More

    ದಲಿತರಿಗೆ ಮೀಸಲಾತಿ ನ್ಯಾಯ ದೊರಕಿಸಲು ಆಗ್ರಹ

    ತುಮಕೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಹಾಗೂ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿ ಅವರ ಮೂಲ ಹಕ್ಕಲ್ಲವೆಂಬ ಸುಪ್ರೀಂಕೋರ್ಟ್ ತೀರ್ಪಿನಿಂದ ದಲಿತರಿಗೆ ಅನ್ಯಾಯ ಆಗುತ್ತಿದ್ದು, ತತ್‌ಕ್ಷಣವೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮೀಸಲಾತಿ ವಿರೋಧಿಗಳಾಗಿರುವ ಬಿಜೆಪಿಯವರು ಸುಪ್ರಿಂಕೋರ್ಟಿನಲ್ಲಿ ಮಂಡಿಸಿರುವ ವಾದವೇ ಈ ರೀತಿ ವ್ಯತಿರಿಕ್ತ ತೀರ್ಪು ಬರಲು ಕಾರಣವಾಗಿದೆ. ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ದಲಿತರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದರು.

    ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಆರ್.ರಾಮಕೃಷ್ಣ, ತಲೆ ತಲಾಂತರದಿಂದ ಶೋಷಣೆಗೆ ಒಳಗಾದ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ, ರಾಜಕೀಯ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ್ದರು. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಮೀಸಲಾತಿ ತಡೆಹಿಡಿಯುವ ಮಾತುಗಳು ಕೇಳಿಬರುತ್ತಿವೆ. ಉತ್ತರಾಖಂಡದ ಕೇಸ್ ಸಂಬಂಧ ಹೊರಬಿದ್ದಿರುವ ಸುಪ್ರೀಂ ತೀರ್ಪು ಇದಕ್ಕೆ ಪುಷ್ಟಿ ನೀಡುವಂತಿದೆ ಎಂದರು.

    ದಲಿತರನ್ನು ಮೀಸಲಾತಿಯಿಂದ ವಂಚಿಸುವ ಹುನ್ನಾರವಾಗಿದ್ದು ಕೇಂದ್ರ ಸರ್ಕಾರ ದೇಶದ ದಲಿತರ ಕ್ಷಮೆಯಾಚಿಸಬೇಕು. ಸುಪ್ರಿಂಕೋರ್ಟ್ ತೀರ್ಪಿನ ಮರುಪರಿಶೀಲನೆಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

    ಕೇಂದ್ರ ಸರ್ಕಾರವು ಈ ತೀರ್ಪಿನ ಪುನರ್ ಪರಿಶೀಲನೆಗೆ ಮೇಲ್ಮನವಿ ಸಲ್ಲಿಸಬೇಕು. ದಲಿತರ ಪರವಾಗಿ ನಿಂತು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಮೇಯರ್ ಫರಿದಾಬೇಗಂ ಹೇಳಿದರು.

    ಪ್ರತಿಭಟನೆಯಲ್ಲಿ ಮಾಜಿ ಶಾಸಕ ಆರ್.ನಾರಾಯಣ್, ಜಿಪಂ ಮಾಜಿ ಅಧ್ಯಕ್ಷ ಜಾಲಿ ಕೃಷ್ಣಮೂರ್ತಿ, ಟೂಡಾ ಮಾಜಿ ಅಧ್ಯಕ್ಷ ಎಸ್.ಶಿವಮೂರ್ತಿ, ಮುಖಂಡರಾದ ಎಚ್.ಸಿ.ಹನುಮಂತಯ್ಯ,ರೆಡ್ಡಿ ಚಿನ್ನಯಲ್ಲಪ್ಪ, ವೈ.ಎನ್.ನಾಗರಾಜು, ಕಾಂಗ್ರೆಸ್ ಮಹಿಳಾ ಘಟದ ಜಿಲ್ಲಾಧ್ಯಕ್ಷೆ ಗೀತಾ, ಮಾಜಿ ಉಪಮೇಯರ್ ಬಿ.ಎಸ್.ರೂಪಶ್ರೀ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೋರಾಜು, ಮೆಹಬೂಬ್ ಪಾಷ, ಜಿ.ಡಿ.ವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts