More

    ಮಲೇರಿಯಾ ಮುಕ್ತವಾಗುವತ್ತ ದಾವಣಗೆರೆ

    ರಮೇಶ ಜಹಗೀರದಾರ್ ದಾವಣಗೆರೆ
     ದಾವಣಗೆರೆ ಮಲೇರಿಯಾ ಮುಕ್ತ ಜಿಲ್ಲೆಯಾಗುವತ್ತ ಹೆಜ್ಜೆ ಇಟ್ಟಿದೆ. ಸೊಳ್ಳೆಗಳಿಂದ ಹರಡುವ ಈ ಸಾಂಕ್ರಾಮಿಕ ರೋಗವು ಕಳೆದ 3 ವರ್ಷಗಳಿಂದ ಜಿಲ್ಲೆಯಲ್ಲಿ ಕಾಣಿಸಿಕೊಂಡಿಲ್ಲ. ಹೊರಗಿನಿಂದ ಬಂದ ಬೆರಳೆಣಿಕೆಯಷ್ಟು ಜನರಲ್ಲಿ ಲಕ್ಷಣಗಳು ಗೋಚರಿಸಿದರೂ ಸ್ಥಳೀಯರಿಗೆ ಬಾಧಿಸಿಲ್ಲ.
     ಮಲೇರಿಯಾ ನಿವಾರಣಾ ಚೌಕಟ್ಟು ಕಾರ್ಯಕ್ರಮದಡಿಯಲ್ಲಿ ರಾಜ್ಯ ತಂಡವು ಏಪ್ರಿಲ್ ತಿಂಗಳಲ್ಲಿ ಜಿಲ್ಲೆಗೆ ಭೇಟಿ ನೀಡಿತ್ತು. 5 ವರ್ಷಗಳ ವರದಿಗಳ ಪರಿಶೀಲನೆ, ಆಸ್ಪತ್ರೆಗಳಿಗೆ ಭೇಟಿಯ ನಂತರ ಜಿಲ್ಲೆಯಲ್ಲಿ ಕೈಗೊಂಡ ನಿಯಂತ್ರಣ ಚಟುವಟಿಕೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿತ್ತು.
     ಜೂನ್ ಅಥವಾ ಜುಲೈ ತಿಂಗಳಲ್ಲಿ ಕೇಂದ್ರದ ತಂಡವು ಜಿಲ್ಲೆಗೆ ಬರಲಿದ್ದು ಇಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಲಿದೆ. ಇದುವರೆಗೆ ಕೈಗೊಂಡಿರುವ ಕ್ರಮಗಳು, ಅದರಿಂದ ಆಗಿರುವ ಪರಿಣಾಮ, ಮಲೇರಿಯಾ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆಯೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ತಂಡದ ಸದಸ್ಯರು ಕಲೆಹಾಕಲಿದ್ದಾರೆ.
     ಅದಾದ ನಂತರ ‘ಮಲೇರಿಯಾ ಮುಕ್ತ ಜಿಲ್ಲೆ’ ಎನ್ನುವ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. 2025ರ ವೇಳೆಗೆ ಮಲೇರಿಯಾ ಮುಕ್ತ ರಾಜ್ಯ ಮಾಡುವ ಗುರಿಯಿದೆ. 2030ರ ವೇಳೆಗೆ ಇಡೀ ದೇಶದಲ್ಲಿ ಮಲೇರಿಯಾ ಇಲ್ಲದಂತೆ ಮಾಡುವ ಪ್ರಯತ್ನಗಳು ನಡೆದಿವೆ.
     ಈ ವರ್ಷ ಮಾರ್ಚ್ ವರೆಗೆ ಮಲೇರಿಯಾದ ಯಾವುದೇ ಪ್ರಕರಣ ವರದಿಯಾಗಿಲ್ಲ. ಕಳೆದ ವರ್ಷ (2022) ಒಂದೇ ಒಂದು ಕೇಸ್ ಕೂಡಾ ಕಂಡುಬಂದಿಲ್ಲ. 2021ರಲ್ಲಿ 3, 2020 ರಲ್ಲಿ 4 ಪ್ರಕರಣ ವರದಿಯಾಗಿದ್ದವು (ಹೊರಗಿನಿಂದ ಬಂದವರಲ್ಲಿ ಕಾಣಿಸಿಕೊಂಡಿದ್ದು).
     …
     (ಬಾಕ್ಸ್)
     ಡೆಂಘೆ ಪ್ರಕರಣಗಳು ಇಳಿಮುಖ
     ಜಿಲ್ಲೆಯಲ್ಲಿ ಡೆಂಘೆ ಪ್ರಕರಣಗಳು ಇಳಿಮುಖವಾಗಿವೆ. ಕಳೆದ ವರ್ಷ ಮೇ ಅಂತ್ಯಕ್ಕೆ 42 ಕೇಸ್ ಇದ್ದರೆ, ಈ ವರ್ಷ 33 ಮಾತ್ರ ದಾಖಲಾಗಿವೆ.
     ದಾವಣಗೆರೆ ತಾಲೂಕಿನಲ್ಲಿ 5, ಹರಿಹರ 4, ಚನ್ನಗಿರಿ 9, ಹೊನ್ನಾಳಿ 8, ಜಗಳೂರು ತಾಲೂಕಿನಲ್ಲಿ 7 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಬೇರೆ ಬೇರೆ ಹಳ್ಳಿಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಣಿಸಿಕೊಂಡಿದ್ದು, ಒಂದೇ ಊರಿನಲ್ಲಿ ಹೆಚ್ಚು ಕೇಸ್‌ಗಳು ಕಂಡುಬಂದಿಲ್ಲ.
     ಡೆಂೆ ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಇತ್ತೀಚೆಗಷ್ಟೆ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯನ್ನು ಕರೆದು ವಿವಿಧ ಇಲಾಖೆಗಳ ಸಹಕಾರವನ್ನು ಕೋರಲಾಗಿದೆ.
     ನಗರ ಪ್ರದೇಶಗಳಲ್ಲಿ ಗ್ರಾಮೀಣ ಆರೋಗ್ಯ ಸಿಬ್ಬಂದಿ 1ನೇ ಹಾಗೂ 3ನೇ ಶುಕ್ರವಾರ ಲಾರ್ವಾ ಸರ್ವೇ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಪ್ರತಿ ಮನೆಗೆ 15 ದಿನಗಳಿಗೊಮ್ಮೆ ಭೇಟಿ ನೀಡಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
     ಮುಂದಿನ ವಾರದಲ್ಲಿ ಪಿಡಿಒಗಳಿಗೆ ತಾಲೂಕು ಮಟ್ಟದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮನೆಗಳಿಂದ ಕಸ ಸಂಗ್ರಹಿಸುವ ವಾಹನಗಳಲ್ಲಿ ಡೆಂೆ ತಡೆಗಟ್ಟುವ ಕುರಿತ ಜಾಗೃತಿ ಗೀತೆಗಳನ್ನು, ಮುನ್ನೆಚ್ಚರಿಕೆಯ ಮಾಹಿತಿಯನ್ನು ನೀಡಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
     …
     (ಕೋಟ್)
     ಡೆಂಘೆ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಈ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರವೂ ಬಹಳ ಮುಖ್ಯವಾಗಿದೆ. ಮನೆ ಕಾಂಪೌಂಡ್ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಟೈರ್‌ಗಳು, ಗುಜರಿ ಸಾಮಾನು ಇಟ್ಟಿರುವ ಕಡೆಗಳಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆ ಇರುತ್ತದೆ. ಅಂಥ ಕಡೆಗಳಲ್ಲಿ ಎಚ್ಚರ ವಹಿಸಬೇಕು.
      ಡಾ.ಕೆ. ನಟರಾಜ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ
     ಚಿತ್ರ: ಡಾ.ಕೆ. ನಟರಾಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts