ಚಿಕ್ಕಮಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕುವ ಮೂಲಕ ಮಾಜಿ ಸಚಿವ ಸಿ.ಟಿ.ರವಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಸಹಾಯಕ ಚುನಾವಣಾ ಅಧಿಕಾರಿ ದೂರು ದಾಖಲಿಸಿದ್ದಾರೆ.
ಮಾಜಿ ಸಚಿವ ಸಿ ಟಿ ರವಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಾಗರದ ಆಳವನ್ನು ಕಂಡುಹಿಡಿಯಬಹುದು. ಆದರೆ ರಾಹುಲ್ ಗಾಂಧಿಯವರ ಹಿಂದುಗಳ ಮೇಲಿನ ದ್ವೇಷವನ್ನು ಕಂಡುಹಿಡಿಯಲಾಗದು ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಗಮನಿಸಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಜಿಲ್ಲಾ ಚುನಾವಣಾ ಅಧಿಕಾರಿಗೆ ಈ ಬಗ್ಗೆ ದೂರು ದಾಖಲಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಠಾಣೆಗೆ ತೆರಳಿದ ಸಹಾಯಕ ಚುನಾವಣಾ ಅಧಿಕಾರಿ ಜಯಲಕ್ಷ್ಮಮ್ಮ ಅವರು ಸಿ.ಟಿ.ರವಿ ವಿರುದ್ಧ ದೂರು ದಾಖಲಿಸಿದ್ದಾರೆ.
ಹಿಂದೂ ಇಸ್ಮ್ನಲ್ಲಿ ಶಕ್ತಿ ಎನ್ನುವ ಪದವಿದೆ ಆ ಶಕ್ತಿ ವಿರುದ್ಧವೇ ನಮ್ಮ ಹೋರಾಟ ಎಂದು ರಾಹುಲ್ ಗಾಂಧಿಯವರು ನೀಡಿದ್ದ ಹೇಳಿಕೆಗೆ ಎಕ್ಸ್ ಖಾತೆಯಲ್ಲಿ ಸಿ.ಟಿ.ರವಿ ಅವರು ತಿರುಗೇಟು ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಚುನಾವಣಾ ನೀತಿ ಸಂಹಿತೆ ದೂರು ಸಹ ದಾಖಲಾಗಿದೆ.