More

    ಏಳು ಆರೋಪಿಗಳ ಬಂಧನ, 37 ಬೈಕ್, ಒಂದು ಕಾರು, 2.20 ಲಕ್ಷ ರೂ. ನಗದು ವಶ

    ಸಿಂದಗಿ: ಕಳೆದ ಎರಡ್ಮೂರು ದಿನಗಳ ಹಿಂದೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಏಳು ಆರೋಪಿಗಳನ್ನು ವಿಚಾರಣೆಗೈದು, ಅಂದಾಜು 16.65 ಲಕ್ಷ ರೂ. ಮೌಲ್ಯದ 37 ದ್ವಿಚಕ್ರ ವಾಹನ, ಒಂದು ಕಾರು ಹಾಗೂ ಬ್ಯಾಂಕ್- ಫೈನಾನ್ಸ್ ಕಳ್ಳತನ ಪ್ರಕರಣದಲ್ಲಿ 2.20 ಲಕ್ಷ ರೂ. ನಗದು ಹಣವನ್ನು ಸಿಂದಗಿ ಪೊಲೀಸರ ತಂಡ ವಶಕ್ಕೆ ಪಡೆದಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ ಹೇಳಿದರು.

    ಸಿಂದಗಿ ಪೊಲೀಸ್ ಠಾಣೆಯಲ್ಲಿ ಕಳ್ಳರಿಂದ ವಶಕ್ಕೆ ಪಡೆದ ನಗದು ಹಾಗೂ ಬೈಕ್- ಕಾರು ಪ್ರದರ್ಶಿಸಿ ಅವರು ಮಾತನಾಡಿದರು.
    ಪೊಲೀಸ್ ತನಿಖಾ ತಂಡ ಕಳೆದ ಫೆ.8 ಹಾಗೂ ಫೆ.10 ರಂದು ಪಟ್ಟಣದ ಯಂಕಂಚಿ ಹಾಗೂ ಆಲಮೇಲ ರಸ್ತೆಯಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಏಳು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣೆ ಬೆಳಕಿಗೆ ಬಂದಿದೆ ಎಂದರು.

    ದ್ವಿಚಕ್ರ ವಾಹನ ಕಳ್ಳತನ ಮಾಡಿದ ಶಹಾಪುರ ಹಾಗೂ ಸುರಪುರ ತಾಲೂಕಿನ ನಿವಾಸಿಗಳಾದ ಬಸವರಾಜ ಹುಣಸಿಗಿಡದ (31), ಹುಲಗಪ್ಪ ಕೊಕಲೋರ (22), ಕೊಂಡಯ್ಯ ಪಾರ್ವತಿದೊಡ್ಡಿ (22) ಹಾಗೂ ರವಿಕುಮಾರ ಪಾರ್ವತಿದೊಡ್ಡಿ ಎಂಬ ಆರೋಪಿಗಳು ರಾಜನಕೊಳ್ಳೂರ, ಸಿಂದಗಿ, ಯಡ್ರಾಮಿ, ಸೇಡಂ, ಭೀಮರಾಯನಗುಡಿ, ಬಿರೂರ, ಚಾಮನಾಳ, ಬೂದನೂರ, ಹದನೂರ, ನೆಲೋಗಿ, ಜೇವರ್ಗಿ, ಮುಡಬಾಳ, ಮಲ್ಲಾ(ಬಿ), ಮಳ್ಳಿ, ಅರಕೇರಾ, ಸಲದಾಪುರ, ಜಾಲಹಳ್ಳಿ, ಕೊಡೇಕಲ್ಲ, ಶಿರಾಳ, ತಾಳಿಕೋಟಿ ಸೇರಿ ಇತರ ಗ್ರಾಮ ಹಾಗೂ ಪಟ್ಟಣಗಳಲ್ಲಿನ ಬೈಕ್‌ಗಳ ಹ್ಯಾಂಡಲಾಕ್ ಮುರಿದು ಕಳ್ಳತನ ನಡೆಸಿರುವುದನ್ನು ಪತ್ತೆ ಹಚ್ಚಲಾಗಿದೆ. ಕಲಬುರ್ಗಿ- ಯಾದಗಿರಿಗಳಲ್ಲಿ 11 ಪ್ರಕರಣ ಹಾಗೂ ಸಿಂದಗಿಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಕಳ್ಳತನ ಮಾಡಿರುವ ಬೈಕ್‌ಗಳಲ್ಲಿ ಹೆಚ್ಚಿನವು ಸ್ಪ್ಲೆಂಡರ್ ಕಂಪನಿಯ ಬೈಕ್‌ಗಳಿವೆ. ಬೈಕ್ ವಾರಸುದಾರರನ್ನು ಪತ್ತೆ ಹಚ್ಚಿ ಅವರಿಗೆ ನೀಡಲಾಗುವುದು ಎಂದು ಹೇಳಿದರು.

    ಸಿಂದಗಿ ಪಟ್ಟಣದ ಅನ್ನಪೂರ್ಣ ಫೈನಾನ್ಸ್, ಇಂಡಿ ಪಟ್ಟಣದ ಪಿಕೆಪಿಎಸ್ ಬ್ಯಾಂಕ್‌ಗಳಲ್ಲಿ ನಡೆದ ಕಳ್ಳತನ ಪ್ರಕರಣ ಹಾಗೂ ಸಿಂದಗಿ ನಗರದ ಎಲ್‌ಆ್ಯಂಡ್‌ಟಿ ಫೈನಾನ್ಸ್ ಕಳ್ಳತನ ಯತ್ನ ಪ್ರಕರಣಕ್ಕೆ ಸಬಂಧಿಸಿದಂತೆ ಇಲ್ಲಿನ ಗೋಲಿಬಾರ ಮಡ್ಡಿಯಲ್ಲಿನ ಪ್ರಭು ಶಿವಪ್ಪ ಹಲಗಿ(32), ಅನೀಲ ಸುರೇಶ ನಾಯ್ಕೋಡಿ (32) ಹಾಗೂ ಬಸವರಾಜ ಲಕ್ಷ್ಮಣ ಮಾದರ (28) ಎಂಬ ಆರೋಪಿತರಿಂದ ಒಂದು ಕಾರು ಸೇರಿ 2.20 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದರು.

    ಆರೋಪಿಗಳನ್ನು ಪತ್ತೆ ಮಾಡಿದ ಸಿಂದಗಿ ಪೊಲೀಸರ ತಂಡವನ್ನು ಶ್ಲಾಘಿಸಿದ ಎಸ್ಪಿ ಅವರು ಬಹುಮಾನ ಘೋಷಿಸಿದರು. ಹೆಚ್ಚುವರಿ ಎಸ್ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್ಪಿ ಜಗದೀಶ ಎಚ್.ಎಸ್., ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ, ಪಿಎಸ್‌ಐ ಭೀಮಪ್ಪ ರಬಕವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts