More

    ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಲು 70 ಸಾವಿರ ರೂ. ಖರ್ಚು ಮಾಡಿ ವಿಮಾನ ಟಿಕೆಟ್​ ಖರೀದಿಸಿದ ರೈತ!

    ನವದೆಹಲಿ: ಲಾಕ್​ಡೌನ್​ ಸಮಯದಲ್ಲಿ ತಮ್ಮ ಊರಿಗೆ ತೆರಳಲು ವಲಸೆ ಕಾರ್ಮಿಕರು ಅನುಭವಿಸಿದಂತಹ ಕಷ್ಟಗಳನ್ನು ಮಾಧ್ಯಮ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಅನೇಕರು ನಡೆದುಕೊಂಡು ಹಾಗೂ ಸೈಕಲ್​ನಲ್ಲಿ ಸಾವಿರಾರು ಕಿ.ಮೀ ಕ್ರಮಿಸಿದ್ದನ್ನು ಕಂಡಿದ್ದೇವೆ. ಸರ್ಕಾರ ಸೇರಿದಂತೆ ಅನೇಕರು ಸಹ ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ಆದರೆ, ಇವರೆಲ್ಲರಿಗಿಂತ ದೆಹಲಿ ಮೂಲದ ರೈತನೊಬ್ಬ ವಿಭಿನ್ನ ಎನಿಸಿಕೊಂಡಿದ್ದಾರೆ.

    ಇದನ್ನೂ ಓದಿ: ವಯಸ್ಕನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಅಪ್ರಾಪ್ತ ಮಗಳ ತಲೆಯನ್ನೇ ತುಂಡರಿಸಿದ ತಂದೆ

    ದೆಹಲಿಯ ತಿಗಿಪುರ್​ ಗ್ರಾಮದ ನಿವಾಸಿ ಪಾಪ್ಪನ್​ ಸಿಂಗ್​ ಅಣಬೆ ಬಳೆಯುವ ರೈತ. ಬಿಹಾರ ಮೂಲದ 10 ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಲು ಸುಮಾರು 70 ಸಾವಿರ ರೂ. ಖರ್ಚು ಮಾಡಿ ವಿಮಾನ ಟಿಕೆಟ್​ ಖರೀದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, ಲಾಕ್​ಡೌನ್ ವೇಳೆ ಕಾರ್ಮಿಕರಿಗೆ ಎರಡು ತಿಂಗಳು ಕಾಲ ಆಶ್ರಯ ನೀಡಿ, ಅಚ್ಚುಕಟ್ಟಾಗಿ ಆಹಾರ ವ್ಯವಸ್ಥೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.

    ದಶಕಗಳಿಂದ ಪಾಪ್ಪನ್​ ಸಿಂಗ್​ ಅವರ ಹೊಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಖಿಂದರ್​ ರಾಮ್​ ಸಕಲ ಗೌರವಗಳೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಂಡು ತಮ್ಮ ಕುಟುಂಬವನ್ನು ಸೇರುವ ಖುಷಿಯಲ್ಲಿದ್ದಾರೆ. ಅವರೊಂದಿಗೆ ಉಳಿದ 9 ಕಾರ್ಮಿಕರು ಸಹ ಅದೇ ಗೌರವದೊಂದಿಗೆ ತವರಿಗೆ ಮರಳಲಿದ್ದು, ಇವರೆಲ್ಲರಿಗೂ ಇದೇ ಮೊದಲ ವಿಮಾನ ಪ್ರಯಾಣವು ಸಹ ಆಗಿದೆ.

    ಇದನ್ನೂ ಓದಿ: ಪ್ರೇಯಸಿ ನೋಡಲು ಮನವಿ ಮಾಡಿದವನಿಗೆ ಸೋನು ಸೂದ್​ ಕೊಟ್ಟ ಉತ್ತರ ಹೀಗಿತ್ತು …

    ವಿಮಾನದಲ್ಲಿ ಪ್ರಯಾಣಿಸುತ್ತೇನೆಂದು ನಾನೆಂದಿಗೂ ಅಂದುಕೊಂಡಿರಲಿಲ್ಲ. ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಆದರೆ, ನಾಳೆ ವಿಮಾನ ನಿಲ್ದಾಣ ತಲುಪಿದಾಗ ಏನು ಮಾಡಬೇಕೆಂಬುದರ ಬಗ್ಗೆ ನಮಗೆ ಒತ್ತಡವು ಇದೆ ಎನ್ನುತ್ತಾರೆ ಲಖಿಂದರ್​ ರಾಮ್​. ಅಂದಹಾಗೆ ರಾಮ್​ ತಮ್ಮ ಮಗನೊಂದಿಗೆ ತವರಿಗೆ ತೆರಳಲು ಸಿದ್ಧರಾಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಪಾಪ್ಪನ್​ ಸಿಂಗ್​, ಒಂದು ವೇಳೆ ಮಾರ್ಗ ಮಧ್ಯೆ ಅವರಿಗೇನಾದರೂ ಸಂಭವಿಸಿದ್ದರೆ ಅದನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುವುದಿಲ್ಲ ಎಂಬ ಯೋಚನೆ ಬಂತು. ಹೀಗಾಗಿ ಅವರೆಲ್ಲರನ್ನೂ ಮನೆಗೆ ಸುರಕ್ಷಿತವಾಗಿ ಕಳುಹಿಸಿಕೊಡಲು ವಿಮಾನವೇ ಉತ್ತಮ ಎನಿಸಿತು. ಅವರೆಲ್ಲರೂ ನನ್ನ ಸ್ವಂತ ಜನರಿದ್ದಂತೆ. ಹೀಗಾಗಿ ಟಿಕೆಟ್​ ಖರಿದಿಸಿದೆ ಎಂದು ತಿಳಿಸಿದ್ದಾರೆ.

    ಪಾಪ್ಪನ್​ ಸಿಂಗ್​ ಅವರ ಕಾರ್ಮಿಕರನ್ನು ಹೊತ್ತೊಯ್ಯುವ ವಿಮಾನವು ನಾಳೆ (ಗುರುವಾರ) ಬೆಳಗ್ಗೆ 6 ಗಂಟೆಗೆ ದೆಹಲಿ ವಿಮಾನ ನಿಲ್ದಾಣವನ್ನು ಬಿಡಲಿದೆ. ಇದೇ ವೇಳೆ ಅವರಿಲ್ಲರನ್ನೂ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಯನ್ನು ಸಹ ನಡೆಸಲಾಗುತ್ತದೆ.

    ಇದನ್ನೂ ಓದಿ: ಫ್ಲೈಓವರ್‌ಗೆ ಸಾವರ್ಕರ್ ಹೆಸರು: ಪ್ರತಿಪಕ್ಷ ನಾಯಕರಿಗೆ ಸಿ.ಟಿ. ರವಿ ತಿರುಗೇಟು

    ಇನ್ನು ವಲಸೆ ಕಾರ್ಮಿಕರಿಂದಲೇ ಪಾಪ್ಪನ್​ ಸಿಂಗ್​ ಅವರು ಅಣಬೆ ಕೃಷಿಯಿಂದ ವಾರ್ಷಿಕ 12 ಲಕ್ಷ ಆದಾಯ ಗಳಿಸುತ್ತಾರಂತೆ. ಹೀಗಾಗಿ ಕಾರ್ಮಿಕರನ್ನೂ ಸಹ ಅವರು ತಮ್ಮ ಮನೆಯವರಂತೆ ನೋಡಿಕೊಳ್ಳುತ್ತಾರೆ. ಕಾರ್ಮಿಕರು ಅಷ್ಟೇ ಪಾಪ್ಪನ್​ ಸಿಂಗ್​ಗೆ ಕೃತಜ್ಞರಾಗಿದ್ದಾರೆ.

    ಈ ಮುಂಚೆ ಶ್ರಮಿಕ್​ ರೈಲಿನಲ್ಲಿ ಕಳುಹಿಸಿಕೊಡಲು ನಿರ್ಧರಿಸಿ ನೋಂದಣಿಯನ್ನು ಮಾಡಲಾಗಿತ್ತು. ಆದರೆ, ಉತ್ತರ ಭಾರತದಲ್ಲಿ ಬೇಸಿಗೆ ಹೆಚ್ಚಾಗಿರುವುದರಿಂದ ಉತ್ತಮವಲ್ಲ ಎಂಬ ನಿರ್ಧಾರಕ್ಕೆ ಪಾಪ್ಪನ್​ ಸಿಂಗ್​ ಬಂದರು. ಅಲ್ಲದೆ, ಪಟನಾದ ವಿಮಾನ ನಿಲ್ದಾಣದಿಂದ ಕಾರ್ಮಿಕರು ಇಳಿದ ನಂತರ ಅವರನ್ನು ಊರಿಗೆ ಕರೆದೊಯ್ಯಲು ಬಸ್​ ಟಿಕೆಟ್​ ಕೂಡ ಬುಕ್​ ಮಾಡಿದ್ದಾರೆ. ಈ ಎಲ್ಲ ಮಾನವೀಯ ಕಾರ್ಯಗಳಿಂದ ಪಾಪ್ಪನ್​ ಸಿಂಗ್​ ತುಂಬಾ ವಿಭಿನ್ನ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ತಮಿಳುನಾಡಿನಲ್ಲಿ ಒಂದೇ ದಿನ 817 ಕರೊನಾ ಸೋಂಕಿತರು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts