More

    ಅನ್ನಭಾಗ್ಯ ಫಲಾನುಭವಿಗಳಿಗೆ ವಾರದಲ್ಲಿ ಹಣ ಬಿಡುಗಡೆ

    ದಾವಣಗೆರೆ : ಅನ್ನಭಾಗ್ಯ ಯೋಜನೆಯಡಿ ರಾಜ್ಯದ 1.28 ಕೋಟಿ ಕಾರ್ಡ್‌ದಾರರ ಖಾತೆಗಳಿಗೆ ಒಂದು ವಾರದಲ್ಲಿ ಆಗಸ್ಟ್ ತಿಂಗಳ ಹಣ ಬಿಡುಗಡೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
    ಸ್ವಕುಳಸಾಳಿ ಸಮಾಜದಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಭಗವಾನ್ ಶ್ರೀ ಜಿಹ್ವೇಶ್ವರ ಸ್ವಾಮಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.
    ಇದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದಾಗ ಅದರ ಬದಲು ಹಣ ನೀಡಲು ನಿರ್ಧರಿಸಲಾಯಿತು. ಈಗಾಗಲೇ ಜುಲೈ ತಿಂಗಳ ಹಣವನ್ನು ಕೊಡಲಾಗಿದೆ ಎಂದು ತಿಳಿಸಿದರು.
    ರಾಜ್ಯದಲ್ಲಿ ಬಿಪಿಎಲ್ ಮತ್ತು ಎಪಿಎಲ್ ಸೇರಿ ಒಟ್ಟು 4.5 ಕೋಟಿ ಜನರಿಗೆ ಒಂದಲ್ಲ ಒಂದು ರೀತಿಯ ಸಹಾಯವಾಗುತ್ತಿದೆ. ಇದು ಜಗತ್ತಿನಲ್ಲೇ ಅಪರೂಪವಾದ ಕಾರ್ಯಕ್ರಮ ಎಂದು ಬಣ್ಣಿಸಿದರು.
    ಯುವನಿಧಿ ಯೋಜನೆ ಡಿಸೆಂಬರ್ ತಿಂಗಳಲ್ಲಿ ಜಾರಿಗೆ ಬರಲಿದೆ. ಪದವೀಧರರಿಗೆ 3 ಸಾವಿರ ರೂ, ಡಿಪ್ಲೊಮಾ ಮಾಡಿದವರಿಗೆ 1500 ರೂ. ನೀಡಲು ಸರ್ಕಾರ ಬದ್ಧವಾಗಿದೆ. 2022-23ನೇ ಸಾಲಿನಲ್ಲಿ ಉತ್ತೀರ್ಣರಾದವರಿಗೆ 6 ತಿಂಗಳ ಸಮಯಾವಕಾಶವಿದ್ದು ಅವರಿಗೆ ಯಾವುದೇ ಉದ್ಯೋಗ ಸಿಗದಿದ್ದರೆ ಡಿಸೆಂಬರ್‌ನಿಂದ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
    ಯಾವುದೇ ಸಮಾಜಕ್ಕೆ ಒಗ್ಗಟ್ಟು ಮೂಲ ಮಂತ್ರವಾಗಿದೆ. ನೇಕಾರ ಸಮಾಜದ ಗುಂಪುಗಳಲ್ಲೂ ಏಕತೆ ಮೂಡಬೇಕು ಎಂಬ ಆಶಯ ವ್ಯಕ್ತಪಡಿಸಿದರು.
    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಸರ್ಕಾರ ನುಡಿದಂತೆ ನಡೆದಿದೆ. ಬುಧವಾರ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆಯಲಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 3.24 ಲಕ್ಷ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಯೋಜನೆಯ ಪ್ರಯೋಜನವನ್ನು ಜನರಿಗೆ ಅಚ್ಚುಕಟ್ಟಾಗಿ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
    ಈ ಹಿಂದೆ (2017) ನಾನು ಸಚಿವನಾಗಿದ್ದ ಅವಧಿಯಲ್ಲಿ 45-50 ಸಮಾಜಗಳಿಗೆ ರಿಯಾಯಿತಿ ದರದಲ್ಲಿ ನಿವೇಶನ ಮಂಜೂರು ಮಾಡಲಾಗಿತ್ತು. ಅನೇಕ ಕಟ್ಟಡಗಳು ನಿರ್ಮಾಣವಾಗಿವೆ. ಸ್ವಕುಳಸಾಳಿ ಸಮಾಜಕ್ಕೂ ಆಗ ನಿವೇಶನ ನೀಡಲಾಗಿತ್ತು. ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಹೆಚ್ಚು ಅನುದಾನ ಕೊಡಿಸಲಾಗುವುದು ಎಂದು ಹೇಳಿದರು.
    ‘ರೋಟಿ, ಕಪಡಾ ಔರ್ ಮಕಾನ್’ ಕಾಂಗ್ರೆಸ್‌ನ ಆದ್ಯತೆಯಾಗಿದೆ. ಬಡವರಿಗೆ ಈ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯ ಮಾತನಾಡಿ, ನೇಕಾರ ಸಮಾಜದಲ್ಲಿ 12 ಉಪ ಪಂಗಡಗಳಿವೆ. ಅವುಗಳ ನಡುವೆ ಒಗ್ಗಟ್ಟು ಕಾಯ್ದುಕೊಳ್ಳಲು ನೇಕಾರರ ಒಕ್ಕೂಟ ರಚಿಸಲಾಯಿತು. ಸಾಮಾಜಿಕ, ಧಾರ್ಮಿಕ, ವೃತ್ತಿಪರವಾಗಿ ಒಂದಾಗಬೇಕು ಎಂದು ಹೇಳಿದರು.
    ಮೈಸೂರು ಮಹಾರಾಜರ ಕಾಲದಲ್ಲಿ 1931 ರಲ್ಲಿ ನಡೆಸಿದ್ದ ಜಾತಿ ಜನಗಣತಿಯಲ್ಲಿ ನೇಕಾರ ಸಮಾಜದ ಜನಸಂಖ್ಯೆ 3 ಲಕ್ಷ ಇತ್ತು. ಈಗ ಸರ್ಕಾರದಿಂದ ಮಾಹಿತಿ ಕೇಳಿದರೆ 3.25 ಲಕ್ಷ ಎಂಬ ಉತ್ತರ ಬರುತ್ತದೆ. ಆದರೆ ವಾಸ್ತವವಾಗಿ 60-70 ಲಕ್ಷ ಜನಸಂಖ್ಯೆ ಇದೆ. ಅಧಿಕೃತ ಜಾತಿಗಣತಿಯಲ್ಲಿ ಅದು ಬೆಳಕಿಗೆ ಬರಬೇಕಿದೆ ಎಂದು ತಿಳಿಸಿದರು.
    ಸಮಾಜದಲ್ಲಿ ಶೇ. 90ರಷ್ಟು ಜನರು ನೇಕಾರಿಕೆ ವೃತ್ತಿಯನ್ನು ಮಾಡುತ್ತಿಲ್ಲ. ವಿವಿಧ ವ್ಯಾಪಾರ, ನೌಕರಿ ಮಾಡುತ್ತಿದ್ದಾರೆ. ಸಣ್ಣ ಉಪ ಜಾತಿಗಳು ಒಗ್ಗಟ್ಟು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.
    ದಾವಣಗೆರೆ ಜಡೇಸಿದ್ದ ಶಿವಯೋಗೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಚ್. ಆಂಜನೇಯ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಮೇಯರ್ ವಿನಾಯಕ ಪೈಲ್ವಾನ್, ದೂಡಾ ಮಾಜಿ ಅಧ್ಯಕ್ಷ ಮಾಲತೇಶರಾವ್ ಜಾಧವ್, ಅನಿತಾಬಾಯಿ ಇದ್ದರು.
    ಸಮಾಜದ ದಾವಣಗೆರೆ ಘಟಕದ ಅಧ್ಯಕ್ಷ ಮೋಹನ್ ಪಿ. ಗಾಯಕವಾಡ್, ಮುಖಂಡರಾದ ನೀಲಕಂಠಪ್ಪ ರೋಖಡೆ, ಧೀರೇಂದ್ರ ಏಕಬೋಟೆ, ಬಸವರಾಜ ಗುಬ್ಬಿ, ಎಲ್. ಸತ್ಯನಾರಾಯಣ, ಆರ್.ಎಲ್. ನಾಗಭೂಷಣ, ಡಿ.ಎನ್. ಜಗದೀಶ ಹಾಜರಿದ್ದರು. ವಾಸುದೇವ ಸಾಕ್ರೆ ಸ್ವಾಗತಿಸಿದರು. ಧರ್ಮರಾಜ್ ವಿ. ಏಕಬೋಟೆ ನಿರೂಪಿಸಿದರು. ಮಂಜುನಾಥ ಕಾಂಬಳೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts