More

    ಬೆಳೆ ವಿಮೆ ಕಂತಿನ ಸೇವಾ ಶುಲ್ಕ ಭರಣ

    ಹಾನಗಲ್ಲ: ಬೆಳೆ ವಿಮೆ ಕಂತು ತುಂಬಿಸಿಕೊಳ್ಳುವ ಸೇವಾ ಕೇಂದ್ರಗಳ ಶುಲ್ಕವನ್ನು ರೈತರ ಪರವಾಗಿ ಸಿ.ಎಂ. ಉದಾಸಿ ಅವರ ಸ್ಮರಣಾರ್ಥ ಉದಾಸಿ ಅಭಿಮಾನಿ ಬಳಗದಿಂದ ಪಾವತಿಸಲು ತೀರ್ವನಿಸಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಕೆ, ಹಸಿಮೆಣಸು ಹಾಗೂ ಶುಂಠಿ ಬೆಳೆಗೆ ವಿಮೆ ಕಂತು ಕಟ್ಟಲು ಜೂ. 30 ಕೊನೆಯ ದಿನವಾಗಿದೆ. ರೈತರು ವಿಮೆ ಕಂತು ತುಂಬಬೇಕು. ಬೆಳೆ ವಿಮೆ ಕುರಿತು ಸಿ.ಎಂ. ಉದಾಸಿ ಅವರು ಅಪಾರ ಕಾಳಜಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ಸೇವಾ ಶುಲ್ಕವನ್ನು ಭರಿಸಲು ತೀರ್ವನಿಸಲಾಗಿದೆ ಎಂದರು.

    ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿ ಅನುಭವಿಸುವ ಹಿನ್ನೆಲೆಯಲ್ಲಿ ವಿಮೆ ಯೋಜನೆ ಜಾರಿಗೊಳಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ತಾಲೂಕಿನ ಅಡಕೆ, ಶುಂಠಿ, ಹಸಿಮೆಣಸು ಮತ್ತು ಮಾವು ಬೆಳೆಗಳಿಗೆ ವಿಮೆ ತುಂಬಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ಪರಿಹಾರ ಪಡೆದುಕೊಂಡಿದ್ದಾರೆ ಎಂದರು.

    2020-21ನೇ ಸಾಲಿನ ಅಡಕೆ, ಶುಂಠಿ, ಹಸಿಮೆಣಸಿನಕಾಯಿ ಹವಾಮಾನ ಆಧಾರಿತ ಬೆಳೆ ವಿಮೆ ಹಣ ಬಿಡುಗಡೆಯಾಗುವುದು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ. ಶೀಘ್ರದಲ್ಲಿ ವಿಮೆ ಕಂಪನಿ ಗ್ರಾಮ ಪಂಚಾಯಿತಿವಾರು ಹವಾಮಾನ ಆಧಾರಿತ ಲೆಕ್ಕಾಚಾರದ ಮೇಲೆ ರೈತರ ಖಾತೆಗಳಿಗೆ ಹಣ ಬಿಡುಗಡೆಗೊಳಿಸಲಿದೆ ಎಂದರು.

    ಪ್ರತಿವರ್ಷದಂತೆ 2021-22ನೇ ಸಾಲಿನ ಬೆಳೆ ವಿಮೆ ಕಂತು ತುಂಬಲು ಜೂ. 30 ಕೊನೆಯ ದಿನವಾಗಿದೆ. ಅಡಕೆ ಬೆಳೆಗೆ ಪ್ರತಿ ಹೆಕ್ಟೇರ್​ಗೆ 6400 ರೂಪಾಯಿ, ಶುಂಠಿ ಬೆಳೆಗೆ 6500 ರೂಪಾಯಿ, ಹಸಿಮೆಣಸಿನಕಾಯಿ ಬೆಳೆಗೆ 3550 ರೂಪಾಯಿಗಳಾಗಿರುತ್ತದೆ. ರೈತರು ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಸಂಘಗಳು, ಸೇವಾ ಕೇಂದ್ರಗಳಲ್ಲಿ ಕಂತು ಪಾವತಿಸಬಹುದಾಗಿದೆ. ಸೇವಾ ಕೇಂದ್ರಗಳ ಸೇವಾ ಶುಲ್ಕ ತಾಲೂಕಿನ ರೈತರ ಬದಲು ಉದಾಸಿ ಅಭಿಮಾನಿಗಳ ಬಳಗ ಪಾವತಿಸುತ್ತದೆ. ಕಂತು ತುಂಬಿದ ರೈತರು ಕಡ್ಡಾಯವಾಗಿ ಗ್ರಾಮಲೆಕ್ಕಾಧಿಕಾರಿಗಳ ಸಂಪರ್ಕದಲ್ಲಿದ್ದು, ಸಕಾಲದಲ್ಲಿ ಮುಂಗಾರು-ಹಿಂಗಾರು ಮತ್ತು ಬೇಸಿಗೆ ಬೆಳೆಗಳನ್ನು ಬೆಳೆ ಸಮೀಕ್ಷೆ ಮಾಡಬೇಕು ಎಮದರು.

    ಕಂತು ತುಂಬಲು ಕಡಿಮೆ ದಿನಗಳ ಅವಕಾಶವಿರುವುದರಿಂದ ಬ್ಯಾಂಕ್ ಸಿಬ್ಬಂದಿ ಸಹಕರಿಸಬೇಕು. ವಿನಾಕಾರಣ ರೈತರನ್ನು ಅಲೆದಾಡಿಸದಂತೆ ಎಲ್ಲ ಬ್ಯಾಂಕ್​ಗಳಿಗೆ ಸೂಚಿಸುವಂತೆ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ ಎಂದು ಶಿವಕುಮಾರ ಉದಾಸಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts