More

    ವೀಸಾ ವೆರಿಫಿಕೇಶನ್ ಹೆಸರಲ್ಲಿ ದರೋಡೆ; ಬೆನ್ನು ತೋರಿಸಿದ್ರೆ ಇವರೂ ಕೈಚಳಕ ತೋರಿಸುತ್ತಾರೆ!  

    ಬೆಂಗಳೂರು: ನಗರದಲ್ಲಿ ವೀಸಾ ಹೆಸರಿನಲ್ಲಿ ಮನೆ ದರೋಡೆ ಮಾಡಿರುವ ಘಟನೆಯೊಂದು ನಡೆದಿದೆ. ಈ ಪ್ರಕರಣದಲ್ಲಿ ಸ್ಚಲ್ಪ ಯಾಮಾರಿದ್ರೂ ವೃದ್ಧನ ಹೆಣ ಬೀಳುತಿತ್ತು. ಈ ಕಿಲಾಡಿಗಳು ಏಕಾಏಕಿ ಮನೆಗೆ ನುಗ್ಗಿ ಕೈಕಾಲು ಕಟ್ಟಿ ಹಾಕಿ ಮನೆ ದೋಚಿದ್ದು ಅವರನ್ನು ಬಂಧಿಸಲಾಗಿದೆ.

    ಪೊಲೀಸರು ಪಿಜಿ ಮಾಲೀಕ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸ್ವರೂಪ್, ಆತ್ಮಾನಂದ ಜಂಬಗಿ ಹಾಗೂ ಶಾಲಿಂ ಕುಮಾರ್ ಎಂದು ಗುರುತಿಸಲಾಗಿದೆ.

    ಏನಿದು ಪ್ರಕರಣ?

    ಕುಮಾರಸ್ವಾಮಿ ಲೇಔಟ್ ನ ಟೀಚರ್ಸ್ ಕಾಲೋನಿಯಲ್ಲಿನ ಮನೆಯೊಂದನ್ನು ಈ ಮೂವರು ಖದೀಮರು ದೋಚಿದ್ದರು.

    60 ವರ್ಷದ ವೃದ್ದ ಮುರಳಿಧರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರ ಪತ್ನಿ ಕೆಲಸಕ್ಕೆ ಹೋಗಿದ್ದು ಅವರೂ ಈ ವೇಳೆ ಕೆಲಸಕ್ಕೆ ತೆರಳಲು ಸಿದ್ಧರಾಗಿದ್ದರು. ಈ ವೇಳೆ ಕಾಲಿಂಗ್ ಬೆಲ್ ಸದ್ದು ಕೇಳಿದೆ. ಯಾರಪ್ಪಾ ಅದು ಈ ವೇಳೆಯಲ್ಲಿ ಎಂದು ಬಾಗಿಲು ತೆರೆದರೆ ಈ ಮೂವರು ‘ನಾವು ವೀಸಾ ವೆರಿಫಿಕೇಷನ್ ಗೆ ಬಂದಿದ್ದೇವೆ. ನಿಮ್ಮ ಆಧಾರ್ ಕಾರ್ಡ್ ಕೊಡಿ’ ಎಂದು ಕೇಳಿದ್ದಾರೆ.

    ಈ ವೇಳೆ ಆ ವೃದ್ಧ ಮಾಡಿದ್ದು ಒಂದೇ ತಪ್ಪು… ಆಧಾರ್ ಕಾರ್ಡ್ ತರಲು ಒಳ ಹೋದದ್ದು! ಅವರು ಒಳಕ್ಕೆ ಹೋಗುತ್ತಿದ್ದಂತೆ ಹಿಂದೆಯಿಂದ ಈ ಮೂವರು ಅವರನ್ನು ತಳ್ಳಿದ್ದಾರೆ. ಕೆಳಕ್ಕೆ ಬೀಳುತ್ತಿದ್ದಂತೆಯೇ ಬಾಯಿ ಮುಚ್ಚಿ ಬೀರುವಿನ ಕೀ ಕೇಳಿದ್ದಾರೆ. ನಂತರ ಮುರಳೀಧರ್ ರ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿದ್ದರು.

    ಇದೇ ಅವಕಾಶ ಎಂದುಕೊಂಡು ಮನೆಯಲ್ಲಿದ್ದ 4 ಲಕ್ಷದ 20 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗು 1 ಲಕ್ಷ ನಗದನ್ನು ಆರೋಪಿಗಳು ದೋಚಿದ್ದಾರೆ. ನಂತರ ಪೊಲೀಸರಿಗೆ ಬೇಗನೆ ಸುದ್ದಿ ತಿಳಿಯಬಾರದು ಎಂದು ಮುರಳಿಧರ್ ಅವರ ಮೊಬೈಲ್ ಕಿತ್ತು ಪರಾರಿಯಾಗಿದ್ದರು.

    ಕಳ್ಳತನ ಮಾಡಿದ್ಯಾಕೆ?

    ಆರೋಪಿಗಳಲ್ಲಿ ಒಬ್ಬರಾದ ಸ್ವರೂಪ್ ಪಿಜಿಯೊಂದರ ಮಾಲೀಕರು. ಆದರೆ ಮೈತುಂಬ ಸಾಲ ಮಾಡಿಕೊಂಡಿದ್ದ ಕಾರಣ ತುರ್ತು ಹಣದ ಅವಶ್ಯಕತೆ ಇತ್ತು. ಹೀಗಾಗಿ ತನ್ನ ಪಿಜಿಯಲ್ಲೇ ನೆಲಸಿದ್ದ ಅತ್ಮಾನಂದ ಜಂಬಗಿ ಹಾಗು ಶಾಲಿಂ ಕುಮಾರ್ ಎನ್ನುವವರ ಜತೆ ಸೇರಿ ಕೃತ್ಯ ಮಾಡಿದ್ದ.

    ಈ ಹಿಂದೆ ಆರೋಪಿಗಳು ಅನೀಲ್ ಶೆಟ್ಟಿ ಎಂಬಾತನನ್ನೂ ಸುಲಿಗೆ ಮಾಡಲು ಮುಂದಾಗಿದ್ದರು. ಈ ಕಳ್ಳತನದ ಪ್ರಕರಣ ಏಪ್ರಿಲ್ 10 ರಂದು ನಡೆದಿದ್ದು ಕುಮಾರಸ್ವಾಮಿ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದು ಎರಡು ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts