More

    ಸಿಡಿಪಿಒ, ಅಂಗನವಾಡಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

    ಎಚ್.ಡಿ.ಕೋಟೆ : ತಾಲೂಕಿನ ಅಂತರಸಂತೆಯ ಬಂಗ್ಲಿಹುಂಡಿ ಗ್ರಾಮದಲ್ಲಿ ಗುರುವಾರ ಅಂಗನವಾಡಿ ಕೇಂದ್ರದ ನೀರಿನ ಸಂಪಿಗೆ ಬಿದ್ದು ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಸಾವಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವೈಫಲ್ಯ, ಅಂಗನವಾಡಿ ಕಾರ್ಯಕರ್ತರ ನಿರ್ಲಕ್ಷೃವೇ ಕಾರಣ. ಹಾಗಾಗಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಮೃತ ಬಾಲಕಿಯ ಸಂಬಂಧಿಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದರು.


    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಹತ್ತಿರ ಶುಕ್ರವಾರ ಜಮಾಯಿಸಿದ ಬಂಗ್ಲಿಹುಂಡಿ ಗ್ರಾಮದ ಮೃತ ಬಾಲಕಿಯ ಸಂಬಂಧಿಕರು, ಮಗುವನ್ನು ಜೋಪಾನ ಮಾಡಿದ್ದರೆ ಇಂತಹ ಘಟನೆ ಆಗುತ್ತಿರಲಿಲ್ಲ. ನೀರಿನ ಸಂಪಿನ ಮೇಲ್ಭಾಗವನ್ನು ಸರಿಯಾಗಿ ಮುಚ್ಚಿದ್ದರೆ ದುರಂತ ತಪ್ಪುತ್ತಿತ್ತು. ಎಲ್ಲ ಹೊಣೆಗಾರಿಕೆ ತಾಲೂಕು ಅಧಿಕಾರಿಗಳ ಜವಾಬ್ದಾರಿ. ಅಧಿಕಾರಿ ಮೈಮರೆತ್ತಿದ್ದಾರೆ. ಹಾಗಾಗಿ ಮಗುವಿನ ಸಾವಿಗೆ ಕಾರಣರಾದ ಎಲ್ಲರ ಮೇಲೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.


    ಗುರುವಾರ ಪ್ರಕರಣ ನಡೆದು ಒಂದು ದಿನ ಕಳೆದಿದ್ದು ಶುಕ್ರವಾರ ತಡವಾಗಿ ಬಂದ ಸಿಡಿಪಿಒ ಆಶಾ ಅವರನ್ನು ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ತರಾಟೆಗೆ ತೆಗೆದುಕೊಂಡರು.


    ಸಿಡಿಪಿಒ ಆಶಾ ಮಾತನಾಡಿ, ಅಂಗನವಾಡಿ ಕೇಂದ್ರದ ನೀರಿನ ಸಂಪನ್ನು ಗ್ರಾಮದ ದೇವಸ್ಥಾನದ ಸಮಿತಿಯವರು ಬಳಕೆ ಮಾಡುತ್ತಿದ್ದರು. ಹಾಗಾಗಿ ಬೀಗ ಹಾಕಿರಲಿಲ್ಲ ಎಂದು ಸಂಜಾಯಿಸಿ ನೀಡಲು ಮುಂದಾದರು. ಇದಕ್ಕೆ ಬಾಲಕಿ ಸಂಬಂಧಿಕರು ವಾಗ್ದಾಳಿ ನಡೆಸಿದರು.


    ಸಿಡಿಪಿಒ ಆಶಾ, ಮೇಲ್ವಿಚಾರಕಿ ಚಿನ್ನಮ್ಮ, ಅಂಗನವಾಡಿ ಕಾರ್ಯಕರ್ತೆ ಗೀತಾ ಹಾಗೂ ಅಂಗನವಾಡಿ ಸಹಾಯಕಿ ನಾಗಮ್ಮ ಅವರ ಮೇಲೆ ಮೃತ ಬಾಲಕಿಯ ತಾಯಿ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts