.

    ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಸಾಂಬ್ರಾ ಗ್ರಾಮದಲ್ಲಿ ರೈತರಿಂದ 160 ಎಕರೆ ಕೃಷಿ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ, ಭೂಮಿ ಕಳೆದುಕೊಂಡು ಫಲಾನುಭವಿಗಳಿಗೆ 2ನೇ ಹಂತದಲ್ಲಿ ಸಿಗಬೇಕಾದ 19 ಕೋಟಿ ರೂ. ಮಾತ್ರ ವಿತರಣೆ ಆಗಿರಲಿಲ್ಲ. ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು 2 ವರ್ಷಗಳಿಂದ ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಆದರೆ, ಉಪ ವಿಭಾಗಾಧಿಕಾರಿಗಳು ವಿವಿಧ ಕಾರಣಗಳಿಂದ ಪರಿಹಾರ ನೀಡಿರಲಿಲ್ಲ.

    ಮತ್ತೊಂದು ಪ್ರಕರಣದಲ್ಲಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮವು ಬೆಳಗಾವಿ ತಾಲೂಕಿನ ಪಾರಿಶ್ವಾಡ್ ಗ್ರಾಮದಲ್ಲಿ 1997ರಲ್ಲಿ 10 ಎಕರೆಗಿಂತ ಅಧಿಕ ಜಮೀನು ಸ್ವಾಧೀನ ಮಾಡಿಕೊಂಡಿತ್ತು. ಆದರೆ, ಭೂಮಿ ಕಳೆದುಕೊಂಡ ಫಲಾನುಭವಿಗಳಿಗೆ ಸಿಗಬೇಕಾದ ಸುಮಾರು 10 ಲಕ್ಷಕ್ಕೂ ಅಧಿಕ ಪರಿಹಾರ ಮೊತ್ತ ವಿತರಣೆ ಆಗಿರಲಿಲ್ಲ.

    ಈ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನದಂತೆ ದೂರುದಾರರ ಪರವಾಗಿ ವಕೀಲರಾದ ಬಿ.ಎಸ್. ಧಡೇದ, ಬಿ.ಬಿ. ಮೊಖಾಶಿ, ಡಿ.ಬಿ. ಮಾನೆ ಹಾಗೂ ರೈತರು ಶನಿವಾರ ಬೆಳಗ್ಗೆ ಬೆಳಗಾವಿ ಉಪವಿಭಾಗಾಧಿಕಾರಿ ವಾಹನ ಜಪ್ತಿ ಮಾಡಿಕೊಂಡರು. ಅಲ್ಲದೆ, ಕಚೇರಿಯಲ್ಲಿನ ಪೀಠೋಪಕರಣಗಳ ಜಪ್ತಿಗೂ ಮುಂದಾದರು. ಇದರಿಂದ ಅಧಿಕಾರಿಗಳಿಗೆ ಇರಿಸು ಮುರಿಸು ಉಂಟಾಯಿತಲ್ಲದೆ, ವಕೀಲರು ಹಾಗೂ ರೈತರ ಮನವೊಲಿಸಲು ಅಧಿಕಾರಿಗಳು ಹರಸಾಹಸ ಪಟ್ಟರು.

    ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಸುಮಾರು 27 ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಸದ್ಯ ನ್ಯಾಯಾಲಯವು ಇಬ್ಬರು ರೈತರ ಪ್ರಕರಣದ ತೀರ್ಪು ನೀಡಿದೆ. ಇನ್ನುಳಿದ 25 ರೈತರು ನೀಡಿರುವ ದೂರಿನ ಪ್ರಕರಣ ವಿಚಾರಣೆ ಹಂತದಲ್ಲಿವೆ.

    ಸಾಂಬ್ರಾ ವಿಮಾನ ನಿಲ್ದಾಣ ವಿಸ್ತರಣೆ ಮತ್ತು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮವು ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಿಗೆ ಶೇ. 50ರಷ್ಟು ಪರಿಹಾರ ಜಮಾ ಮಾಡಿದೆ. ಬಾಕಿ ಉಳಿದಿರುವ ಅರ್ಧ ಪರಿಹಾರ ಮೊತ್ತ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರ್ಕಾರವು ಇಲ್ಲಿಯವರೆಗೆ ಪರಿಹಾರ ಬಿಡುಗಡೆ ಮಾಡಿಲ್ಲ. 2013ಕ್ಕಿಂತ ಮುಂದೆ ಉಪವಿಭಾಗಾಧಿಕಾರಿಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ನೀಡಲಾಗಿತ್ತು. ನಂತರ ಈ ಅಧಿಕಾರ ಹಿಂಪಡೆಯಲಾಗಿದೆ. ಈ ಪ್ರಕರಣ 2013 ಕ್ಕಿಂತ ಮುಂಚಿನ ಪ್ರಕರಣವಾಗಿದ್ದು, ಪರಿಹಾರಕ್ಕಾಗಿ ಸಮಯಾವಕಾಶ ಕೇಳಲಾಗಿದೆ.
    | ಅಶೋಕ ತೇಲಿ ಬೆಳಗಾವಿ ಉಪವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts