More

    ಬೆಣ್ಣೆನಗರಿಯಲ್ಲಿ ಇಂಡೋ ಶ್ರೀಲಂಕಾ ಕಲಾ ಹಬ್ಬ

    ದಾವಣಗೆರೆ : ಬೆಣ್ಣೆನಗರಿಯ ಕಲಾಸಕ್ತರಿಗೆ ಶುಕ್ರವಾರ ಡಬಲ್ ಸಂಭ್ರಮ. ಸ್ಥಳೀಯ ಕಲಾವಿದರ ನೃತ್ಯ ನೋಡುವ ಜತೆಗೆ ನೆರೆಯ ದೇಶ ಶ್ರೀಲಂಕಾದ ಕಲಾ ಪ್ರತಿಭೆಗಳ ಪ್ರದರ್ಶನವನ್ನೂ ಕಣ್ತುಂಬಿಕೊಳ್ಳುವ ಅವಕಾಶ ಒದಗಿ ಬಂದಿತ್ತು.
     ದಾವಣಗೆರೆಯ ನಮನ ಅಕಾಡೆಮಿ ಹಾಗೂ ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಆ್ಯಂಡ್ ಲೀಶರ್ ಸಂಯುಕ್ತ ಆಶ್ರಯದಲ್ಲಿ ನಗರದ ಬಿಐಇಟಿ ಕಾಲೇಜು ಆವರಣದ ಎಸ್‌ಎಸ್‌ಎಂ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಿದ್ದ, ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಕಲೆಗಳನ್ನು ಅನಾವರಣ ಮಾಡಲಾಯಿತು.
     ಶ್ರೀಲಂಕಾದ ಮಾಲಿ ಡ್ಯಾನ್ಸ್ ಅಕಾಡೆಮಿಯ 21 ಕಲಾವಿದರು ತಮ್ಮ ದೇಶದ ಜಾನಪದ ನೃತ್ಯವನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ಜತೆಗೆ ಅಲ್ಲಿನ ನೃತ್ಯ ಕಲಾ ಪ್ರಕಾರಗಳನ್ನು ಇಲ್ಲಿನವರಿಗೆ ಪರಿಚಯಿಸಿದರು. ಭಾರತದ ಹಿಂದು ಹಾಡಿಗೂ ಹೆಜ್ಜೆ ಹಾಕಿದರು.
     ನಮನ ಅಕಾಡೆಮಿಯ ಮಕ್ಕಳ ಜತೆಗೆ ಹರಿಹರದ ಸಂಕರ್ಷಣ ಭರತನಾಟ್ಯ ಶಾಲೆ, ರಾಣೇಬೆನ್ನೂರಿನ ಶ್ರೀ ಶಾರದಾ ನೃತ್ಯಾಲಯ, ಮಾರ್ತಾಂಡ ನೃತ್ಯ ಮತ್ತು ಸಂಗೀತ ಕಲಾ ಸಂಸ್ತೆಯ ಕಲಾವಿದರು ಭರತನಾಟ್ಯ ಸೇರಿ ನಮ್ಮ ದೇಶದ ಕಲಾ ಪ್ರಕಾರಗಳ ವಿಶೇಷತೆಯನ್ನು ತೆರೆದಿಟ್ಟರು. ವಂದೇ ಮಾತರಂ ಗೀತೆಯ ಪ್ರಸ್ತುತಿ ಸೊಗಸಾಗಿತ್ತು.
     ಇದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ್ ಮಾತನಾಡಿ, ಭಾರತದ ಶಾಸ್ತ್ರೀಯ ನೃತ್ಯ, ಸಂಗೀತಗಳು ದೇವರಿಂದ ಬಂದಿವೆ. ಹಾಗಾಗಿ ಅವುಗಳನ್ನು ಮನರಂಜನೆ ಎಂದು ಭಾವಿಸದೆ ಆತ್ಮನಿವೇದನೆ, ಭಗವಂತನ ಸಾಕ್ಷಾತ್ಕಾರದ ಸಾಧನಗಳು ಎಂದು ಹೇಳಿದರು.
     ಇದೇ ಕಾರಣಕ್ಕೆ ನಮ್ಮ ದೇಶದ ಕಲಾ ಪ್ರಕಾರಗಳ ಬಗ್ಗೆ ಜಗತ್ತಿನಾದ್ಯಂತ ಪೂಜ್ಯ ಭಾವನೆಯಿದೆ. ಪಾಲಕರು ಮಕ್ಕಳಿಗೆ ಈ ಕಲಾ ಪ್ರಕಾರಗಳ ಶಿಕ್ಷಣ ಕೊಡಿಸುವ ಮೂಲಕ ಪರಂಪರೆಯನ್ನು ಉಳಿಸುವ ಅಗತ್ಯವಿದೆ ಎಂದರು.
     ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಆ್ಯಂಡ್ ಲೀಶರ್ ಅಧ್ಯಕ್ಷ ರೋಶನ್ ಸಿಲ್ವಾ, ಮಾಲಿ ಡ್ಯಾನ್ಸ್ ಅಕಾಡೆಮಿಯ ಗುರುಗಳಾದ ಮರಿನಾ ಪೆರೇರಾ, ಹಿಮಾಲಿ ಉಪೇಕ್ಷಾ ಜಯತಿಲಕ ಪಾಲ್ಗೊಂಡಿದ್ದರು. ನಮನ ಅಕಾಡೆಮಿಯ ಆರ್.ಎಚ್. ನಾಗಭೂಷಣ್ ಮಾತನಾಡಿದರು. ಸಂಸ್ಥೆಯ ಗುರು ಡಿ.ಕೆ. ಮಾಧವಿ ಪ್ರಾಸ್ತಾವಿಕ ನುಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಎನ್. ಗೋಪಾಲಕೃಷ್ಣ ಸ್ವಾಗತಿಸಿದರು. ಸಂಸ್ಥೆಯ ಪಿ.ಸಿ. ರಾಮನಾಥ್, ಅನಿಲ್ ಬಾರೆಂಗಳ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts