More

    ಪ್ರಕರಣ ಹೆಚ್ಚಿದರೂ ನಿಭಾಯಿಸುತ್ತೇವೆ

    ದಾವಣಗೆರೆ: ಜಿಲ್ಲೆಯಲ್ಲಿ ಎಷ್ಟೇ ಕರೊನಾ ಪ್ರಕರಣಗಳು ಬಂದರೂ ಾವು ನಿಭಾಯಿಸುತ್ತೇವೆ. ಯಾವುದಕ್ಕೂ ಜಗ್ಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

    ಜಿಲ್ಲಾಡಳಿತ ಮತ್ತು ಚಿಗಟೇರಿ ಜಿಲ್ಲಾಸ್ಪತ್ರೆ ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ, ಕೋವಿಡ್-19 ರೋಗಿಗಳ ಆರೈಕೆಯಲ್ಲಿ ಭಾಗವಹಿಸಿದ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

    ಮೂಲಭೂತವಾಗಿ ಬಹಳ ವ್ಯವಸ್ಥಿತವಾಗಿ ನಾವು ಸಿದ್ಧರಿದ್ದೇವೆ. ಜಿಲ್ಲೆಯಲ್ಲಿ ವೈದ್ಯರ ತಂಡವಲ್ಲ, ಬದಲಾಗಿ ದಂಡಿದೆ ಎಂದರು.

    ಇದುವರೆಗೂ 13 ಸಾವಿರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಹಂತ ಹಂತವಾಗಿ ಫಲಿತಾಂಶ ಬರುತ್ತಿದ್ದು, ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆತಂಕ ಪಡಬೇಕಿಲ್ಲ ಎಂದು ತಿಳಿಸಿದರು.

    ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗರಾಜ್ ಮಾತನಾಡಿ, ಸರ್ಕಾರಿ ಹಾಗೂ ಅರೆ ಸರ್ಕಾರಿ ವೈದ್ಯರು ಸೇರಿಕೊಂಡು ಎಲ್ಲ ವಿಭಾಗದವರು ಭಾಗಿಯಾಗಿ ಸುಮಾರು 850 ಜನರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬರಲಾಗಿದ್ದು, ಈಗಾಗಲೇ 344 ಕರೊನಾ ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ವೈದ್ಯರು ಮತ್ತು ಅರೆಕಾಲಿಕ ವೈದ್ಯಕೀಯ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.

    ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ, ಹೆಚ್ಚುವರಿ ಎಸ್ಪಿ ರಾಜೀವ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಾ. ರವಿ, ಡಾ.ಸುರೇಂದ್ರ, ಡಾ.ಕಾಳಪ್ಪನವರ್, ಡಾ.ಸುಭಾಶ್‌ಚಂದ್ರ, ಎಸ್‌ಎಸ್‌ಐಎಂಎಸ್ ಪ್ರಾಂಶುಪಾಲ ಡಾ.ಪ್ರಸಾದ್ ಇದ್ದರು.

    ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ: ಶಿಷ್ಯವೇತನಕ್ಕೆ ಆಗ್ರಹಿಸಿ 13 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಪೈಕಿ ಕೋವಿಡ್ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರನ್ನೂ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತಮ್ಮ ಬೇಡಿಕೆಯ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವ ಉದ್ದೇಶದಿಂದ ಆ ವೈದ್ಯರು ಕಪ್ಪು ಪಟ್ಟಿ ಧರಿಸಿ ಸನ್ಮಾನ ಸ್ವೀಕರಿಸಿದರು. ಇತರ ವಿದ್ಯಾರ್ಥಿಗಳು ಜಯದೇವ ವೃತ್ತದಲ್ಲಿ ಪ್ರತಿಭಟನೆ ಮುಂದುವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts