More

    ಪರೀಕ್ಷಾ ಲೋಪಗಳ ಕುರಿತು ತನಿಖೆಯಾಗಲಿ ರಾಜ್ಯ ಸರ್ಕಾರಕ್ಕೆ ಎಂಎಲ್ಸಿ ಎಸ್.ವಿ.ಸಂಕನೂರ ಆಗ್ರಹ

    ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಹಾಗೂ 5, 8, 9 ಹಾಗೂ 11ನೇ ತರಗತಿಗಳ ಪರೀಕ್ಷೆ ಕಾರ್ಯದಲ್ಲಿನ ಲೋಪದೋಷಗಳ ಕುರಿತ ತನಿಖೆ ನಡೆಸಬೇಕು. ಇದಕ್ಕಾಗಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ತಡೆಗೆ ಈ ಬಾರಿ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು ಸರಿ. ಆದರೆ ಈ ಸಂಬಂಧ ಶಾಲಾಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ಪಡೆಯಲಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
     ಅಲ್ಲದೆ ಈ ಬಾರಿ ಫಲಿತಾಂಶ ಶೇ.43ರಷ್ಟು ಆಗಿದ್ದರ ಹಿನ್ನೆಲೆಯಲ್ಲಿ ಟೀಕೆ ಎದುರಾಗುವ ಸಂಭವದ ಹಿನ್ನೆಲೆಯಲ್ಲಿ ಗ್ರೇಸ್ ಮಾರ್ಕ್ಸ್‌ಗಳನ್ನು ನೀಡಿ ಫಲಿತಾಂಶದ ಪ್ರಮಾಣವನ್ನು 73.40ಕ್ಕೆ ಹೆಚ್ಚಿಸಲಾಯಿತು. ಇದಕ್ಕೆ ಶಿಕ್ಷಣ ತಜ್ಞರ ಅಭಿಪ್ರಾಯ ನೀಡಲಾಗಿತ್ತೆ? ಯಾರ ಒತ್ತಡದ ಮೇಲೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬುದನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
    5,8, 9 ಹಾಗೂ 11ನೇ ತರಗತಿಗೆ ಮೊದಲ ಬಾರಿಗೆ ಪರೀಕ್ಷಾ ಮಂಡಳಿಯಿಂದಲೇ ಪರೀಕ್ಷೆ ನಡೆಸಿದ್ದಕ್ಕೆ ನಮ್ಮ ವಿರೋಧವಿಲ್ಲ. ಶಿಕ್ಷಕರು, ಶಿಕ್ಷಕ ಸಂಘಟನೆಗಳು, ಆಡಳಿತ ಮಂಡಳಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿರಲಿಲ್ಲ. ಹೀಗಾಗಿ ಈ ವಿಚಾರ ಸುಪ್ರೀಂಕೋರ್ಟ್ ಮಟ್ಟಿಲೇರಿದೆ. ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸದಿರಲು ಕೋರ್ಟ್ ತೀರ್ಪು ನೀಡಿದೆ.
    1 ಕೋಟಿ ವಿದ್ಯಾರ್ಥಿಗಳು, ಪಾಲಕರಿಗೆ ಇದು ತಲೆನೋವಾಗಿದೆ. ಇದೀಗ ವಿದ್ಯಾರ್ಥಿಗಳು ಕಿರುಪರೀಕ್ಷೆಯಲ್ಲಿ ಪಡೆದ ಅಂಕಗಳ ಮಾನದಂಡದ ಮೇಲೆ ತೇರ್ಗಡೆ ನಿರ್ಧಾರ ಮಾಡಲು ಹೊರಟಿದೆ. ಶಿಕ್ಷಣ ಸಚಿವರಿಗೆ ಇಲಾಖೆಯ ಆಗುಹೋಗುಗಳ ಬಗ್ಗೆ ಕಾಳಜಿ ಇಲ್ಲವಾಗಿದೆ ಎಂದು ದೂರಿದರು.
    ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಅನೇಕ ತಪ್ಪುಗಳನ್ನು ಕೈಗೊಂಡು ಶೈಕ್ಷಣಿಕ ಕ್ಷೇತ್ರವನ್ನೇ ಹಾಳು ಮಾಡಿದೆ. ಅಧಿಕಾರ ವಹಿಸಿದ ಕೆಲವೇ ತಿಂಗಳಲ್ಲೇ 6ರಿಂದ 10ನೇ ತರಗತಿವರೆಗೆ ಇದ್ದ 10 ಪಾಠಗಳನ್ನು ತೆಗೆದುಹಾಕಿತು. ಅಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ರಾಜ್ಯದಲ್ಲಿ ಎಸ್‌ಇಪಿ ಜಾರಿಗೊಳಿಸಿತು.
    ಹೀಗೆ ಬಿಜೆಪಿ ಮೇಲೆ ಸೇಡಿನ ತೀರ್ಮಾನಗಳನ್ನು ಕಾಂಗ್ರೆಸ್ ಕೈಗೊಂಡಿತು. ಶಿಕ್ಷಣ ತಜ್ಞರ ಅಭಿಪ್ರಾಯವನ್ನೂ ಪಡೆಯದೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಗೆ ಮೂರು ಪರೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿರುವುದು ಅವೈಜ್ಞಾನಿಕ. ಜುಲೈ ಅಂತ್ಯಕ್ಕೆ 3ನೇ ಪರೀಕ್ಷೆ ನಡೆದು ಆಗಸ್ಟ್‌ನಲ್ಲಿ ಇದರ ಫಲಿತಾಂಶ ಬರಲಿದೆ. ಮಕ್ಕಳ ಕಾಳಜಿ ಸರ್ಕಾರಕ್ಕಿಲ್ಲ ಎಂದು ಟೀಕಿಸಿದರು.
    ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ್ ಮಾತನಾಡಿ ಕಾಂಗ್ರೆಸ್ ಸಚಿವರ ಒಡೆತನದ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳಿಗೆ ಎನ್‌ಇಪಿ ಜಾರಿಗೊಳಿಸಲಾಗಿದೆ. ಆದರೆ ಬಡವರ ಮಕ್ಕಳಿಗೆ ಇದು ಸಿಗುತ್ತಿಲ್ಲ. ರಾಜ್ಯ ಸರ್ಕಾರ ಡಬಲ್ ಸ್ಟಾೃಂಡರ್ಡ್ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
    ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಡಾ.ವೈ.ಎ.ನಾರಾಯಣಸ್ವಾಮಿ ಸ್ಪರ್ಧಿಸಿದ್ದು ಶಿಕ್ಷಕ ಮತದಾರರು ಬೆಂಬಲ ನೀಡಬೇಕು ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಧನಂಜಯ ಕಡ್ಲೇಬಾಳ್, ಯಶವಂತರಾವ್ ಜಾಧವ್, ಎಚ್.ಎನ್. ಶಿವಕುಮಾರ್, ಮಂಜು ಪೈಲ್ವಾನ್, ವಿಶ್ವಾಸ್ ಇದ್ದರು.
    ====

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts