More

    ಹೇಗಿದ್ದ ಕೆರೆ ಹೇಗಾಯ್ತು, ಮತ್ತೆ ಮೊದಲಿನಂತೆ ಆದೀತೆ?

     ರಮೇಶ ಜಹಗೀರದಾರ್, ದಾವಣಗೆರೆ
     ನಗರದ ಕುಂದುವಾಡ ಕೆರೆ ಉಗಮದಿಂದ ಇಲ್ಲಿಯ ವರೆಗೆ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿದೆ. ಕುಂದುವಾಡ ಗ್ರಾಮಕ್ಕೆ ಹೊಂದಿಕೊಂಡಿದ್ದ ನೈಸರ್ಗಿಕ ಕೆರೆಯ ಸ್ವರೂಪವೇ ಬದಲಾಗಿ ಇಡೀ ಊರಿಗೆ ನೀರಿನ ಆಸರೆಯಾಗಿ ನಿಂತಿದ್ದು ರೋಚಕ ಕತೆ.
     ಸುತ್ತಲೂ ಹಚ್ಚ ಹಸಿರಿನ ಭತ್ತದ ಗದ್ದೆಗಳು, ತೋಟಗಳಿಂದ ಕೂಡಿದ್ದ ಪರಿಸರದಲ್ಲಿ 265 ಎಕರೆ ವಿಸ್ತೀರ್ಣದ ನೈಸರ್ಗಿಕ ಕೆರೆ. ಆಸುಪಾಸಿನ ಪ್ರದೇಶಗಳಲ್ಲಿ ಬಿದ್ದ ಮಳೆ ನೀರು ಅಲ್ಲಿಗೆ ಬಂದು ಸೇರುತ್ತಿತ್ತು. ಕಾಲ ಕ್ರಮೇಣ ಜನಸಂಖ್ಯೆ ಬೆಳೆದಂತೆ ಕೊಳಚೆ ನೀರೂ ಅಲ್ಲಿಗೇ ಹರಿಯತೊಡಗಿತು.
     ಅಂಥ ಕೆರೆಗೆ 2003 ರಲ್ಲಿ ಕಾಯಕಲ್ಪ ನೀಡಿ ಎಲ್ಲರೂ ಹುಬ್ಬೇರಿಸುವ ರೀತಿಯಲ್ಲಿ ಅಭಿವೃದ್ಧಿ ಮಾಡಿದ ಶ್ರೇಯಸ್ಸು ಆಗ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಲ್ಲುತ್ತದೆ.
     ಒಂದು ರೀತಿಯಲ್ಲಿ ಅದು ಭಗೀರಥ ಪ್ರಯತ್ನವೆ ಆಗಿತ್ತು. 90 ವರ್ಷಗಳಿಂದ ತುಂಬಿದ್ದ ಹೂಳು ತೆಗೆಸಿ ಅದರ ಆಳ, ಅಗಲವನ್ನು ಹೆಚ್ಚಿಸಲಾಯಿತು. ಏರಿಯನ್ನು ಎತ್ತರಿಸಲಾಯಿತು. ಭದ್ರಾ ನಾಲೆಯ ಮೂಲಕ ಹರಿದು ಬರುವ ನೀರನ್ನು ಕುಂದುವಾಡ ಗ್ರಾಮದ ಬಳಿ ತಿರುಗಿಸಿ ಕೆರೆಗೆ ನೀರು ತುಂಬಿಸಲಾಯಿತು. ಈಗ ಅದು ವರ್ಷವಿಡೀ ನೀರು ಶೇಖರಿಸುವ ಜಲಪಾತ್ರೆಯಾಗಿದೆ. ಕೆರೆ ನಿರ್ಮಾಣವಾದಾಗಿನಿಂದ ನಗರದ ಸುಮಾರು ಶೇ. 60 ರಷ್ಟು ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ.
     …
     * ಜೀವ ವೈವಿಧ್ಯ ತಾಣ
     ಕೆರೆ ನಿರ್ಮಾಣವಾದ ನಂತರ ನೀರಿನ ಬಳಕೆಗಷ್ಟೇ ಸೀಮಿತವಾಗದೆ ಅದು ಜೀವ ವೈವಿಧ್ಯದ ತಾಣವಾಯಿತು. ಹಸಿರು ಮತ್ತು ನೀರಿನಿಂದ ಕೂಡಿದ ಸುಂದರ ಪರಿಸರಕ್ಕೆ ಬಾನಾಡಿಗಳು ಆಕರ್ಷಿತವಾದವು. ಅವುಗಳಿಗೆ ಇದು ಮೆಚ್ಚಿನ ತಾಣವಾಯಿತು.
     ಒಟ್ಟು 162 ಪಕ್ಷಿ ಪ್ರಭೇದಗಳು ಈ ಕೆರೆಯ ಪರಿಸರದಲ್ಲಿ ದಾಖಲಾಗಿವೆ. ಅದರಲ್ಲಿ ವಲಸೆ ಹಕ್ಕಿಗಳೂ ಸೇರಿವೆ. ಮಂಗೋಲಿಯಾ, ರಷ್ಯಾ, ಯೂರೋಪ್ ಕಡೆಯಿಂದ 40 ಪ್ರಭೇದದ ಹಕ್ಕಿಗಳು ಪ್ರತಿ ವರ್ಷ ಚಳಿಗಾಲದಲ್ಲಿ ಕುಂದುವಾಡ ಕೆರೆಗೆ ವಲಸೆ ಬರುತ್ತಿದ್ದವು. 32 ಚಿಟ್ಟೆ ಪ್ರಭೇದಗಳನ್ನೂ ಇಲ್ಲಿ ನೋಡಬಹುದಾಗಿತ್ತು. ಇವುಗಳ ಜತೆಗೆ ಸ್ಥಳೀಯ ಹಕ್ಕಿಗಳೂ ಇದ್ದವು.
     ಇಷ್ಟೆಲ್ಲ ಇದ್ದುದರಿಂದ ಇದು ದಾವಣಗೆರೆ ಜನರ ಫೇವರಿಟ್ ವಾಕಿಂಗ್ ಸ್ಪಾಟ್ ಆಗಿಬಿಟ್ಟಿತು. ಈಗಲೂ ನಿತ್ಯ 1 ಸಾವಿರದಿಂದ 1500 ಜನರು ಇಲ್ಲಿಗೆ ವಾಯುವಿಹಾರಕ್ಕೆ ಬರುತ್ತಾರೆ.
     …
     * ಅಭಿವೃದ್ಧಿ – ಆಪತ್ತು
     ಪ್ರಾಕೃತಿಕ ಸೌಂದರ್ಯವನ್ನು ಮೈಗೂಡಿಸಿಕೊಂಡಿದ್ದ ಈ ಕೆರೆಯನ್ನು 15 ಕೊಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನನು 2019 ರಲ್ಲಿ ಕೈಗೆತ್ತಿಕೊಂಡಾಗ ಪರಿಸರ ಪ್ರಿಯರಿಂದ ವಿರೋಧ ವ್ಯಕ್ತವಾಯಿತು. ನೈಸರ್ಗಿಕವಾಗಿ ಇರಬೇಕಾದ ಜಾಗವನ್ನು ಕಾಂಕ್ರಿಟ್ ಕಾಡಾಗಿ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದವು.
     ವಿರೋಧದ ನಡುವೆಯೆ ಕಾಮಗಾರಿಗಳು ಆರಂಭವಾದವು. ಅದರಲ್ಲೂ ಸೈಕಲ್ ಟ್ರಾೃಕ್ ಮಾಡಲು ಹೊರಟಾಗ ಪ್ರಬಲ ವಿರೋಧ ವ್ಯಕ್ತವಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರು. ಸೈಕಲ್ ಟ್ರಾೃಕ್‌ಗಾಗಿ 10 ಮೀಟರ್‌ಗಳಷ್ಟು ಕೆರೆಯ ಒಳಗಿನ ಪರಿಧಿ ಕುಗ್ಗಿತು. ಏರಿಯ ಒಂದು ಭಾಗದಲ್ಲಿ ಪ್ಲಾಸ್ಟಿಕ್ ಶೀಟ್ ಹಾಸಿರುವುದೂ ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
     ಅಭಿವೃದ್ಧಿಯ ನೆಪದಲ್ಲಿ 2019 ರಿಂದ 22ರ ವರೆಗೆ ಕುಂದುವಾಡ ಕೆರೆಗೆ ನೀರು ತುಂಬಿಸಲಿಲ್ಲ. ಪರಿಣಾಮವಾಗಿ ಬಹಳಷ್ಟು ಜಲಚರಗಳು ಸಾವಿಗೀಡಾದವು. ಹಕ್ಕಿಗಳು ವಲಸೆ ಬರುವುದನ್ನು ನಿಲ್ಲಿಸಿದವು.
     …
     
     * ಕೆರೆಯು ಮಹಾನಗರ ಪಾಲಿಕೆಯ ಒಡೆತನದಲ್ಲಿದೆ
     * 2400 ದಶಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯ
     * ಒಮ್ಮೆ ತುಂಬಿದರೆ ಪ್ರತಿ ದಿನ 20 ದಶಲಕ್ಷ ಲೀಟರ್‌ನಂತೆ 120 ದಿನಗಳ ಕಾಲ ನಗರದ 15 ವಾರ್ಡ್‌ಗಳಿಗೆ ನೀರು ಪೂರೈಸಬಹುದಾಗಿದೆ.
     …
     (ಕೋಟ್)
     ಶಾಲಾ ಕಾಲೇಜುಗಳಲ್ಲಿ ಪರಿಸರ ವಿಜ್ಞಾನವು ಅಧ್ಯಯನದ ವಿಷಯ ಆಗಿರುವುದರಿಂದ ಕುಂದುವಾಡ ಕೆರೆಯನ್ನು ಪರಿಸರ ಅಧ್ಯಯನ ಕೇಂದ್ರವಾಗಿ ಬಳಸಿಕೊಳ್ಳಬಹುದಾಗಿದೆ. ಪ್ರಕೃತಿದತ್ತವಾದ ಈ ಸ್ಥಳವನ್ನು ಅಧ್ಯಯನಕ್ಕೆ ಬಳಸಲು ಪೂರಕವಾದ ವಾತಾವರಣ ಅಲ್ಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಚಿಸುವ ಅಗತ್ಯವಿದೆ.
      ಡಾ. ಎಸ್. ಶಿಶುಪಾಲ, ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿ ವಿಭಾಗದ ಪ್ರಾಧ್ಯಾಪಕ
     (ಮಗ್‌ಶಾಟ್)
     …
     (ಕೋಟ್)
     ಕೆರೆಯ ಮೂಲ ಸೌಂದರ್ಯ ಹಾಳಾಗಿದೆ. ಸುತ್ತಲೂ ದುರ್ವಾಸನೆ ಬರುತ್ತಿದ್ದು ಶುದ್ಧ ಗಾಳಿ ಇಲ್ಲದಂತಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ವಾಯು ವಿಹಾರಕ್ಕೆ ಬರಬೇಕು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಕೆರೆ ಪರಿಸರದ ಗಾಳಿ ಸೇವಿಸಿದರೆ ರೋಗಗಳು ಬರುವ ಆತಂಕವಿದೆ. ಕೆರೆ ನೋಡಿಕೊಳ್ಳಲು ಸೂಕ್ತ ಸಿಬ್ಬಂದಿಯನ್ನು ನೇಮಿಸಬೇಕು. ಗಿಡಗಳನ್ನು ನಿರ್ವಹಣೆ ಮಾಡಬೇಕು. ಈ ವಿಚಾರವಾಗಿ ಸದ್ಯದಲ್ಲೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬಳಿ ನಿಯೋಗ ತೆರಳಲಿದ್ದೇವೆ.
      ಜೆ. ಈಶ್ವರ ಸಿಂಗ್ ಕವಿತಾಳ್, ಕುಂದುವಾಡ ಕೆರೆ ವಾಯುವಿಹಾರಿಗಳ ಬಳಗದ ಅಧ್ಯಕ್ಷ
     (ಮಗ್‌ಶಾಟ್)
     …
     (ಕೋಟ್)
     ದಾವಣಗೆರೆ ಸ್ಮಾರ್ಟ್‌ಸಿಟಿ ವತಿಯಿಂದ ಕೆರೆಯ ಎರಡು ಬದಿಗಳ ಆರಂಭದಲ್ಲಿ ಮಾತ್ರ 200 ಮೀ. ಉದ್ದದ ಮಳೆನೀರು ಚರಂಡಿ ನಿರ್ಮಿಸಲಾಗಿದೆ. ಮಧ್ಯದಲ್ಲಿ ಬಿಟ್ಟು ಹೋಗಿರುವ 1.6 ಕಿ.ಮೀ. ಉದ್ದದ ತಗ್ಗು ಪ್ರದೇಶದಲ್ಲಿ ರಿಟೇನಿಂಗ್ ವಾಲ್ ಮತ್ತು ಮಳೆನೀರು ಚರಂಡಿಯನ್ನು ನಿರ್ಮಿಸುವುದರಿಂದ ಕೆರೆಯ ಸುತ್ತಲೂ ನೀರು ಬಸಿಯುವುದನ್ನು, ಏರಿಯ ಒಂದು ಭಾಗದ ಮಣ್ಣಿನ ಕೊರೆತವನ್ನು ತಡೆಗಟ್ಟಬಹುದಾಗಿದೆ. ಈ ಕಾಮಗಾರಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
      ರೇಣುಕಾ, ಮಹಾನಗರ ಪಾಲಿಕೆ ಆಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts