More

    ಬಿಸಿಲಿನ ಝಳಕ್ಕೆ ಜನ ಕಂಗಾಲು

    ಶ್ರೀನಿವಾಸ್ ಟಿ. ಹೊನ್ನಾಳಿ
    ರಣ ಬಿಸಿಲಿನ ಝಳಕ್ಕೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಜನ ಕಂಗಾಲಾಗಿದ್ದಾರೆ. ಬೆಳಗ್ಗೆ 10 ಗಂಟೆಗಾಗಲೇ ಗೋಡೆ, ಚಾವಣಿಗಳು ದೋಸೆ ಕಾವಲಿಯಂತೆ ಕಾದು ಮನೆಯಲ್ಲಿದ್ದರೆ ಬೇವರು ಸುರಿಯುತ್ತದೆ. ಮನೆಯಿಂದ ಹೊರ ಹೋದರೆ ಅಸಹನೀಯ ಬಿಸಿಲಿನ ತಾಪದಿಂದ ಜನರ ನಿತ್ಯ ಜೀವನ ನರಕ ಸದೃಶವಾಗಿದೆ.

    ಕಳೆದ ವಾರ 38,39,40,41 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಮಂಗಳವಾರ 41 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಈಗಾಗಲೇ ಅವಳಿ ತಾಲೂಕಿನ ಜನತೆ ಬಿಸಿಲಿನ ಬೇಗೆಯಲ್ಲಿ ಬೇಯುವಂತಾಗಿದೆ.

    ಇನ್ನೆರಡು ದಿನಗಳಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿ ಬಿಸಿಲಿನ ತಾಪ ಮತ್ತಷ್ಟು ಏರುವ ಸಾಧ್ಯತೆ ಇದೆ ಎನ್ನುವುದು ಹವಾಮಾನ ಇಲಾಖೆಯ ಮುನ್ಸೂಚನೆಯಾಗಿದೆ.

    ಬಿಸಿಲಿನ ಒಣ ಹವೆ ಹೀಗೇ ಮುಂದುವರಿದರೆ ಜನರು ದಿನದ 24 ಗಂಟೆಯೂ ಮನೆಯಿಂದ ಹೊರಗೆ ಬಾರದ ದುಸ್ಥಿತಿ ಎದುರಾಗಲಿದೆ.
    ಅವಳಿ ತಾಲೂಕುಗಳಲ್ಲಿ ತಾಪಮಾನ ತೀವ್ರವಾಗಿ ಏರಿಕೆ ಕಂಡಿರುವುದರಿಂದ ಜನ ಬೆಳಗ್ಗೆ 11 ರಿಂದ ಸಂಜೆ 5 ವರೆಗೆ ಮನೆಯಿಂದ ಹೊರ ಬರುತ್ತಿಲ್ಲ. ಬಿಸಿಲಿನ ತಾಪಕ್ಕೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.

    ಬಿಸಿಲಿನ ಬೇಗೆಗೆ ವೃದ್ಧರು ಮತ್ತು ಮಕ್ಕಳಲ್ಲಿ ಉರಿ ಮೂತ್ರ,ಜ್ವರ, ವಾಂತಿ, ಭೇದಿ, ನಿಶ್ಯಕ್ತಿ, ನಿರ್ಜಲಿಕರಣ, ಅತಿಯಾದ ತಲೆನೋವು ಉಂಟಾಗುತ್ತದೆ, ಆದ್ದರಿಂದ ಮಕ್ಕಳು ಹಾಗೂ ವೃದ್ಧರು ವಿವಿಧ ರೋಗಗಳಿಂದ ಬಳಲುತ್ತಿರುವವರು ಮನೆಯಿಂದ ಹೊರ ಹೋಗಬಾರದು. ಹೆಚ್ಚು ನೀರು ಕುಡಿಯಬೇಕು, ನಿಂಬೆ, ಉಪ್ಪು ಹಾಗೂ ಸಕ್ಕರೆ ಬೆರಸಿ ಮನೆಯಲೇ ಓಆರ್‌ಎಸ್ ತಯಾರಿಸಿ ಕುಡಿಯಬೇಕು. ಎಳೆನೀರು ಸೇವಿಸುವುದು ಉತ್ತಮ. ಬಿಸಿಲಿನ ತಾಪಕ್ಕೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬಿಸಿಲಿನ ತಾಪಕ್ಕೆ ಹಲವರಲ್ಲಿ ಕಿಡ್ನಿಸ್ಟೋನ್ ಮಮಸ್ಯೆ ಕಾಡುತ್ತಿದೆ. ಡ್ರಿಪ್ ಹಾಕಿಸಿಕೊಂಡ ನಂತರವೂ ಮನೆಗೆ ಹೋಗಲು ಇಷ್ಟಪಡದೆ ಆಸ್ಪತ್ರೆಯಲ್ಲೇ ಇದ್ದು ಪೂರ್ಣ ಗುಣವಾದ ನಂತರವೇ ಹೋಗುತ್ತೇವೆ ಎಂದು ರೋಗಿಗಳು ಹೇಳುತ್ತಾರೆ ಎಂದು ಸರ್ಕಾರಿ ಆಸ್ಪತ್ರೆ ಸ್ಥಾನಿಕ ವೈಧ್ಯಾಧಿಕಾರಿ ಡಾ.ಚಂದ್ರಪ್ಪ ಹೇಳಿದರು.

    ವಾರದ ತಾಪಮಾನ: ಏ. 23ರಂದು 40, 24ರಂದು 39, 25ರಂದು 40, 26 ರಂದು 40, 27 ರಂದು 40. 28 ರಂದು 40, 29 ರಂದು 41, 30 ರಂದು 41, ಮೇ 1ರಂದು 40, 2 ರಂದು 41ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳು ಅಂದರೆ ಮೇ 3 ರಂದು 41, 4 ರಂದು 41, 5 ರಂದು 41, 6 ರಂದು 40, 7 ರಂದು 40 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ತಂಪು ಪಾನೀಯ, ಹಣ್ಣುಗಳ ಮೊರೆ: ರಣ ಬಿಸಿಲಿನಿಂದ ಉಷ್ಣ ಗಾಳಿಗೆ ಹೈರಾಣಾದ ಜನ ಎಳೆನೀರು, ತಂಪುಪಾನೀಯ, ಕಲ್ಲಂಗಡಿ ಸೇವಿಸಿ ತಂಪಾಗಿರಲು ಯತ್ನಿಸುತ್ತಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಶಕೆಯಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ.
    ಬಿಸಿಲು ತಾಳಲಾರದೆ ಜನ ಮಳೆರಾಯನ ನಿರೀಕ್ಷೆಯಲ್ಲಿದ್ದಾರೆ. ಒಂದು ದೊಡ್ಡ ಮಳೆ ಆದರೆ ಮಾತ್ರ ಬಿಸಿಲಿನ ತಾಪ ಕಡಿಮೆಯಾಗಬಹುದೆಂದು ಹೇಳುತ್ತಿದ್ದಾರೆ.


    ವೃದ್ಧರು, ಮಕ್ಕಳಿಗೆ ಕುಡಿಯಲು ಶುದ್ಧ ನೀರು ಕೊಡಬೇಕು. ಅವರನ್ನು ಹೊರಗೆ ಕಳಿಸದೆ ಮನೆಯಲ್ಲೇ ಇರುವಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ದ್ರವಾಹಾರ, ಪಾನಿಯ ಕೊಡಬೇಕು. ಉಗುರು ಬೆಚ್ಚಗಿನ ನೀರಿನಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿದರೆ ಒಳ್ಳೆಯದು.
    ಡಾ.ಚಂದ್ರಪ್ಪ, ಸ್ಥಾನಿಕ ಆಡಳಿತಾಧಿಕಾರಿ ಸಾರ್ವಜನಿಕ ಆಸ್ಪತ್ರೆ, ಹೊನ್ನಾಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts