More

    ಭಾರತ ಕ್ರಿಕೆಟ್ ವೇಳಾಪಟ್ಟಿಗೆ ಕೋವಿಡ್-19ರ ಕರಿಛಾಯೆ 

    ಮುಂಬೈ: ಮಹಾಮಾರಿ ಕರೊನಾ ವೈರಸ್ ಭೀತಿಯಿಂದಾಗಿ ಕಳೆದ ನಾಲ್ಕು ತಿಂಗಳಿಂದ ಜಾಗತಿಕ ಕ್ರೀಡಾ ಚಟುವಟಿಕೆ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಪ್ರತಿಯೊಂದು ಕ್ರೀಡೆಗಳು ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿವೆ. ಇದಕ್ಕೆ ಭಾರತದ ಕ್ರಿಕೆಟ್ ವೇಳಾಪಟ್ಟಿ ಕೂಡ ಹೊರತಾಗಿಲ್ಲ. ಮಾರ್ಚ್ ತಿಂಗಳು ಭಾರತಕ್ಕೆ ಆಗಮಿಸಿದ್ದ ದಕ್ಷಿಣ ಆಫ್ರಿಕಾ ತಂಡ , ಪ್ರವಾಸ ಮೊಟಕುಗೊಳಿಸಿ ತವರಿಗೆ ವಾಪಸಾಗಿತ್ತು. ಬಳಿಕ ನಡೆಯಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ. ಕರೊನಾ ಹಾವಳಿಯಿಂದಾಗಿ ಭಾರತದಲ್ಲಿ ಸದ್ಯ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಳ್ಳುವುದು ತಡವಾಗಬಹುದು. ಜೂನ್-ಜುಲೈ ತಿಂಗಳ ಶ್ರೀಲಂಕಾ ಪ್ರವಾಸ ಮತ್ತು ಆಗಸ್ಟ್‌ನ ಜಿಂಬಾಬ್ವೆ ಪ್ರವಾಸ ಈಗಾಗಲೆ ರದ್ದುಗೊಂಡಿದೆ. ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಯೂ ನಡೆಯುವ ಸಾಧ್ಯತೆ ಕಡಿಮೆಯಾಗಿದೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್ ಸಿದ್ಧತೆ ಜತೆಗೆ ವಕೀಲ ವೃತ್ತಿಯತ್ತ ಶೂಟರ್ ಅಭಿಷೇಕ್ ವರ್ಮ ಚಿತ್ತ

    ತರಬೇತಿ ಶಿಬಿರ ಆಯೋಜನೆ ಕಷ್ಟ
    ಕ್ರಿಕೆಟ್ ಪುನರಾರಂಭಕ್ಕೂ ಮುನ್ನ ಕೇಂದ್ರ ಗುತ್ತಿಗೆ ಒಪ್ಪಂದ ಹೊಂದಿರುವ ಆಟಗಾರರಿಗೆ ರಾಷ್ಟ್ರೀಯ ತರಬೇತಿ ಶಿಬಿರ ಆಯೋಜಸಲು ಸಾಧ್ಯವಾಗುತ್ತಿಲ್ಲ. ದೇಶದ ಬಹುತೇಕ ಭಾಗಗಳಲ್ಲಿ ಲಾಕ್‌ಡೌನ್ ಮುಂದುವರಿದಿದೆ. ಪೂರ್ವನಿಗದಿಯಂತೆ ಜುಲೈ ಮಧ್ಯ ಭಾಗದಿಂದ ತರಬೇತಿ ಶಿಬಿರ ಆರಂಭಗೊಳ್ಳಬೇಕಿತ್ತು. ಜತೆಗೆ ಸ್ಥಳೀಯ ಹಾಗೂ ಕೇಂದ್ರ ಸರ್ಕಾರ ಅನುಮತಿ ನೀಡಿದರಷ್ಟೇ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಳ್ಳಲು ಸಾಧ್ಯ. ರಾಷ್ಟ್ರೀಯ ಶಿಬಿರ ಸಾಮಾನ್ಯವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ನಡೆಯುತ್ತದೆ. ಬೆಂಗಳೂರಿನಲ್ಲೂ ಮಹಾಮಾರಿ ಅಧಿಕವಾಗಿರುವುದರಿಂದ ಪ್ಲಾನ್ ಬಿ ಸಿದ್ಧಪಡಿಸಿಕೊಂಡಿರುವ ಬಿಸಿಸಿಐ, ಹಿಮಾಚಲ ಪ್ರದೇಶದ ಧರ್ಮಶಾಲಾ ಆಯ್ದುಕೊಂಡಿದೆ.

    ಇದನ್ನೂ ಓದಿ: ಸಂಬಳ 60 ಸಾವಿರ, ಕಾರಿನ ವಿಮೆ 80 ಸಾವಿರ! ಬಿಎಂಡಬ್ಲ್ಯು ಮೆಂಟೆನನ್ಸ್​ಗೆ ದ್ಯುತಿ ಪರದಾಟ

    ಐಪಿಎಲ್ ನಡೆದರೆ ಶಿಬಿರವಿಲ್ಲ
    ಒಂದು ವೇಳೆ ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐಗೆ ಸಾಧ್ಯವಾದರೆ ರಾಷ್ಟ್ರೀಯ ತರಬೇತಿ ಶಿಬಿರ ಆಯೋಜಿಸುವ ತರಾತುರಿಯೂ ಬಿಸಿಸಿಐ ಮುಂದಿಲ್ಲ. ಜತೆಗೆ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ವೇಳಾಪಟ್ಟಿಯಲ್ಲೂ ಕೊಂಚ ಬದಲಾವಣೆಯಾಗಬಹುದು. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಪ್ರಕಟಿಸಿರುವಂತೆ ಡಿಸೆಂಬರ್ 3ರಂದು ಮೊದಲ ಟೆಸ್ಟ್ ಆರಂಭಗೊಳ್ಳಲಿದೆ. ಜತೆಗೆ 3 ಟಿ20 ಹಾಗೂ ಏಕದಿನ ಪಂದ್ಯಗಳು ನಡೆಯಲಿವೆ. ಟಿ20 ಅಥವಾ ಏಕದಿನ ಎರಡು ಸರಣಿಗಳಲ್ಲಿ ಒಂದು ರದ್ದುಗೊಳ್ಳುವ ಸಾಧ್ಯತೆಗಳಿವೆ. ಟಿ20 ವಿಶ್ವಕಪ್ ದೃಷ್ಟಿಯಿಂದ ಟಿ20 ಸರಣಿ ನಡೆಯಬಹುದು. ಟೆಸ್ಟ್ ಸರಣಿಗೂ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲು ಸಿಎ ನಿರ್ಧರಿಸಿದೆ.
    ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿದ ತಕ್ಷಣವೇ ಭಾರತ ತವರಿನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್ ವಿರುದ್ಧ 5ಕ್ಕೆ ಬದಲಾಗಿ 3 ಟೆಸ್ಟ್ ಮಾತ್ರ ನಡೆಯಬಹುದು ಮತ್ತು ತಲಾ 5 ಏಕದಿನ, 5 ಟಿ20 ವಿಶ್ವಕಪ್ ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ. ಇದರಿಂದ, ಕಳೆದ ಮಾರ್ಚ್‌ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸಿಕೊಳ್ಳುವ ಆಲೋಚನೆ ಇದಾಗಿದೆ. ಹೀಗೆ ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ಮಾರ್ಚ್ ಮಧ್ಯಭಾಗದಲ್ಲಿಯೇ ಐಪಿಎಲ್ ಆಯೋಜನೆಗೆ ಬಿಸಿಸಿಐ ಮುಂದಾಗಲಿದೆ. ಈ ಎಲ್ಲ ಯೋಜನೆಗಳು ಕೈಗೂಡಬೇಕೆಂದರೆ, 13ನೇ ಆವೃತ್ತಿಯ ಐಪಿಎಲ್ ಆಯೋಜನೆಗೆ ಮುಂದಿನ ಎರಡು ವಾರಗಳಲ್ಲಿ ವೇದಿಕೆ ಸಿದ್ಧಗೊಳ್ಳಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿಯೂ ಅಗತ್ಯವಾಗಿದೆ.

    ಇದನ್ನೂ ಓದಿ: ಮೊಬೈಲ್​ ಕರೆಗಾಗಿ ಮರ ಏರಿದ್ದ ಅಂಪೈರ್​ ಊರಲ್ಲಿ ಈಗ ನೆಟ್​ವರ್ಕ್​ ಸಮಸ್ಯೆ ಇಲ್ಲ!

    ಅನಿಶ್ಚಿತತೆಯಲ್ಲಿ ದೇಶೀಯ ಕ್ರಿಕೆಟ್
    ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಆರಂಭಗೊಳ್ಳಬೇಕಿರುವ ದೇಶೀಯ ಕ್ರಿಕೆಟ್ ಟೂರ್ನಿಗಳ ಪ್ರಸಕ್ತ ವರ್ಷದ ಭವಿಷ್ಯ ಅನಿಶ್ಚಿತತೆಯಲ್ಲಿ ಮುಳುಗಿದೆ. ಪ್ರವಾಸಕ್ಕೆ ಸುರಕ್ಷಿತ ವಾತಾವರಣವಿದ್ದರಷ್ಟೇ ದೇಶೀಯ ಕ್ರಿಕೆಟ್ ಟೂರ್ನಿ ನಡೆಸಲು ಸಾಧ್ಯ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಐಪಿಎಲ್ ಆಯೋಜನೆಗೊಂಡರೆ ಆ ವೇಳೆ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವಂತಿಲ್ಲ. ಇದರಿಂದ ದೇಶೀಯ ಕ್ರಿಕೆಟ್ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ.

     ಬಿಸಿಸಿಐ ಸಿಇಒ ಆಗಿ ಹೇಮಂಗ್ ಅಮಿನ್
    ಭಾರತ ಕ್ರಿಕೆಟ್ ವೇಳಾಪಟ್ಟಿಗೆ ಕೋವಿಡ್-19ರ ಕರಿಛಾಯೆ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಹೇಮಂಗ್ ಅಮಿನ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೇಮಿಸಿದೆ. ರಾಹುಲ್ ಜೋಹ್ರಿ ರಾಜೀನಾಮೆಯಿಂದ ಈ ಹುದ್ದೆ ತೆರವಾಗಿತ್ತು. ಕಳೆದ ಹಲವು ವರ್ಷಗಳಿಂದ ಹೇಮಂಗ್ ಅಮಿನ್ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಮಂಡಳಿ ಹಾಗೂ-ಹೋಗುಗಳ ಬಗ್ಗೆ ಚೆನ್ನಾಗಿ ಪರಿಚಯವಿದೆ ಎಂದು ಮಂಡಳಿ ತಿಳಿಸಿದೆ. ಕಳೆದ ಗುರುವಾರ ಜೋಹ್ರಿ ರಾಜೀನಾಮೆಯನ್ನು ಬಿಸಿಸಿಐ ಅಂಗೀಕರಿಸಿತ್ತು. ಪ್ರಾಯೋಜಕತ್ವದ ಸಂಬಂಧಪಟ್ಟಂತೆ ಕೆಲವೊಂದು ಮುಖ್ಯವಾದ ಮಾಹಿತಿಯನ್ನು ಬಿಟ್ಟುಕೊಟ್ಟ ಆರೋಪದ ಹಿನ್ನೆಲೆಯಲ್ಲಿ ಜೋಹ್ರಿ ರಾಜೀನಾಮೆ ನೀಡಿದ್ದರು. ಅಮಿನ್ ಐಪಿಎಲ್ ಸಿಒಒ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts