More

    ಆರೋಗ್ಯ ನಡಿಗೆಯಲ್ಲಿ ಸಾವಿರಾರು ಹೆಜ್ಜೆಗಳ ಸಂಗಮ

    ದಾವಣಗೆರೆ: ಎಲ್ಲಿ ನೋಡಿದರಲ್ಲಿ ಜನವೋ ಜನ. ಆರೋಗ್ಯವೇ ಭಾಗ್ಯ.., ನಮ್ಮ ನಡಿಗೆ ಆರೋಗ್ಯದ ಕಡೆಗೆ.. ಇತ್ಯಾದಿ ಘೋಷಣೆಗಳ ಸದ್ದು. ಇಫ್ಟಾ ಸಮಿತಿ ಸದಸ್ಯರಿಂದ ಪರಿಸರ ಗೀತೆಗಳ ಝಲಕ್.. ರಾಜ್ಯದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ವಾಹಿನಿ’ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯಕ್ಕಾಗಿ ನಡಿಗೆ-ವಾಕಥಾನ್‌ಗೆ ಉತ್ತಮ ಜನಸ್ಪಂದನೆ ವ್ಯಕ್ತವಾಯಿತು. ಡ್ರೋಣ್ ಕ್ಯಾಮರಾದಲ್ಲಿ ಜಾಥಾದ ವಿಹಂಗಮ ನೋಟ ಸೆರೆಯಾಯಿತು.

    ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಎಸ್‌ಎಸ್ ಕೇರ್ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ, ಭರತ್ ಪ್ರಾಪರ್ಟಿಸ್, ದಾವಣಗೆರೆ ವಿವಿ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಆಯೋಜನೆಗೊಂಡಿದ್ದ ಜಾಥಾದಲ್ಲಿ 3000 ಹೆಚ್ಚು ಜನರು ಹೆಜ್ಜೆ ಹಾಕಿದರು.

    ಎಸ್‌ಎಸ್ ಕೇರ್ ಟ್ರಸ್ಟ್‌ನ ಆಜೀವ ಟ್ರಸ್ಟಿ ಪ್ರಭಾ ಮಲ್ಲಿಕಾರ್ಜುನ್ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಹಸಿರು ನಿಶಾನೆ ತೋರಿಸಿ ವಾಕಥಾನ್‌ಗೆ ಚಾಲನೆ ನೀಡಿದ್ದು ಮಾತ್ರವಲ್ಲದೆ ಎಲ್ಲರೊಂದಿಗೆ ನಡಿಗೆಯಲ್ಲಿ ಸಹಭಾಗಿಯಾದರು. ಅಲ್ಲಿಂದ ಬಾಪೂಜಿ ಆಸ್ಪತ್ರೆ ರಸ್ತೆ, ಗುಂಡಿ ಮಹದೇವಪ್ಪ ವೃತ್ತ, ಚಿಗಟೇರಿ ಆಸ್ಪತ್ರೆ ರಸ್ತೆ, ವಿದ್ಯಾರ್ಥಿ ಭವನ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಜಯದೇವ ವೃತ್ತದಲ್ಲಿ ಸುಸಂಪನ್ನಗೊಂಡಿತು.

    ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ವಿಜಯವಾಣಿ ಆಯೋಜಿಸಿದ್ದ ವಾಕಥಾನ್ ಅರ್ಥಪೂರ್ಣವಾಗಿದೆ. ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಈ ವರ್ಷದ ಧ್ಯೇಯ ವಾಕ್ಯ ‘ನಮ್ಮ ಭೂಮಿ ನಮ್ಮ ಆರೋಗ್ಯ’ ಎಂಬುದಾಗಿದೆ. ಎಲ್ಲರ ಆರೋಗ್ಯಕರ ಜೀವನಕ್ಕೆ ಶುದ್ಧ ಗಾಳಿ, ನೀರು ಸಮತೋಲನದ ಅಗತ್ಯವಿದೆ. ಎಲ್ಲರಿಗೂ ಉತ್ತಮ ಆರೋಗ್ಯ ಸಿಗಲಿ ಎಂದು ಪ್ರಭಾ ಮಲ್ಲಿಕಾರ್ಜುನ್ ಹಾರೈಸಿದರು.

    ಎಸ್‌ಎಸ್ ಕೇರ್ ಟ್ರಸ್ಟ್, ಜನರ ಆರೋಗ್ಯದ ಕಾಳಜಿಯಿಂದ ಅನೇಕ ಶಿಬಿರಗಳನ್ನು ಸಂಘಟಿಸುತ್ತಿದೆ. ಉಚಿತ ಡಯಾಲಿಸಿಸ್ ಸೌಲಭ್ಯ ಒದಗಿಸುತ್ತಿದೆ. ಅಪೌಷ್ಠಿಕ ಮಕ್ಕಳ ಆರೋಗ್ಯ ಕಾಪಾಡಲು ಶ್ರಮಿಸುತ್ತಿದೆ. ಆರೋಗ್ಯ ಕಾಳಜಿ ಮೂಡಿಸುವ ಈ ಜಾಥಾದಲ್ಲಿ ನಾವು ಭಾಗಿಯಾಗಿದ್ದೇವೆ. ಜನರು ಸ್ವಯಂ ಪ್ರೇರಿತರಾಗಿ ವಾಕಥಾನ್‌ನಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ ಎಂದರು.

    ಈ ನೆಲ.. ಈ ಜಲ.. ಈ ಮಣ್ಣು ಯಾರದು? ರಕ್ಷಿಸುವ ಹೊಣೆಗಾರಿಕೆ ನೀವೇ ಹೇಳಿ ಯಾರದು?, ಎಲ್ಲಿ ಹೋದವು ಕಣ್ಣಿಗೆ ಕಾಣದಾದವು… ಮೊದಲಾದ ಸಾಂದರ್ಭಿಕ ಪರಿಸರ ಗೀತೆಗಳನ್ನು ಭಾರತೀಯ ಜನಕಲಾ ಸಮಿತಿ ಸದಸ್ಯ ಐರಣಿ ಚಂದ್ರು ಮತ್ತು ಅವರ ತಂಡದವರು ಹಾಡಿ ಗಮನ ಸೆಳೆದರು. ವಿಜಯವಾಣಿ ವತಿಯಿಂದ ನೀಡಲಾದ ಟಿ ಶರ್ಟ್, ಟೋಪಿಗಳು ಜಾಥಾದುದ್ದಕ್ಕೂ ರಾರಾಜಿಸಿದವು. ಚಿಣ್ಣರು ಭಾರತ್ ಮಾತಾ ಕಿ ಜೈ ಎಂದು ಜಯಘೋಷ ಹಾಕಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಸೆಲ್ಫಿ ಮೂಡಿಗೆ ಜಾರಿದ್ದರು.

    ಎಸ್‌ಎಸ್‌ಐಎಂಎಸ್ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜು, ಬಾಪೂಜಿ ನರ್ಸಿಂಗ್ ಕಾಲೇಜು, ಜೆಜೆಎಂ ಕಾಲೇಜು, ಬಾಪೂಜಿ ಫಾರ್ಮಸಿ ಕಾಲೇಜು, ಆರ್‌ಎಲ್ ಕಾನೂನು ಕಾಲೇಜು, ಎವಿಕೆ, ಬಿಐಇಟಿ ಕಾಲೇಜು, ಸಿದ್ಧ್ದಗಂಗಾ ಸಂಸ್ಥೆ, ಕುಂದುವಾಡ ಕೆರೆ ವಾಯುವಿಹಾರಿಗಳ ಬಳಗ, ಲೈಫ್‌ಲೈನ್ ರಕ್ತದಾನಿಗಳ ಸಮೂಹ, ರೆಡ್‌ಕ್ರಾಸ್ ಸಂಸ್ಥೆ, ಕಲಾಕುಂಚ ಮಹಿಳಾ ಲೇಖಕಿಯರ ವೇದಿಕೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ವೇದಿಕೆ ಸೇರಿ ವಿವಿಧ ಸಂಘಟನೆಗಳು ಜಾಥಾಕ್ಕೆ ಬಲ ತುಂಬಿದವು.

    ಮಾಜಿ ಶಾಸಕ ಬಿ.ಪಿ.ಹರೀಶ್, ವಾಸುದೇವ ರಾಯ್ಕರ್, ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಸದಸ್ಯರಾದ ಎಸ್.ಟಿ.ವೀರೇಶ್, ಎ.ನಾಗರಾಜ್, ಕೆ.ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಡಿಎಚ್‌ಒ ಡಾ.ನಾಗರಾಜ್, ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ.ಷಣ್ಮುಖಪ್ಪ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ, ಡಾ.ಬಿ.ಎಸ್.ಪ್ರಸಾದ್, ಡಾ.ಎಸ್.ಬಿ.ಮುರುಗೇಶ್, ಡಾ.ಲತಾ, ಡಾ.ಎ.ಎಂ.ಶಿವಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್, ಸಾಲಿಗ್ರಾಮ ಗಣೇಶ ಶೆಣೈ, ಎಂ.ಜಿ.ಶ್ರೀಕಾಂತ್, ಗೋಪಾಲಕೃಷ್ಣ, ಪಿ.ಸಿ.ರಾಮನಾಥ್, ಬಾದಾಮಿ ಪೃಥ್ವಿ, ಸಂತೋಷ್ ಗಾಯಕ್‌ವಾಡ್, ಆರ್.ಎಸ್.ಎಸ್. ಸಿದ್ದರಾಜು, ರವೀಂದ್ರ ಅರಳಗುಪ್ಪಿ, ಶ್ರೀಕಾಂತ್ ಬಗರೆ, ಎಲ್.ಎಚ್.ಅರುಣಕುಮಾರ್, ಜಯಮ್ಮ ನೀಲಗುಂದ, ಎಸ್.ಎಸ್.ಮಲ್ಲಮ್ಮ, ವೀಣಾ ಕೃಷ್ಣಮೂರ್ತಿ, ಎಚ್.ಎಂ.ಮಂಗಳಾ, ಸೌಭಾಗ್ಯ, ರಾಜಶೇಖರ ಗುಂಡಗಟ್ಟಿ, ಲಕ್ಷ್ಮಣರಾವ್ ಸಾಳಂಕಿ, ಬಾತಿ ಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts