More

    ಡಿಸಿಸಿ ಬ್ಯಾಂಕ್ ಚುನಾವಣೆ, ದಾಖಲೆ ಬರೆದ ಸಚಿವ ಶಿವಾನಂದ ಪಾಟೀಲ

    ವಿಜಯಪುರ: ರಾಜ್ಯದ ಪ್ರತಿಷ್ಟಿತ ಸಹಕಾರಿ ಬ್ಯಾಂಕ್‌ಗಳಲ್ಲೊಂದಾದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಸಚಿವ ಶಿವಾನಂದ ಪಾಟೀಲ ಆಯ್ಕೆಯಾಗುವ ಮೂಲಕ ದಾಖಲೆ ಮೆರೆದಿದ್ದಾರೆ.

    ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಶಿವಾನಂದ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಜಶೇಖರ ಬಿ.ಗುಡದಿನ್ನಿ ಅವಿರೋಧವಾಗಿ ಆಯ್ಕೆಯಾದರು. ಆ ಮೂಲಕ ಶಿವಾನಂದ ಪಾಟೀಲರು ಸತತ 6ನೇ ಬಾರಿಗೆ ಆಯ್ಕೆಯಾದರು. ಇದರಲ್ಲಿ ಐದು ಬಾರಿ ಅವಿರೋಧವಾಗಿ ಆಯ್ಕೆಯಾದ ಖ್ಯಾತಿಗೆ ಭಾಜನರಾದರು. ರಾಜಶೇಖರ ಬಿ. ಗುಡದಿನ್ನಿ ಸಹ 1996-97 ರಿಂದ ಸತತವಾಗಿ ಬ್ಯಾಂಕ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ 3ನೇ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆ ಹೊತ್ತರು.

    1997 ರಿಂದ 2023 ರವರೆಗೆ ಸತತವಾಗಿ ಚುನಾಯಿತ ಅಧ್ಯಕ್ಷರಾಗಿ ಬ್ಯಾಂಕ್ ಮುನ್ನಡೆಸುತ್ತಿರುವ ಶಿವಾನಂದ ಪಾಟೀಲರು 2023-24 ರಿಂದ 2027-28ರವರೆಗಿನ ಐದು ವರ್ಷಗಳ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಆ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇವರ ಅವಧಿಯಲ್ಲಿ ಅತ್ಯುತ್ತಮವಾಗಿ ಮುನ್ನಡೆಯುತ್ತಿರುವ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಪ್ರತಿಷ್ಟೆಗಳಿಸಿದೆ. ಸಾಕಷ್ಟು ಪ್ರಶಸ್ತಿಗಳಿಗೆ ಭಾಜನವಾಗಿದೆ. ಸತತ ಲಾಭದತ್ತ ದಾಪುಗಾಲಿಡುತ್ತಿದೆ.

    2023 ಡಿ.12 ರಂದು ನಡೆದ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರಾದ ಶೇಖರ ಅ. ದಳವಾಯಿ, ಬಿ.ಎಸ್. ಪಾಟೀಲ (ಯಾಳಗಿ), ಕಲ್ಲನಗೌಡ ಬಿ. ಪಾಟೀಲ, ಹಣಮಂತ್ರಾಯಗೌಡ ಆರ್. ಪಾಟೀಲ, ಸಂಯುಕ್ತಾ ಎಸ್. ಪಾಟೀಲ, ಗುರುಶಾಂತ ಎಸ್. ನಿಡೋಣಿ, ಸುರೇಶಗೌಡ ಐ. ಬಿರಾದಾರ, ಚಂದ್ರಶೇಖರಗೌಡ ಎಸ್. ಪಾಟೀಲ (ಮನಗೂಳಿ), ಅರವಿಂದ ಎ. ಪೂಜಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕಿ ಭಾಗ್ಯಶ್ರೀ ಎಸ್. ಕೆ ಮತ್ತಿತರರು ಚುನಾವಣೆಯಲ್ಲಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

    ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ಎ. ಢವಳಗಿ, ಬ್ಯಾಂಕ್ ವೃತ್ತಿಪರ ನಿರ್ದೇಶಕ ಎಸ್.ಎಸ್. ಶಿಂಧೆ, ಆಡಳಿತ ಮಂಡಳಿ ಸಲಹೆಗಾರ ಜೆ. ಕೊಟ್ರೇಶಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ. ಬಿರಾದಾರ ಪಾಲ್ಗೊಂಡಿದ್ದರು. ವಿಜಯಪುರ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

    ನಿರ್ದೇಶಕರ ಆಯ್ಕೆ ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ. ಮುಂದಿನ ಆಡಳಿತಾವಧಿಯಲ್ಲಿ ಬ್ಯಾಂಕ್ ಮತ್ತಷ್ಟು ಪ್ರಗತಿ ಸಾಧಿಸುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ರೈತರಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಸಿಗುವಂತೆ ಹಾಗೂ ಗ್ರಾಹಕರಿಗೆ ಸಮಯೋಚಿತವಾಗಿ ಸೇವೆ ನೀಡಲು ಶ್ರಮಿಸುತ್ತೇನೆ.
    -ಶಿವಾನಂದ ಪಾಟೀಲ, ನೂತನ ಅಧ್ಯಕ್ಷರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts