More

    ಮದ್ಯವರ್ಜನ ಶಿಬಿರ ಮನಸ್ಸು ಪರಿವರ್ತನೆಗೆ ಅಡಿಪಾಯ : ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಣ್ಣನೆ : ಉಜಿರೆ ವ್ಯಸನಮುಕ್ತಿ ಕೇಂದ್ರದಲ್ಲಿ 221ನೇ ಕಾರ್ಯಕ್ರಮ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ವ್ಯಸನದ ಚಟಕ್ಕೆ ಅಂಟಿಕೊಂಡವರ ಮನಪರಿವರ್ತನೆಗೆ ಹಮ್ಮಿಕೊಂಡ ವಿಶೇಷ ಮದ್ಯವರ್ಜನ ಶಿಬಿರದಿಂದ ಕುಟುಂಬದಲ್ಲಿ ಅನೇಕ ಸುಧಾರಣೆ ಮಾಡಿಕೊಳ್ಳಲು ಅವಕಾಶವಿದೆ. ಚಟದ ಅಮಲಿನಿಂದ ವ್ಯಸನಿಗಳು ಭ್ರಮೆಗೊಳಗಾಗಿ ಮಾಡುವ ಕೆಲಸ, ಆನಂದಿಸುವ ಖುಷಿಯನ್ನೇ ಸಾಧನೆ ಎಂದು ತಿಳಿದು ಸಂಭ್ರಮಿಸುತ್ತಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

    ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 221ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಇತ್ತೀಚೆಗೆ ಮಾತನಾಡಿದರು.

    ಸ್ವಯಂ ಮಾಡಲಸಾಧ್ಯ ಕೆಲಸವನ್ನು ವ್ಯಸನಕ್ಕೆ ಬಲಿಬಿದ್ದು ಮಾಡಿದ್ದೇನೆಂಬ ಸಮರ್ಥನೆಯಿಂದ ಪದೇ ಪದೇ ಚಟ ಮುಂದುವರಿಸುವುದು ಸಾಮಾನ್ಯ. ಇದರಿಂದ ಮಾನಸಿಕ, ದೈಹಿಕ, ಕೌಟುಂಬಿಕ ಸ್ವಾಸ್ಥ್ಯ ಕಳೆದುಕೊಂಡು ಒಂಟಿತನದಿಂದ, ಅನಾರೋಗ್ಯದಿಂದ ಬಳಲುತ್ತಾರೆ. ಅಂತಹವರು ಶಿಬಿರಗಳಿಗೆ ಬಂದು ಮನ ಪರಿವರ್ತನೆಯಾಗಿ ನವಜೀವನ ಪ್ರಾರಂಭಿಸುವುದರಿಂದ ಗಣನೀಯ ಸಾಧನೆ ಮಾಡಬಹುದು ಎಂದರು.

    ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಮಾತನಾಡಿ, ದೇವರ ಪ್ರಾರ್ಥನೆ, ಕೌಟುಂಬಿಕ ಸೌಹಾರ್ದ, ಗುರು ಹಿರಿಯರಿಗೆ ಗೌರವ, ಕಾಯಕದಲ್ಲಿ ಪ್ರಾಮಾಣಿಕತೆ, ದೃಢ ಸಂಕಲ್ಪ ವ್ಯಸನಮುಕ್ತಿಗೆ ರಹದಾರಿ ಎಂದರು.

    ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್ ಮಾರ್ಗದರ್ಶನದಲ್ಲಿ ಯೋಜನಾಧಿಕಾರಿ ಮೋಹನ್ ಕೆ, ಶಿಬಿರಾಧಿಕಾರಿ ವಿದ್ಯಾದರ್, ನಂದಕುಮಾರ್, ಆರೋಗ್ಯ ಸಹಾಯಕಿ ಪ್ರೆಸಿಲ್ಲಾ, ರಂಜನಾ ಸಹಕರಿಸಿದರು.

    ಆಧ್ಯಾತ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ. ಭಕ್ತಿಗೆ ಶರಣಾಗುವ ಪ್ರತಿಯೊಬ್ಬರು ಸಾತ್ವಿಕರೆನಿಸಿಕೊಳ್ಳಬಹುದು. ವ್ಯಸನಿಗಳು ದುಷ್ಟರಲ್ಲ, ಪಾಪಿಗಳಲ್ಲ. ಕಬ್ಬಿಣಕ್ಕೆ ಕಿಲುಬು ಹಿಡಿದಂತೆ ಇವರಿಗೆ ವ್ಯಸನದ ಕಿಲುಬು ಅಂಟಿಕೊಂಡಿದೆ. ಚಿನ್ನಕ್ಕೆ ಕಿಲುಬು ಅನ್ವಯಿಸುವುದಿಲ್ಲ. ಇಂದು ಪ್ರತಿಯೊಬ್ಬ ಶಿಬಿರಾರ್ಥಿಗಳಿಗೆ ದೇವರು ಚಿನ್ನದಂತೆ ಬದುಕಲು, ಕುಟುಂಬದೊಂದಿಗೆ ಜೀವನ ಸಾರ್ಥಕಗೊಳಿಸಲು ಶಿಬಿರದ ಮೂಲಕ ಆಶೀರ್ವದಿಸಿದ್ದಾರೆ. ವ್ಯಸನಮುಕ್ತರಾಗಿ ಬಾಳಿ.
    – ಡಾ.ಡಿ.ವೀರೇಂದ್ರ ಹೆಗ್ಗಡೆ
    ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts