More

    ಸರ್ಕಾರ ಪಾಪರ್, ಜನರ ಮೇಲೆ ಸಾಲದ ಹೊರೆ

    ದಾವಣಗೆರೆ : ರಾಜ್ಯ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದ್ದು ಸಾಲದಲ್ಲಿ ಮುಳುಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆàರ್. ಅಶೋಕ್ ಹೇಳಿದರು.
     ನಗರದಲ್ಲಿ ಶುಕ್ರವಾರ, ಕೇಂದ್ರ ಸರ್ಕಾರದ 10 ವರ್ಷಗಳ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಇದು ಗತಿಗೆಟ್ಟ ಸರ್ಕಾರ ಎಂದು ಆರೋಪಿಸಿದರು.
     ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸರ್ಕಾರದಲ್ಲಿ ಹಣವಿಲ್ಲ. 1 ಲಕ್ಷ 5 ಕೋಟಿ ರೂ. ಸಾಲ ಮಾಡಿದ್ದಾರೆ. ರಾಜ್ಯದ ಒಬ್ಬೊಬ್ಬರ ಹೆಸರಿನಲ್ಲಿ 97 ಸಾವಿರ ರೂ. ಸಾಲವಿದೆ. ನೀವೆಲ್ಲ ಸಾಲಗಾರರಾಗಿದ್ದೀರಿ. ಸಿದ್ದರಾಮಯ್ಯ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಅವರು ಇನ್ನಷ್ಟು ಸಾಲ ಮಾಡಿ ಎಲ್ಲರನ್ನೂ ಹಳ್ಳಕ್ಕೆ ತಳ್ಳಿ ಹೋಗುತ್ತಾರೆ ಎಂದರು.
     ರಾಜ್ಯದಲ್ಲಿ ಬರಗಾಲವಿದೆ, ಕುಡಿಯಲು ನೀರಿಲ್ಲ, ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಕೊಳವೆಬಾವಿ ಕೊರೆಸಲೂ ಹಣವಿಲ್ಲ. ದನಕರುಗಳಿಗೆ ಮೇವಿಲ್ಲ. ಇವರ ಯೋಗ್ಯತೆಗೆ ಒಂದು ಗೋಶಾಲೆಯನ್ನೂ ಆರಂಭಿಸಿಲ್ಲ ಎಂದು ಹರಿಹಾಯ್ದರು.
     ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಉತ್ತಮ ಮಳೆಯಾಗಿ ಎಲ್ಲ ಜಲಾಶಯಗಳೂ ತುಂಬಿದ್ದವು. ಆದರೆ ಕಾಂಗ್ರೆಸ್ ಆಡಳಿತವಿದ್ದಾಗ ಪ್ರತಿ ವರ್ಷವೂ ಬರಗಾಲ ಬಂದಿದೆ, ಎಲ್ಲ ಜಲಾಶಯಗಳೂ ಖಾಲಿಯಾಗಿವೆ. ಇದು ಅವರ ಕಾಲ್ಗುಣ. ಅಧರ್ಮ ಮಾರ್ಗವನ್ನು ಅನುಸರಿಸಿದ್ದರಿಂದ ದೇವರು ನಿಮ್ಮ ಜತೆಗಿಲ್ಲ, ಅದಕ್ಕೇ ಬರಗಾಲ ಬಂದಿದೆ ಎಂದು ಹೇಳಿದರು.
     …
     (((ಬಾಕ್ಸ್)))
     ನರೇಂದ್ರ ಮೋದಿ ಗ್ಯಾರಂಟಿ
     ಸಿಎಂ ಸಿದ್ದರಾಮಯ್ಯ ಮಾತೆತ್ತಿದರೆ ಗ್ಯಾರಂಟಿ ಎನ್ನುತ್ತಾರೆ. ಈ ದೇಶದಲ್ಲಿ ಮೋದಿ ಗ್ಯಾರಂಟಿ ಮಾತ್ರ ಇರುವುದು. ಕಾಂಗ್ರೆಸ್‌ನವರದು ನಕಲಿ ಗ್ಯಾರಂಟಿ ಎಂದು ಹೇಳಿದರು.
     ಅನ್ನಭಾಗ್ಯ ಎಂದು ಹೇಳಿಕೊಳ್ಳುತ್ತಾರೆ, ಆದರೆ ಅದು ಮೋದಿ ಭಾಗ್ಯ. ಒಂದು ಕಾಳು ಅಕ್ಕಿಯೂ ಕರ್ನಾಟಕ ಸರ್ಕಾರದ್ದಲ್ಲ, ಕೇಂದ್ರದಿಂದ ಹಣ ಬರುತ್ತಿದೆ. ಫಲಾನುಭವಿಗಳಿಗೆ ನ್ಯಾಯವಾಗಿ ಅಕ್ಕಿ ಕೊಡುತ್ತಿಲ್ಲ ಎಂದು ತಿಳಿಸಿದರು.
     ನಾವು ಗ್ಯಾರಂಟಿ ವಿರೋಧಿಗಳಲ್ಲ, ಆದರೆ ಅವುಗಳನ್ನು ಹೇಗೆ ನೀಡುತ್ತಿದ್ದೀರಿ ಎಂಬುದು ಮುಖ್ಯ. ಮದ್ಯದ ಮೇಲೆ ತೆರಿಗೆ ಹಾಕಿದ್ದೀರಿ. ಹಾಲಿನ ದರ ಹೆಚ್ಚಿಸಲಾಗಿದೆ. ಗಂಡನ ಜೇಬಿಗೆ ಕತ್ತರಿ ಹಾಕಿ ಹೆಂಡತಿಗೆ ನೀಡತ್ತಿದ್ದೀರಿ ಎಂದು ಲೇವಡಿ ಮಾಡಿದರು.
     ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾದ 11 ಸಾವಿರ ಕೋಟಿ ರೂ.ಗಳನ್ನು ಕದ್ದಿದ್ದಾರೆ. ಆ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ, ಇದು ದಲಿತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.
     ನನ್ನ ಹೆಸರಲ್ಲೇ ರಾಮ ಇದ್ದಾನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೇವಲ ಹೆಸರಿನಲ್ಲಿದ್ದರೆ ಏನೂ ಪ್ರಯೋಜನವಿಲ್ಲ, ಹೃದಯದಲ್ಲಿ ರಾಮನಿರಬೇಕು ಎಂದು ಟಾಂಗ್ ಕೊಟ್ಟರು.
     …
     (((ಬಾಕ್ಸ್)))
     ಗೊಂದಲ ಪರಿಹಾರದ ವಿಶ್ವಾಸ
     ಚುನಾವಣೆಯ ಟಿಕೆಟ್ ಘೋಷಣೆಯಾದ ಮೇಲೆ ಗೊಂದಲಗಳು ಸಹಜ, ಒಂದು ವಾರದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
     ಎಲ್ಲಿಯೂ ಬಂಡಾಯ ಇಲ್ಲ. ಮಾಜಿ ಸಚಿವ ರೇಣುಕಾಚಾರ್ಯ ಜತೆ ಮಾಡುತ್ತೇನೆ. ಕಳೆದ ಚುನಾವಣೆಯ ಗೊಂದಲದಿಂದ ಹೀಗೆ ಆಗಿದೆ. ಎಸ್.ಎ. ರವೀಂದ್ರನಾಥ್ ಹಿರಿಯರಿದ್ದಾರೆ, ಅವರೊಂದಿಗೂ ಚರ್ಚಿಸುತ್ತೇನೆ ಎಂದು ತಿಳಿಸಿದರು.
     ಕೆ.ಎಸ್. ಈಶ್ವರಪ್ಪ ಡಿಸಿಎಂ ಆಗಿದ್ದವರು, ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ಮಗನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಮಾತನಾಡಿರಬಹುದು. ಕೇಂದ್ರದ ನಾಯಕರು ಈಗಾಗಲೇ ಈಶ್ವರಪ್ಪ ಅವರನ್ನು ಸಂಪರ್ಕಿಸಿದ್ದಾರೆ, ಎಲ್ಲಾ ಸರಿಯಾಗುತ್ತದೆ ಎಂದು ಹೇಳಿದರು.
     ಬೆಂಗಳೂರಿನ ಅರಮನೆ ಮೈದಾನದ ವಿವಾದ ಪ್ರಕರಣಕ್ಕೆ ಮರುಜೀವ ನೀಡಲು ಹೊರಟ ಸರ್ಕಾರದ ನಡೆಯನ್ನು ಖಂಡಿಸಿ, ಯಾರೂ ಕೂಡ ದ್ವೇಷದ ರಾಜಕಾರಣ ಮಾಡಬಾರದು, ಅಧಿಕಾರ ಶಾಶ್ವತವಲ್ಲ ಎಂದರು.
     ಕಾಂಗ್ರೆಸ್‌ನ ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಿಲ್ಲ, ಆದ್ದರಿಂದ ಬಿಜೆಪಿಯ ಸಂಸದರ ಹಿಂದೆ ಬಿದ್ದಿದ್ದಾರೆ. ಕಾಂಗ್ರೆಸ್‌ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts