ಕೇರಳದ ನ್ಯೂಸ್​ ಚಾನೆಲ್‌ ಬ್ಯಾಂಕ್‌ ಅಕೌಂಟ್‌ ಸ್ಥಗಿತ..! ಇದರಲ್ಲಿದೆಯೇ ಡಿ.ಕೆ.ಶಿ ಹೂಡಿಕೆ?

dks
Published on

#D.K.Shivakumar #investment #news channel #bank account

ತಿರುವನಂತಪುರಂ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೂಡಿಕೆ ಮಾಡಿದ್ದಾರೆ ಎನ್ನಲಾದ ಕೇರಳದ ನ್ಯೂಸ್ ಚಾನಲ್‌ ನ ಬ್ಯಾಂಕ್ ಖಾತೆಗಳನ್ನು ತೆರಿಗೆ ಇಲಾಖೆ(ಐಟಿ) ಸ್ಥಗಿತಗೊಳಿಸಿದೆ.

ಸುಮಾರು 201 ಕೋಟಿ ರೂ. ಆದಾಯ ತೆರಿಗೆ ಬಾಕಿ ಪಾವತಿಸಬೇಕೆಂದು ಕಾಂಗ್ರೆಸ್ ನ 9 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 'ಜೈ ಹಿಂದ್ ಟೀವಿ' ಚಾನೆಲ್‌ನ ಮಾತೃ ಸಂಸ್ಥೆಯಾದ 'ಭಾರತ್ ಬ್ರಾಡ್ ಕಾಸ್ಟಿಂಗ್ ಕಂಪನಿ'ಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸುವಂತೆ ಕೇಂದ್ರ ಜಿಎಸ್‌ಟಿ ಮಂಡಳಿ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಭಾರತ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಈ ಚಾನೆಲ್‌ನಲ್ಲಿ ಡಿ.ಕೆ. ಶಿವಕುಮಾ‌ರ್ ಅವರ ಹೂಡಿಕೆಗೆ ಸಂಬಂಧಿಸಿ ದಂತೆ ಮಾಹಿತಿ ಕಲೆ ಹಾಕಲು ಇತ್ತೀಚೆಗೆ ಸಿಬಿಐ ನೋಟಿಸ್‌ ನೀಡಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸಂಕಷ್ಟಕ್ಕೆ ಸಿಲುಕಿದೆ ಚಾನೆಲ್:

ಈ ಕುರಿತು ಪ್ರತಿಕ್ರಿಯಿಸಿರುವ ಚಾನಲ್‌ನ ಮುಖ್ಯಸ್ಥ, ಕಾಂಗ್ರೆಸ್ ನಾಯಕ ಶಿಜು, ತೆರಿಗೆ ಇಲಾಖೆ ತೆಗೆದುಕೊಂಡಿರುವ ನಿರ್ಣಯ ಅನಿರೀಕ್ಷಿತವಾಗಿದೆ. ಅಲ್ಲದೇ ಈ ಕುರಿತಾದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವಾಗ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಚಾನೆಲ್ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೇ ಕಳೆದ ವರ್ಷ ಡಿ.22ರಂದು ಸಿಬಿಐ ನೀಡಿದ್ದ ನೋಟಿಸ್‌ಗೆ ನಾವು ಉತ್ತರಿಸಿದ್ದೇವೆ. ಆದರೂ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net